
“ಮತ್ತೆ ಬಂದ್ರೆ ಬ್ಯಾಗ್‌ನಲ್ಲಿ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀವಿ”- ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಬೆದರಿಕೆ
ಈ ವಿಡಿಯೊವನ್ನು ಹಂಚಿಕೊಂಡಿರುವ ಮುಂಬೈ ಕಾಂಗ್ರೆಸ್, "ಈ ವಿಡಿಯೊ ನಿಜವಾಗಿದ್ದರೆ, ಇದು ವಿದ್ಯಾರ್ಥಿಗಳನ್ನು ಬೆದರಿಸುವ ಪ್ರಯತ್ನ ಮಾತ್ರವಲ್ಲ, ಪ್ರಜಾಪ್ರಭುತ್ವದ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ" ಎಂದು ಆರೋಪಿಸಿದೆ.
NEET-UG 2026 ಪೇಪರ್ ಲೀಕ್ ವಿರೋಧಿಸಿ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಮುಂಬೈ ಪೊಲೀಸರ ವರ್ತನೆ ಹೊಸ ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ "ಮತ್ತೆ ಪ್ರತಿಭಟನೆಗೆ ಬಂದರೆ ನಿಮ್ಮ ಬ್ಯಾಗ್‌ನಲ್ಲಿ ಡ್ರಗ್ಸ್ ಇಟ್ಟು ನಕಲಿ ಪ್ರಕರಣ ದಾಖಲಿಸುತ್ತೇನೆ" ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಮುಂಬೈ ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೊ ವೈರಲ್ ಆಗಿದ್ದು, ಘಟನೆ ಬಗ್ಗೆ ಮುಂಬೈ ಪೊಲೀಸರು ಇಲಾಖಾ ತನಿಖೆ ಆರಂಭಿಸಿದ್ದಾರೆ.
ವೈರಲ್ ವಿಡಿಯೊದಲ್ಲಿ ಏನಿದೆ?
ವಿಡಿಯೊದಲ್ಲಿ ಪ್ರತಿಭಟನಾ ಸ್ಥಳದಿಂದ ವಶಕ್ಕೆ ಪಡೆದಿರುವಂತೆ ಕಾಣುವ ಕೆಲ ವಿದ್ಯಾರ್ಥಿಗಳು ಪೊಲೀಸ್ ವಾಹನದಲ್ಲಿರುವುದು ಕಂಡುಬರುತ್ತದೆ. ಈ ವೇಳೆ ಮುಂಭಾಗದ ಆಸನದಲ್ಲಿ ಕುಳಿತಿರುವ ಪೊಲೀಸ್ ಸಿಬ್ಬಂದಿಯೊಬ್ಬರು ವಿದ್ಯಾರ್ಥಿಗಳಿಗೆ, "ಮನೆಗೆ ಹೋಗಿ... ಮತ್ತೆ ಪ್ರತಿಭಟನೆಗೆ ಬಂದರೆ ನಿಮ್ಮ ಜೀವನ ಹಾಳು ಮಾಡುತ್ತೇನೆ" ಎಂದು ಹೇಳುತ್ತಿರುವುದು ಕೇಳಿಸುತ್ತದೆ.
ಅಷ್ಟೇ ಅಲ್ಲದೆ, "ನಿಮ್ಮ ಬ್ಯಾಗ್‌ನಲ್ಲಿ 50-50 ಗ್ರಾಂ ಪೌಡರ್ ಹಾಕಿ ಡ್ರಗ್ಸ್ ಕೇಸ್ ದಾಖಲಿಸುತ್ತೇನೆ. ನಂತರ ನಿಮ್ಮ ಜೀವನವೇ ಮುಗಿದು ಹೋಗುತ್ತದೆ" ಎಂದು ಬೆದರಿಕೆ ಹಾಕಿರುವುದು ವಿಡಿಯೊದಲ್ಲಿ ಕೇಳಿಬರುತ್ತದೆ. ಇದೇ ವೇಳೆ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ತಮ್ಮ ಕೆಲಸಕ್ಕೂ ತೊಂದರೆಯಾಗುತ್ತಿದೆ ಎಂದು ಕೂಡ ಪೊಲೀಸ್ ಸಿಬ್ಬಂದಿ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
एक वायरल वीडियो में दावा किया गया है कि @MumbaiPolice प्रदर्शन कर रहे छात्रों को धमका रही है कि अगर वे दोबारा प्रदर्शन करने लौटे, तो उन्हें झूठे ड्रग्स के मामले में फँसा दिया जाएगा और पूरी ज़िंदगी जेल में सड़ना पड़ेगा।
— Mumbai Congress (@INCMumbai) July 23, 2026
अगर यह सच है, तो यह सिर्फ़ छात्रों को डराने की कोशिश नहीं,… pic.twitter.com/36KescEmro
ಮುಂಬೈ ಕಾಂಗ್ರೆಸ್ ಆರೋಪವೇನು?
ಈ ವಿಡಿಯೊವನ್ನು ಹಂಚಿಕೊಂಡಿರುವ ಮುಂಬೈ ಕಾಂಗ್ರೆಸ್, "ಈ ವಿಡಿಯೊ ನಿಜವಾಗಿದ್ದರೆ, ಇದು ವಿದ್ಯಾರ್ಥಿಗಳನ್ನು ಬೆದರಿಸುವ ಪ್ರಯತ್ನ ಮಾತ್ರವಲ್ಲ, ಪ್ರಜಾಪ್ರಭುತ್ವದ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ" ಎಂದು ಆರೋಪಿಸಿದೆ. "ಪ್ರಶ್ನೆ ಕೇಳುವುದು ಅಪರಾಧವಲ್ಲ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಬೇಕೇ ಹೊರತು, ಬೆದರಿಕೆ ಹಾಕಬಾರದು" ಎಂದು ಕಾಂಗ್ರೆಸ್ ತನ್ನ ಪೋಸ್ಟ್‌ನಲ್ಲಿ ಹೇಳಿದೆ.
ಮುಂಬೈ ಪೊಲೀಸರ ಪ್ರತಿಕ್ರಿಯೆ
ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ವಿಡಿಯೊದ ಸತ್ಯಾಸತ್ಯತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಇಲಾಖಾ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಯೂನಿಫಾರ್ಮ್ ಧರಿಸಿದ ಪೊಲೀಸ್ ವಾಹನ ಚಾಲಕನನ್ನು ಪ್ರಸ್ತುತ ಕರ್ತವ್ಯದಿಂದ ತೆರವುಗೊಳಿಸಲಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ನಿಗಾ ಹೆಚ್ಚಳ
ಇದೇ ವೇಳೆ ಮುಂಬೈ ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಅನುಸರಿಸುತ್ತಿರುವ ಕ್ರಮಗಳೂ ಚರ್ಚೆಗೆ ಗ್ರಾಸವಾಗಿವೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಸ್ಥಳೀಯ ಪೊಲೀಸ್ ಠಾಣೆಗಳಿಂದ ನೇರವಾಗಿ ಕರೆ ಮಾಡುವುದು, ಮನೆಗಳಿಗೆ ಭೇಟಿ ನೀಡುವುದು ಹಾಗೂ ವಾಟ್ಸಾಪ್ ಲೈವ್ ಲೊಕೇಶನ್ ನಿರಂತರವಾಗಿ ಹಂಚಿಕೊಳ್ಳುವಂತೆ ಸೂಚಿಸಿರುವ ಆರೋಪಗಳು ಕೂಡ ಕೇಳಿಬಂದಿವೆ.
ಇದರ ಜೊತೆಗೆ, ಈಗಾಗಲೇ ಎಫ್‌ಐಆರ್ ದಾಖಲಾಗಿರುವ ಅಥವಾ ಕಾನೂನು ನೋಟಿಸ್ ಪಡೆದಿರುವ ಕೆಲವರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 35(3) ಅಡಿಯಲ್ಲಿ ಡಿಜಿಟಲ್ ನೋಟಿಸ್‌ಗಳನ್ನು ಕಳುಹಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂಬ ಮಾಹಿತಿಯೂ ಹೊರಬಂದಿದೆ. ಈ ಬೆಳವಣಿಗೆಗಳ ನಡುವೆ, ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಅದನ್ನು ನಿಯಂತ್ರಿಸಲು ಪೊಲೀಸರು ಅನುಸರಿಸುತ್ತಿರುವ ಕ್ರಮಗಳು ದೇಶಾದ್ಯಂತ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಗೆ ಕಾರಣವಾಗಿವೆ.

