
ಸಚಿವ ಗಿರೀಶ್ ಮಹಾಜನ್ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳೆ
"ನಿಮ್ಮಿಂದಲೇ ಟ್ರಾಫಿಕ್ ಜಾಮ್... ಗೆಟ್‌ಔಟ್" - ಸಚಿವನನ್ನೇ ದಬಾಯಿಸಿದ ಮಹಿಳೆ- ವಿಡಿಯೊ ವೈರಲ್
ಮುಂಬೈನ ವರ್ಲಿಯಲ್ಲಿ ಬಿಜೆಪಿ ರ್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್‌ನಿಂದ ಆಕ್ರೋಶಗೊಂಡ ಮಹಿಳೆಯೊಬ್ಬರು ಸಚಿವ ಗಿರೀಶ್ ಮಹಾಜನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂಬೈನ ವರ್ಲಿ ಭಾಗದಲ್ಲಿ ಆಯೋಜಿಸಲಾಗಿದ್ದ ರಾಜಕೀಯ ರ್ಯಾಲಿಯಿಂದ ಉಂಟಾದ ತೀವ್ರ ಸಂಚಾರ ದಟ್ಟಣೆಯನ್ನು ವಿರೋಧಿಸಿ ಮಹಿಳೆಯೊಬ್ಬರು ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಹಾಗೂ ಪೊಲೀಸರನ್ನು ನೇರವಾಗಿ ಪ್ರಶ್ನಿಸಿರುವ ಘಟನೆ ನಡೆದಿದೆ. ಮಹಿಳಾ ಮೀಸಲಾತಿ ಮಸೂದೆಯ ವಿಚಾರವಾಗಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ವಿರುದ್ಧ ಆಡಳಿತಾರೂಢ ಬಿಜೆಪಿ ವತಿಯಿಂದ ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ವರ್ಲಿಯ ಜಂಬೋರಿ ಮೈದಾನದಿಂದ ಪ್ರಾರಂಭವಾಗಬೇಕಿದ್ದ ಈ ಮೆರವಣಿಗೆಯು ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾದ ಕಾರಣ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ತನ್ನ ಮಗುವನ್ನು ಶಾಲೆಯಿಂದ ಕರೆತರಲು ಕಾರಿನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಅವರು ಕಾರಿನಿಂದ ಇಳಿದು ನೇರವಾಗಿ ಪ್ರತಿಭಟನಾಕಾರರ ನಡುವೆ ನುಗ್ಗಿ ಸಚಿವ ಗಿರೀಶ್ ಮಹಾಜನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಕಿಡಿಕಾರಿದ ಅವರು, "ಇಲ್ಲಿಂದ ಹೊರಡಿ, ಪಕ್ಕದಲ್ಲೇ ಖಾಲಿ ಮೈದಾನವಿದ್ದರೂ ರಸ್ತೆಯಲ್ಲೇಕೆ ಜನರಿಗೆ ತೊಂದರೆ ಕೊಡುತ್ತಿದ್ದೀರಿ?" ಎಂದು ಪ್ರಶ್ನಿಸಿದರು. ಅಲ್ಲದೆ, ಮಧ್ಯಪ್ರವೇಶಿಸಲು ಬಂದ ಪೊಲೀಸ್ ಅಧಿಕಾರಿಗಳ ಮೇಲೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಅವರು, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಬೇಕೆಂದು ಪಟ್ಟು ಹಿಡಿದರು. ಕೊನೆಗೆ ಪೊಲೀಸರು ಆಕೆಯನ್ನು ರಸ್ತೆಯ ಪಕ್ಕಕ್ಕೆ ಕರೆದೊಯ್ದು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಸಚಿವ ಮಹಾಜನ್ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ, ಮಹಿಳೆ ತನ್ನ ಆಕ್ರೋಶವನ್ನು ಮುಂದುವರಿಸಿದರು. ಪೊಲೀಸ್ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಧ್ವನಿ ಕಡಿಮೆ ಮಾಡುವಂತೆ ಸೂಚಿಸಿದಾಗ, ತಾನು ಕೇವಲ ಸಾಮಾನ್ಯ ಜನರ ಪರವಾಗಿ ಮಾತನಾಡುತ್ತಿರುವುದಾಗಿ ಅವರಿಗೆ ಎದುರುತ್ತರ ನೀಡಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಡಳಿತ ಪಕ್ಷವು ಸಾಮಾನ್ಯ ನಾಗರಿಕರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ವರ್ಲಿಯ ಜಂಬೂರಿ ಮೈದಾನದಿಂದ ಎನ್‌ಎಸ್‌ಸಿಐ ಡೋಮ್‌ವರೆಗೆ ಬಿಜೆಪಿ ಈ ಮೆರವಣಿಗೆಯನ್ನು ಆಯೋಜಿಸಿತ್ತು.

