Mumbai-Pune Expressway closed: Train services also cancelled due to heavy rains, landslides
x

ಹೆದ್ದಾರಿಯಲ್ಲಿ ಕುಸಿದ ಮಣ್ಣನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವುಗೊಳಿಸಿದರು.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಬಂದ್: ಭಾರಿ ಮಳೆ, ಭೂಕುಸಿತದಿಂದ ರೈಲು ಸಂಚಾರವೂ ರದ್ದು

ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದ್ದ 13 ಕಿ.ಮೀ ಉದ್ದದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ 'ಮಿಸ್ಸಿಂಗ್ ಲಿಂಕ್' ಬೈಪಾಸ್ ಮಾರ್ಗದಲ್ಲಿ, ಸುರಂಗ 2ರ ನಿರ್ಗಮನದ ಬಳಿ ಸೋಮವಾರ ಮುಂಜಾನೆ ಭೂಕುಸಿತ ಸಂಭವಿಸಿದೆ.


Click the Play button to hear this message in audio format

ಭಾರಿ ಮಳೆ, ಪ್ರವಾಹ ಪರಿಸ್ಥಿತಿ ಹಾಗೂ ಸರಣಿ ಭೂಕುಸಿತಗಳ ಹಿನ್ನೆಲೆಯಲ್ಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಹಳೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಸೋಮವಾರ (ಜು. 6) ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಸಾರ್ವಜನಿಕರು ಈ ಮಾರ್ಗದಲ್ಲಿ ಪ್ರಯಾಣಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಹಳೆಯ ಹೆದ್ದಾರಿಯ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಲೋಹಗಡ್ ಕೋಟೆ ಬಳಿಯ ಪಟಾನ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಒಂದು ಕುಟುಂಬ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿರುವುದರಿಂದ ಪುಣೆ ಜಿಲ್ಲಾಡಳಿತವು ಎಲ್ಲಾ ಶಾಲೆಗಳಿಗೆ ತುರ್ತು ರಜೆ ಘೋಷಿಸಿದೆ.

ಹೆದ್ದಾರಿಯಲ್ಲಿ 'ಮಿಸ್ಸಿಂಗ್ ಲಿಂಕ್' ಅಸ್ತವ್ಯಸ್ತ

ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದ್ದ 13 ಕಿ.ಮೀ ಉದ್ದದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ 'ಮಿಸ್ಸಿಂಗ್ ಲಿಂಕ್' ಬೈಪಾಸ್ ಮಾರ್ಗದಲ್ಲಿ, ಸುರಂಗ 2ರ ನಿರ್ಗಮನದ ಬಳಿ ಸೋಮವಾರ ಮುಂಜಾನೆ ಭೂಕುಸಿತ ಸಂಭವಿಸಿದೆ. ಅಲ್ಲದೆ ಕ್ಯಾರೇಜ್‌ವೇ ಮೇಲೆ ಕಾಂಕ್ರೀಟ್ ಕಂಬ ಬಿದ್ದಿರುವುದರಿಂದ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಇದರಿಂದಾಗಿ ಲೋನಾವಾಲ ಮತ್ತು ಖಂಡಾಲಾ ಘಾಟ್ ವಿಭಾಗದಲ್ಲಿ ಕಿಲೋಮೀಟರ್‌ಗಟ್ಟಲೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಗಂಟೆಗಟ್ಟಲೆ ಸಿಲುಕಿಕೊಳ್ಳುವಂತಾಗಿದೆ. ಮಾವಲ್ ಮತ್ತು ತಮ್ಹಿನಿ ಘಾಟ್‌ನಲ್ಲೂ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರ್ಯಾಯ ಮಾರ್ಗಗಳ ಮೇಲೂ ತೀವ್ರ ಪರಿಣಾಮ ಬೀರಿದೆ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ರೈಲುಗಳು ರದ್ದು

ರಸ್ತೆ ಮಾರ್ಗದ ಜೊತೆಗೆ ರೈಲ್ವೆ ಸಂಪರ್ಕವೂ ಕಡಿತಗೊಂಡಿದೆ. ಕರ್ಜತ್-ಲೋನಾವಾಲ ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಮತ್ತು ಮಂಕಿ ಹಿಲ್ ಬಳಿ ಮುಂಜಾನೆ 3ರ ಸುಮಾರಿಗೆ ಭಾರಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಮುಂಬೈ-ಪುಣೆ ರೈಲು ಮಾರ್ಗದ ಮೂರೂ ಹಳಿಗಳು ಬಂದ್ ಆಗಿವೆ. ಇಂದ್ರಯಾಣಿ ಎಕ್ಸ್‌ಪ್ರೆಸ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಡೆಕ್ಕನ್ ಕ್ವೀನ್ ಮತ್ತು ಡೆಕ್ಕನ್ ಎಕ್ಸ್‌ಪ್ರೆಸ್, ಪ್ರಗತಿ ಎಕ್ಸ್‌ಪ್ರೆಸ್ ಹಾಗೂ ಸಿಂಹಗಡ್ ಎಕ್ಸ್‌ಪ್ರೆಸ್ ರೈಲುಗಳು ರದ್ದಾಗಿವೆ. ಅನೇಕ ದೂರದ ರೈಲುಗಳನ್ನು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದ್ದು, ರೈಲ್ವೆ ಇಲಾಖೆಯು ಯುದ್ಧೋಪಾದಿಯಲ್ಲಿ ಹಳಿಗಳ ದುರಸ್ತಿ ಕಾರ್ಯ ನಡೆಸುತ್ತಿದೆ.

ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ನಾಗರಿಕರು ತುರ್ತು ಅಗತ್ಯವಿಲ್ಲದಿದ್ದರೆ ಮುಂಬೈ ಮತ್ತು ಪುಣೆ ನಡುವೆ ಯಾವುದೇ ಪ್ರಯಾಣ ಕೈಗೊಳ್ಳಬಾರದು. ಸರ್ಕಾರ ಮತ್ತು ಸಂಚಾರ ಪೊಲೀಸರು ನೀಡುವ ಇತ್ತೀಚಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story