
ನಾಗಪುರದಲ್ಲಿ ಕ್ಲೋರಿನ್ ಅನಿಲ ಸೋರಿಕೆ: ನಿದ್ದೆಯಲ್ಲಿದ್ದ ಜನರಿಗೆ ಉಸಿರಾಟ ಸಮಸ್ಯೆ, ಆತಂಕ
ಮಹಾರಾಷ್ಟ್ರದ ನಾಗಪುರ ನಗರದ ಹೊರವಲಯದಲ್ಲಿನ ಜಲ ಶುದ್ಧೀಕರಣ ಘಟಕದಲ್ಲಿ ಸಂಭವಿಸಿದ ಕ್ಲೋರಿನ್ ಅನಿಲ ಸೋರಿಕೆಯು ಆತಂಕದ ವಾತಾವರಣ ಸೃಷ್ಟಿಸಿತು. ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದ ನಾಗಪುರ ನಗರದ ಹೊರವಲಯದಲ್ಲಿರುವ ಗೋಧನಿ ಗ್ರಾಮದ ಜಲ ಶುದ್ಧೀಕರಣ ಘಟಕದಲ್ಲಿ ಸಂಭವಿಸಿದ ಭೀಕರ ಕ್ಲೋರಿನ್ ಅನಿಲ ಸೋರಿಕೆಯು ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು. ನಿದ್ದೆಯಲ್ಲಿದ್ದ ಜನರನ್ನು ಬೆಚ್ಚಿಬೀಳಿಸಿದ ಈ ಘಟನೆಯಲ್ಲಿ ಹಲವರು ಉಸಿರಾಟದ ತೊಂದರೆಯಿಂದ ಬಳಲಿದ್ದು, ಆಸ್ಪತ್ರೆಗೆ ದಾಖಲಾಗುವಂತಾಯಿತು.
ಘಟನೆಯು ಮಧ್ಯರಾತ್ರಿ ನಡೆದಿದ್ದು, ಗೋಧನಿ ಗ್ರಾಮದಲ್ಲಿರುವ ನಾಗಪುರ ಮುನ್ಸಿಪಲ್ ಕಾರ್ಪೊರೇಶನ್‌ಗೆ ಸೇರಿದ ಜಲ ಶುದ್ಧೀಕರಣ ಘಟಕದಲ್ಲಿ ಅಳವಡಿಸಲಾಗಿದ್ದ 900 ಕೆಜಿ ಸಾಮರ್ಥ್ಯದ ಕ್ಲೋರಿನ್ ಅನಿಲ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗತೊಡಗಿದೆ. ಈ ಘಟಕವು ಜನವಸತಿ ಪ್ರದೇಶಕ್ಕೆ ಹತ್ತಿರವಿರುವುದರಿಂದ, ಅನಿಲವು ಕ್ಷಣಾರ್ಧದಲ್ಲಿ ಗಾಳಿಯಲ್ಲಿ ಬೆರೆತು ಸುತ್ತಮುತ್ತಲಿನ ಮನೆಗಳಿಗೆ ನುಗ್ಗಿದೆ. ಮಧ್ಯರಾತ್ರಿಯಾದ್ದರಿಂದ ಜನರು ಗಾಢ ನಿದ್ರೆಯಲ್ಲಿದ್ದರು. ಇದ್ದಕ್ಕಿದ್ದಂತೆ ಕಣ್ಣು ಉರಿ, ಕೆಮ್ಮು ಮತ್ತು ಉಸಿರಾಟದ ತೀವ್ರ ತೊಂದರೆಯಿಂದಾಗಿ ಜನರು ಎಚ್ಚೆತ್ತುಕೊಂಡರು. ಏನಾಗುತ್ತಿದೆ ಎಂದು ಅರಿವಾಗುವ ಮುನ್ನವೇ ಅನಿಲದ ತೀವ್ರತೆಯು ಹೆಚ್ಚಾಗಿದ್ದು, ಗಾಬರಿಗೊಂಡ ನಿವಾಸಿಗಳು ಪ್ರಾಣ ರಕ್ಷಣೆಗಾಗಿ ಮನೆಯಿಂದ ಹೊರಗೆ ಓಡತೊಡಗಿದರು. ಇದು ಇಡೀ ಪ್ರದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತು.
ತ್ವರಿತ ಕಾರ್ಯಾಚರಣೆ ಮತ್ತು ರಕ್ಷಣೆ
ಅನಿಲ ಸೋರಿಕೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ನಾಗಪುರ ಮುನ್ಸಿಪಲ್ ಕಾರ್ಪೊರೇಶನ್‌ನ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಅನಿಲವನ್ನು ತಡೆಗಟ್ಟಲು ಅಗತ್ಯವಿರುವ ವಿಶೇಷ ಉಪಕರಣಗಳೊಂದಿಗೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಇದೇ ವೇಳೆ, ನಾಗಪುರಕ್ಕೆ ಕುಡಿಯುವ ನೀರು ಪೂರೈಸುವ ಆರೆಂಜ್ ಸಿಟಿ ವಾಟರ್ ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡವನ್ನು ಕೂಡಲೇ ಸ್ಥಳಕ್ಕೆ ಕರೆಸಲಾಯಿತು. ಮಂಕಾಪುರ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಸ್ಥಳದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದನ್ನು ಅರಿತ ಪೊಲೀಸರು ಕೂಡಲೇ ಕಾರ್ಯಾಚರಣೆ ಆರಂಭಿಸಿದರು. ಘಟನಾ ಸ್ಥಳದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿದ್ದ ನಿವಾಸಿಗಳನ್ನು ಎಚ್ಚೆತ್ತುಕೊಂಡು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಆ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಯಿತು, ಇದರಿಂದ ಅನಿಲದ ಪ್ರಭಾವ ಮತ್ತಷ್ಟು ಪ್ರದೇಶಕ್ಕೆ ಹರಡದಂತೆ ತಡೆಯಲಾಯಿತು.
ಸೋರಿಕೆ ತಡೆಗಟ್ಟಿದ್ದು ಹೇಗೆ?
ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಸುದೀರ್ಘ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಒಸಿಡಬ್ಲ್ಯು ಸಿಬ್ಬಂದಿ ಬೆಳಿಗ್ಗೆ 5.30 ರ ಸುಮಾರಿಗೆ ಸೋರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು. ಸೋರಿಕೆಯಾಗುತ್ತಿದ್ದ ಕ್ಲೋರಿನ್ ಸಿಲಿಂಡರ್ ಅನ್ನು ಕಾಸ್ಟಿಕ್ ಸೋಡಾ ಮಿಶ್ರಿತ ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸುವ ಮೂಲಕ ಅನಿಲದ ತೀವ್ರತೆಯನ್ನು ತಟಸ್ಥಗೊಳಿಸಲಾಯಿತು. ಈ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಲಾಯಿತು.
ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ
ಅನಿಲ ಸೋರಿಕೆಯಿಂದಾಗಿ ಉಸಿರಾಟದ ತೊಂದರೆ ಅನುಭವಿಸಿದ ಅನೇಕ ಜನರನ್ನು ಪೊಲೀಸರು ಮತ್ತು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಹಲವರು ಸ್ವತಃ ಭಯಭೀತರಾಗಿ ತಾವೇ ಆಸ್ಪತ್ರೆಗಳಿಗೆ ತೆರಳಿದರು. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನವರಿಗೆ ಚಿಕಿತ್ಸೆಯ ನಂತರ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ. ಘಟನೆಯ ನಂತರ ನಾಗಪುರ ಪೊಲೀಸ್ ಆಯುಕ್ತಾಲಯ ಮತ್ತು ಸ್ಥಳೀಯ ಆಡಳಿತವು ನಿವಾಸಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಕಿವಿಗೊಡದಂತೆ ಮತ್ತು ಭಯಭೀತರಾಗದಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅನಿಲ ಸೋರಿಕೆಯಾಗಲು ನಿರ್ದಿಷ್ಟ ಕಾರಣವೇನು ಎಂಬ ಬಗ್ಗೆ ತಾಂತ್ರಿಕ ತನಿಖೆಗೆ ಆದೇಶಿಸಲಾಗಿದ್ದು, ನಿರ್ವಹಣೆಯಲ್ಲಿ ಲೋಪವಾಗಿದೆಯೇ ಅಥವಾ ಸಿಲಿಂಡರ್ ಹಳೆಯದಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ನಗರದ ಮಧ್ಯಭಾಗದಲ್ಲಿ ಇಂತಹ ಅಪಾಯಕಾರಿ ಅನಿಲಗಳನ್ನು ಸಂಗ್ರಹಿಸುವಾಗ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅನಿಲ ಸೋರಿಕೆಯಾದಾಗ ತಕ್ಷಣಕ್ಕೆ ಅಲಾರಾಂ ಅಥವಾ ಎಚ್ಚರಿಕೆ ನೀಡುವ ವ್ಯವಸ್ಥೆ ಇಲ್ಲದಿರುವುದು ಸ್ಥಳೀಯ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಜಲ ಶುದ್ಧೀಕರಣ ಘಟಕಗಳಲ್ಲಿ ಉನ್ನತ ಮಟ್ಟದ ಭದ್ರತಾ ತಪಾಸಣೆ ನಡೆಸಬೇಕೆಂದು ಆಗ್ರಹಗಳು ಕೇಳಿಬಂದಿವೆ.

