
ಈ ದುರಂತದಲ್ಲಿ ಪ್ರಾಣಭೀತಿಯ ನಡುವೆಯೂ ನಾಲ್ಕು ವರ್ಷದ ಮಗುವನ್ನು ಎದೆಗಪ್ಪಿಕೊಂಡು ಪ್ರಾಣ ಬಿಟ್ಟ ತಾಯಿಯ ಶವ ಪತ್ತೆಯಾಗಿದ್ದು, ಎಲ್ಲರ ಕರುಳು ಹಿಂಡುವಂತಿದೆ.
ನರ್ಮದಾ ನದಿ ಕ್ರೂಸ್ ಬೋಟ್ ದುರಂತ: ಮಗುವನ್ನು ಅಪ್ಪಿಕೊಂಡೇ ಜಲಸಮಾಧಿಯಾದ ತಾಯಿ!
ದೆಹಲಿಯಿಂದ ಪ್ರವಾಸಕ್ಕೆ ಬಂದಿದ್ದ ನಾಲ್ವರ ಕುಟುಂಬವೊಂದು ಈ ದುರಂತದಲ್ಲಿ ಸಿಲುಕಿತ್ತು. ಹಠಾತ್ತಾಗಿ ಎದುರಾದ ಬಿರುಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬೋಟ್ ನಿಯಂತ್ರಣ ಕಳೆದುಕೊಂಡು ಮುಳುಗಲು ಆರಂಭಿಸಿತು.
ಮಧ್ಯಪ್ರದೇಶದ ಜಬಲ್ಪುರ ಸಮೀಪದ ಬರ್ಗಿ ಅಣೆಕಟ್ಟಿನ ಹಿನ್ನೀರಿನಲ್ಲಿರುವ ನರ್ಮದಾ ನದಿಯಲ್ಲಿ ಗುರುವಾರ ಸಂಭವಿಸಿದ ಭೀಕರ ಕ್ರೂಸ್ ಬೋಟ್ ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಪ್ರಾಣಭೀತಿಯ ನಡುವೆಯೂ ನಾಲ್ಕು ವರ್ಷದ ಮಗುವನ್ನು ಎದೆಗಪ್ಪಿಕೊಂಡು ಪ್ರಾಣ ಬಿಟ್ಟ ತಾಯಿಯ ಶವ ಪತ್ತೆಯಾಗಿದ್ದು, ಎಲ್ಲರ ಕರುಳು ಹಿಂಡುವಂತಿದೆ.
ದೆಹಲಿಯಿಂದ ಪ್ರವಾಸಕ್ಕೆ ಬಂದಿದ್ದ ನಾಲ್ವರ ಕುಟುಂಬವೊಂದು ಈ ದುರಂತದಲ್ಲಿ ಸಿಲುಕಿತ್ತು. ಹಠಾತ್ತಾಗಿ ಎದುರಾದ ಬಿರುಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬೋಟ್ ನಿಯಂತ್ರಣ ಕಳೆದುಕೊಂಡು ಮುಳುಗಲು ಆರಂಭಿಸಿತು. ಈ ವೇಳೆ ತಾಯಿ ತನ್ನ ನಾಲ್ಕು ವರ್ಷದ ಮಗುವನ್ನು ರಕ್ಷಿಸುವ ಹತಾಶ ಪ್ರಯತ್ನದಲ್ಲಿ ಒಂದೇ ಲೈಫ್ ಜಾಕೆಟ್ ಅನ್ನು ಇಬ್ಬರೂ ಧರಿಸಿ ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದರು. ಆದರೆ ವಿಧಿಯಾಟದ ಮುಂದೆ ಅವರ ಪ್ರಯತ್ನ ಫಲಿಸಲಿಲ್ಲ, ಇಬ್ಬರೂ ಕೊನೆಯುಸಿರೆಳೆದಿದ್ದಾರೆ.
ಅದೇ ದೋಣಿಯಲ್ಲಿದ್ದ ಇದೇ ಕುಟುಂಬದ ತಂದೆ ಮತ್ತು ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಬ್ಬ ಪ್ರತ್ಯಕ್ಷದರ್ಶಿ ಸೈಯದ್ ರಿಯಾಜ್ ಹುಸೇನ್ ಎಂಬುವವರು ಹೇಳುವಂತೆ, ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಅವರ ಪತ್ನಿ, ಅತ್ತೆ ಮತ್ತು ಮೊಮ್ಮಗ ನೀರಿನಲ್ಲಿ ಕೊಚ್ಚಿಹೋದರು.
ಕಾರ್ಯಾಚರಣೆ ಮತ್ತು ಭೀಕರತೆ
ಸುಮಾರು 30 ಪ್ರವಾಸಿಗರಿದ್ದ ಈ ಬೋಟ್ ಮುಳುಗಿದ ತಕ್ಷಣ, ಪ್ರವಾಸಿಗರು ಪ್ರಾಣಭಯದಿಂದ ಚೀರಾಡಿದ್ದಾರೆ. ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF), ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ 24 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಕ್ರೂಸ್ ಕ್ಯಾಪ್ಟನ್ ಮಹೇಶ್ ಪಟೇಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ತೀವ್ರತೆ, ಹವಾಮಾನ ಮುನ್ಸೂಚನೆ ಕಡೆಗಣನೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಶೋಧ ಕಾರ್ಯ ಶುಕ್ರವಾರವೂ ಮುಂದುವರಿದಿದೆ.

