
ಸಿಜೆಐಯನ್ನು ವಿರೋಧಿಸಿದ್ದ ವಿದ್ಯಾರ್ಥಿಗಳ ನೋಂದಣಿ ತಡೆ ಹಿಡಿದ ಬಾರ್ ಕೌನ್ಸಿಲ್- ಸುಪ್ರೀಂ ಕೋರ್ಟ್ ಗರಂ
ಹೈದರಾಬಾದ್‌ನ ಪ್ರತಿಷ್ಠಿತ NALSAR 2026ರ ಬ್ಯಾಚ್ ಪದವೀಧರರ ನೋಂದಣಿಗೆ BCI ನೀಡಿದ್ದ ತಡೆ ಆದೇಶಕ್ಕೆ CJI ಸೂರ್ಯಕಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ BCI ಆದೇಶ ಹಿಂಪಡೆದಿದೆ.
ಹೈದರಾಬಾದ್‌ನ ಪ್ರತಿಷ್ಠಿತ ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾನಿಲಯದ 2026ರ ಬ್ಯಾಚ್‌ನ ಪದವೀಧರರ ನೋಂದಣಿಯನ್ನು ತಡೆಹಿಡಿಯಲು ನಿರ್ದೇಶಿಸಿದ್ದ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI)ದ ನಡೆಗೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂರ್ಯಕಾಂತ್ ಅವರು ನಲ್ಸಾರ್ ವಿಶ್ವ ವಿದ್ಯಾನಿಲಯದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಇದೇ ವಿವಿಯ ವಿದ್ಯಾರ್ಥಿಗಳು ಹಾಗೂ ಕೆಲವು ಪ್ರಾಧ್ಯಾಪಕರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕ್ರಮ ಕೈಗೊಂಡಿತ್ತು. ಆದರೆ ಇದೀಗ ಬಾರ್ ಕೌನ್ಸಿಲ್ ನಡೆಗೆ ಸಿಜೆಐ ಸೂರ್ಯಕಾಂತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿರಿಯ ವಕೀಲ ಕೆ. ಪರಮೇಶ್ವರ್ ಅವರು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷರ ನಿರ್ದೇಶನಗಳ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಯನ್ನು ಮೌಖಿಕವಾಗಿ ಪ್ರಸ್ತಾಪಿಸಿದಾಗ, ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಮಧ್ಯಪ್ರವೇಶಿಸದಂತೆ BCI ಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿರುವ ಸೂರ್ಯಕಾಂತ್, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಥವಾ ಅಧ್ಯಾಪಕರ ವಿರುದ್ಧ ಇಂತಹ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.
ಪ್ರತಿಭಟನೆ ವಿದ್ಯಾರ್ಥಿಗಳ ಹಕ್ಕು, BCI ಮಧ್ಯಪ್ರವೇಶ ಅನಗತ್ಯ
ವಿಶ್ವವಿದ್ಯಾನಿಲಯದ ಪದವಿಪ್ರದಾನ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಭಾಗವಹಿಸುವುದನ್ನು ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಅಭಿಯಾನ ನಡೆಸಿದ್ದರು. ಈ ಕುರಿತು ತನಿಖೆ ಕಾಯ್ದಿರಿಸಿ, 2026ರ ಬ್ಯಾಚ್‌ನ ಪದವೀಧರರನ್ನು ಯಾವುದೇ ರಾಜ್ಯ ಬಾರ್ ಕೌನ್ಸಿಲ್‌ಗಳು ನೋಂದಾಯಿಸಿಕೊಳ್ಳಬಾರದು ಎಂದು BCI ಆದೇಶಿಸಿತ್ತು.
ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು, "ಇದು ಸಂಪೂರ್ಣವಾಗಿ ಅನಗತ್ಯವಾದ ಕ್ರಮ. ನಾನೂ ಕೂಡ ನನ್ನ ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ; ಇದರಲ್ಲಿ ಮಧ್ಯಪ್ರವೇಶಿಸಲು BCI ಯಾರು?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
BCI ಆದೇಶ ಹಿಂಪಡೆತ
ಸುಪ್ರೀಂ ಕೋರ್ಟ್‌ನ ತೀವ್ರ ಆಕ್ಷೇಪದ ಬೆನ್ನಲ್ಲೇ BCI ತನ್ನ ನಿರ್ಧಾರವನ್ನು ಹಿಂಪಡೆದುಕೊಂಡಿದೆ. ನಲ್ಸಾರ್ ವಿಶ್ವವಿದ್ಯಾನಿಲಯದ ಬಹುಪಾಲು ವಿದ್ಯಾರ್ಥಿಗಳು ನಿರಪರಾಧಿಗಳಾಗಿದ್ದು, ಮುಖ್ಯ ನ್ಯಾಯಮೂರ್ತಿಗಳಿಗೆ ಗೌರವ ನೀಡದಿರುವ ಯಾವುದೇ ಯೋಜನೆಯಲ್ಲೂ ಭಾಗಿಯಾಗಿಲ್ಲ ಎಂಬ ಹೊಸ ಮಾಹಿತಿ ಲಭ್ಯವಾಗಿದೆ ಎಂದು BCI ತಿಳಿಸಿದೆ.
BCI ತೀರ್ಮಾನಕ್ಕೆ SCBA ತೀವ್ರ ಆಕ್ಷೇಪ
ಇದಕ್ಕೂ ಮೊದಲು, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು BCI ಹೊರಡಿಸಿದ್ದ ಈ ಸುತ್ತೋಲೆಯನ್ನು ಸಂವಿಧಾನಬಾಹಿರ, ಕಾನೂನುಬಾಹಿರ ಎಂದು ತೀವ್ರವಾಗಿ ಖಂಡಿಸಿದ್ದರು.
ಆಗಸ್ಟ್ 13 ರಂದು BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರಿಗೆ ಬರೆದ ಪತ್ರದಲ್ಲಿ ವಿಕಾಸ್ ಸಿಂಗ್, ವಿಶ್ವವಿದ್ಯಾನಿಲಯಗಳು ಮುಕ್ತ ಆಲೋಚನೆ ಮತ್ತು ಚರ್ಚೆಯ ಕೇಂದ್ರಗಳಾಗಿವೆ. ವಿದ್ಯಾರ್ಥಿಗಳು ತಮ್ಮ ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿದ್ದಕ್ಕಾಗಿ ಅವರ ವೃತ್ತಿಜೀವನದ ಮೇಲೆ ನಿಷೇಧ ಹೇರುವುದು ಬೆದರಿಕೆಗೆ ಸಮಾನ. ಕೇವಲ ಸಂವಿಧಾನಾತ್ಮಕ ಅಧಿಕಾರದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಕಾರಣಕ್ಕೆ ವಕೀಲ ವೃತ್ತಿಗೆ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಪ್ರಸ್ತುತ ಸುಪ್ರೀಂ ಕೋರ್ಟ್ ಈ ಸುತ್ತೋಲೆಗಳ ಕುರಿತು BCI ಯಿಂದ ಅಧಿಕೃತ ಸ್ಪಷ್ಟನೆ ಹಾಗೂ ವರದಿಯನ್ನು ಕೋರಿದೆ.

