ನೆಹರೂ ದಾಖಲೆ ಹಿಂದಿಕ್ಕಿದ ಮೋದಿ: ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ
x

ನೆಹರೂ ದಾಖಲೆ ಹಿಂದಿಕ್ಕಿದ ಮೋದಿ: ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ 4,399 ದಿನಗಳ ನಿರಂತರ ಅಧಿಕಾರಾವಧಿ ಪೂರ್ಣಗೊಳಿಸಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಭಾರತದ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ ಮೋದಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಹತ್ವದ ರಾಜಕೀಯ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ನಿರಂತರವಾಗಿ 4,399 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿ, ದೇಶದ ಅತಿ ದೀರ್ಘಾವಧಿ ನಿರಂತರ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ.

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಮೋದಿ, ಅದಾದ ಬಳಿಕ ನಿರಂತರವಾಗಿ ಅಧಿಕಾರದಲ್ಲಿದ್ದು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಅಧಿಕೃತವಾಗಿ ಗುರುತಿಸುವ ಸಲುವಾಗಿ ನವದೆಹಲಿಯ ಭಾರತ ಮಂಟಪಂನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ದ ಮಹತ್ವದ ಸಭೆ ನಡೆಯಲಿದೆ.

ಎನ್‌ಡಿಎ ಸಭೆಯಲ್ಲಿ ವಿಶೇಷ ಗೌರವ

ಭಾರತ ಮಂಟಪಂನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಎನ್‌ಡಿಎ ಆಡಳಿತವಿರುವ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸುವ ನಿರೀಕ್ಷೆಯಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ. ಸಭೆಯಲ್ಲಿ ಪ್ರಧಾನಿ ಮೋದಿ ಅವರ ಸಾಧನೆಯನ್ನು ಅಭಿನಂದಿಸಿ ವಿಶೇಷ ನಿರ್ಣಯವೊಂದನ್ನು ಅಂಗೀಕರಿಸುವ ಸಾಧ್ಯತೆಯಿದೆ.

ನೆಹರೂ ದಾಖಲೆ ಹಿಂದಿಕ್ಕಿದ ಮೋದಿ

ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರು 1952ರ ಮೊದಲ ಸಾರ್ವತ್ರಿಕ ಚುನಾವಣೆ ನಂತರ ಪ್ರಧಾನಿಯಾಗಿ ನಿರಂತರ ಸೇವೆ ಸಲ್ಲಿಸಿದ್ದರು. ಅದೇ ಅವಧಿಯನ್ನು ಮಾನದಂಡವಾಗಿ ಪರಿಗಣಿಸಿ ಈ ಹೋಲಿಕೆ ಮಾಡಲಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಒಟ್ಟಾರೆ 14 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಧಾನಿಯಾಗಿದ್ದರೂ, ಅವರ ಅಧಿಕಾರಾವಧಿ ನಿರಂತರವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿರಂತರ ಸೇವಾ ಅವಧಿಯ ದೃಷ್ಟಿಯಿಂದ ಮೋದಿ ಇದೀಗ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

'ವಿಕಸಿತ ಭಾರತ 2047' ಕುರಿತು ಚರ್ಚೆ

ಎನ್‌ಡಿಎ ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಜನರಿಗೆ ಯೋಜನೆಗಳ ಲಾಭ ತಲುಪಿಸುವ ಕಾರ್ಯಗಳ ಕುರಿತು ಪರಿಶೀಲನೆ ನಡೆಯಲಿದೆ. ಇದರ ಜೊತೆಗೆ 2047ರೊಳಗೆ 'ವಿಕಸಿತ ಭಾರತ' ನಿರ್ಮಾಣದ ಗುರಿ, ಆಡಳಿತಾತ್ಮಕ ಸುಧಾರಣೆಗಳು ಹಾಗೂ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ದೇಶ-ವಿದೇಶಗಳಿಂದ ಅಭಿನಂದನೆಗಳ ಮಹಾಪೂರ

ಪ್ರಧಾನಿ ಮೋದಿ ಅವರ ಈ ಸಾಧನೆಗೆ ದೇಶದ ರಾಜಕೀಯ ನಾಯಕರು, ಕೇಂದ್ರ ಸಚಿವರು, ವಿದೇಶಿ ಗಣ್ಯರು ಹಾಗೂ ಭಾರತೀಯ ವಲಸಿಗ ಸಮುದಾಯದಿಂದ ಅಭಿನಂದನೆಗಳು ಹರಿದುಬರುತ್ತಿವೆ.

ಶ್ರೀಲಂಕಾ ಅಧ್ಯಕ್ಷ ಅರುಣಾ ಕುಮಾರ ದಿಸ್ಸಾನಾಯಕೆ ಅವರು, ಭಾರತದ ಜನರು ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ನಿರಂತರವಾಗಿ ಇಟ್ಟಿರುವ ವಿಶ್ವಾಸದ ಪ್ರತೀಕವೇ ಈ ಸಾಧನೆ ಎಂದು ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ. ರಾಜಕೀಯವಾಗಿ ಮಾತ್ರವಲ್ಲದೆ, ಆಡಳಿತ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ ವೃದ್ಧಿಯ ಹಿನ್ನೆಲೆಯಲ್ಲಿ ಮೋದಿ ಅವರ ಈ ದಾಖಲೆಯು ವಿಶೇಷ ಮಹತ್ವ ಪಡೆದುಕೊಂಡಿದೆ.

Read More
Next Story