Nashik TCS: Sexual harassment, conversion allegations reach Supreme Court
x

ನಾಸಿಕ್‌ನಲ್ಲಿರುವ ಟಿಸಿಎಸ್‌ ಕಂಪನಿ

Nashik TCS| ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಲೈಂಗಿಕ ಕಿರುಕುಳ, ಮತಾಂತರ ಆರೋಪ

ಬಲವಂತದ ಮತಾಂತರವು ರಾಷ್ಟ್ರೀಯ ಭದ್ರತೆ ಮತ್ತು ಏಕತೆಗೆ ಗಂಭೀರ ಬೆದರಿಕೆಯಾಗಿದೆ. ಮತಾಂತರ ತಡೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.


Click the Play button to hear this message in audio format

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರ ಆರೋಪಗಳು ಈಗ ದೇಶಾದ್ಯಂತ ಸಂಚಲನ ಮೂಡಿಸಿವೆ. ಈ ಪ್ರಕರಣದ ಹಿನ್ನೆಲೆ ಮೋಸದ ಮತಾಂತರವನ್ನು ನಿಯಂತ್ರಿಸಲು ಕಠಿಣ ಕಾನೂನು ರೂಪಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ರಾಜಕೀಯ ವಲಯದಲ್ಲೂ ವಾಕ್ಸಮರಕ್ಕೆ ಕಾರಣವಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಬಲವಂತದ ಮತಾಂತರವು ರಾಷ್ಟ್ರೀಯ ಭದ್ರತೆ ಮತ್ತು ಏಕತೆಗೆ ಗಂಭೀರ ಬೆದರಿಕೆಯಾಗಿದೆ. ಮತಾಂತರ ತಡೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು. ಸಂವಿಧಾನದ 25ನೇ ವಿಧಿಯು ಧರ್ಮದ ಪ್ರಚಾರಕ್ಕೆ ಅವಕಾಶ ನೀಡುತ್ತದೆಯೇ ಹೊರತು, ವಂಚನೆ ಅಥವಾ ಆಮಿಷದ ಮೂಲಕ ಮತಾಂತರ ಮಾಡುವ ಹಕ್ಕನ್ನಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

'ಕಾರ್ಪೊರೇಟ್ ಜಿಹಾದ್' ವಿರುದ್ಧ ರಾಣೆ ಕಿಡಿ

ಪ್ರಕರಣದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ನಿತೀಶ್ ರಾಣೆ, ರಾಜ್ಯದಲ್ಲಿ "ಕಾರ್ಪೊರೇಟ್ ಜಿಹಾದ್" ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ. ಉದ್ಯೋಗಗಳನ್ನು ಧಾರ್ಮಿಕ ಮತಾಂತರಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಜಿಹಾದಿ ಚಟುವಟಿಕೆ ತಡೆಯಲು ಕಾರ್ಪೊರೇಟ್ ಕಂಪನಿಗಳು ಮುಂದಿನ ದಿನಗಳಲ್ಲಿ ಹಿಂದೂ ಅಭ್ಯರ್ಥಿಗಳಿಗೆ ಮಾತ್ರ ಉದ್ಯೋಗದಲ್ಲಿ ಆದ್ಯತೆ ನೀಡುವ ನೀತಿ ಅಳವಡಿಸಿಕೊಳ್ಳಬೇಕು," ಎಂದು ಕರೆ ನೀಡಿದ್ದು, ಹಿಂದೂ ರಾಷ್ಟ್ರವನ್ನು ಬಲಪಡಿಸಲು ಆರ್ಥಿಕ ವಹಿವಾಟುಗಳನ್ನು ಹಿಂದೂಗಳ ನಡುವೆಯೇ ಸೀಮಿತಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ಎಚ್ಚರಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ನಾಸಿಕ್‌ನ ಟಿಸಿಎಸ್ ಘಟಕದ ಎಂಟು ಮಹಿಳಾ ಉದ್ಯೋಗಿಗಳು ನೀಡಿದ ಲೈಂಗಿಕ ಕಿರುಕುಳ ಮತ್ತು ಮತಾಂತರಕ್ಕೆ ಒತ್ತಡ ಹೇರಿದ ದೂರಿನನ್ವಯ ಪೊಲೀಸರು ಈಗಾಗಲೇ ಕಾರ್ಯಾಚರಣೆ ನಡೆಸಿದ್ದಾರೆ. ಒಬ್ಬ ಮಹಿಳಾ ಮ್ಯಾನೇಜರ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದ ತಕ್ಷಣ ಟಿಸಿಎಸ್ ಸಂಸ್ಥೆಯು ಏಳು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಲೈಂಗಿಕ ಕಿರುಕುಳದ ತನಿಖೆಗಾಗಿ ವಿಶೇಷ 'ಸತ್ಯಶೋಧನಾ ಸಮಿತಿ' ರಚಿಸಿದೆ.

2023ರಲ್ಲಿಯೇ ಸುಪ್ರೀಂಕೋರ್ಟ್ ಮತಾಂತರದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಟಾರ್ನಿ ಜನರಲ್ ಅವರ ನೆರವು ಕೋರಿತ್ತು. ಈಗ ಕಾರ್ಪೊರೇಟ್ ವಲಯಕ್ಕೆ ಈ ವಿವಾದ ವ್ಯಾಪಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read More
Next Story