ಪ್ರಶ್ನೆಪತ್ರಿಕೆ ಲೀಕ್‌ ತಡೆಗೆ ಕೇಂದ್ರದಿಂದ ಮಾಸ್ಟರ್‌ ಪ್ಲ್ಯಾನ್‌- ಇಂದು ಕ್ಯಾಬಿನೆಟ್‌ ಸಭೆ
x

ಪ್ರಶ್ನೆಪತ್ರಿಕೆ ಲೀಕ್‌ ತಡೆಗೆ ಕೇಂದ್ರದಿಂದ ಮಾಸ್ಟರ್‌ ಪ್ಲ್ಯಾನ್‌- ಇಂದು ಕ್ಯಾಬಿನೆಟ್‌ ಸಭೆ

ಹೊಸ ತಿದ್ದುಪಡಿಗಳ ಮೂಲಕ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದ ತಪ್ಪಿತಸ್ಥರಿಗೆ ಹೆಚ್ಚು ವರ್ಷಗಳ ಜೈಲು ಶಿಕ್ಷೆ, ಕೋಟಿಗಟ್ಟಲೆ ದಂಡ ಹಾಗೂ ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸುವ ಕಠಿಣ ನಿಯಮಗಳನ್ನು ತರಲಾಗುತ್ತಿದೆ.


ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಗೆ ಶಾಶ್ವತ ತಡೆ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತ್ಯಂತ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಇಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ-2024' ಗೆ ಪ್ರಮುಖ ತಿದ್ದುಪಡಿಗಳನ್ನು ತರಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ತಿದ್ದುಪಡಿಗಳ ಮೂಲಕ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದ ತಪ್ಪಿತಸ್ಥರಿಗೆ ಹೆಚ್ಚು ವರ್ಷಗಳ ಜೈಲು ಶಿಕ್ಷೆ, ಕೋಟಿಗಟ್ಟಲೆ ದಂಡ ಹಾಗೂ ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸುವ ಕಠಿಣ ನಿಯಮಗಳನ್ನು ತರಲಾಗುತ್ತಿದೆ.

ತಿದ್ದುಪಡಿಯ ಪ್ರಮುಖ ಅಂಶಗಳು

• ಕಟ್ಟುನಿಟ್ಟಿನ ಜೈಲು ಶಿಕ್ಷೆ ಮತ್ತು ದಂಡ: ಹಾಲಿ ಇರುವ ಕಾನೂನಿಗಿಂತಲೂ ತೀವ್ರ ಸ್ವರೂಪದ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಚಿಂತಿಸಿದೆ.

• ಒಂದು ವರ್ಷದೊಳಗೆ ತೀರ್ಪು: ಪೇಪರ್ ಲೀಕ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಗರಿಷ್ಠ 1 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯೊಳಗೆ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಕಾಯ್ದಿರಿಸಲು ಗಡುವು ನಿಗದಿಪಡಿಸುವ ಸಾಧ್ಯತೆಯಿದೆ.

• ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ: ಶೀಘ್ರ ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಈಗಾಗಲೇ ಘೋಷಿಸಿದ್ದು, ಅದಕ್ಕೆ ಸೂಕ್ತ ಕಾನೂನು ಚೌಕಟ್ಟು ನೀಡಲಾಗುತ್ತಿದೆ.

ಹಾಲಿ ಇರುವ ಕಾಯ್ದೆಯಲ್ಲೇನಿದೆ?

ಜೂನ್ 2024ರಲ್ಲಿ ಮೋದಿ ಸರ್ಕಾರ ತಂದಿದ್ದ 'ಸಾರ್ವಜನಿಕ ಪರೀಕ್ಷಾ ಕಾಯ್ದೆ-2024' ಪ್ರಕಾರ, NEET ಮತ್ತು JEE ಯಂತಹ ಪರೀಕ್ಷೆಗಳಲ್ಲಿ ಅಕ್ರಮ ಎಸಗುವ ವ್ಯಕ್ತಿಗಳಿಗೆ 3 ರಿಂದ 5 ವರ್ಷ ಜೈಲು ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತಿತ್ತು. ಅಲ್ಲದೆ, ಸಂಘಟಿತ ದಂಧಕೋರರಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 1 ಕೋಟಿ ರೂ. ದಂಡ ವಿಧಿಸಲು ಅವಕಾಶವಿತ್ತು. ಆದರೆ, ನೆರೆ ರಾಜ್ಯಗಳಿಗೂ ಹಬ್ಬಿರುವ ದಂಧೆಕೋರರ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಈ ಕಾನೂನನ್ನು ಮತ್ತಷ್ಟು ಶಕ್ತಿಗೊಳಿಸಲು ಸರ್ಕಾರ ಮುಂದಾಗಿದೆ.

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯ

ಮತ್ತೊಂದೆಡೆ, ಶಿಕ್ಷಣ ರಂಗದ ಸುಧಾರಣೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪಾರದರ್ಶಕತೆಗೆ ಆಗ್ರಹಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹಿರಿಯ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಕೇಂದ್ರ ಸರ್ಕಾರದ ಭರವಸೆಯ ಬಳಿಕ ತಮ್ಮ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.

ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ವಾಂಗ್ಚುಕ್ ಅವರನ್ನು ಭೇಟಿಯಾದ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರು ಸರ್ಕಾರದ ಭರವಸೆಯ ಪತ್ರವನ್ನು ಹಸ್ತಾಂತರಿಸಿದರು. NEET ಪೇಪರ್ ಲೀಕ್ ವಿವಾದದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಸಂಸತ್ತಿನಲ್ಲಿ ಪರೀಕ್ಷಾ ಸುಧಾರಣೆ ಬಗ್ಗೆ ಚರ್ಚಿಸಲು ಕೇಂದ್ರ ಒಪ್ಪಿಕೊಂಡಿದೆ.

Read More
Next Story