
ಮುಂಬೈನಲ್ಲಿ ಭೀಕರ ಅಪಘಾತ: ಸೇತುವೆಯಿಂದ ಹಾರಿ ಎರಡು ಬಾರಿ ಪಲ್ಟಿಯಾದ ಬಿಎಂಡಬ್ಲ್ಯು; ಮೂವರು ಸಾವು
ಕಾರನ್ನು ಯಾರು ಚಲಾಯಿಸುತ್ತಿದ್ದರು, ಅಪಘಾತ ಸಂಭವಿಸುವ ಮುನ್ನ ವಾಹನದ ವೇಗ ಎಷ್ಟಿತ್ತು, ಚಾಲಕನ ನಿಯಂತ್ರಣ ಏಕೆ ತಪ್ಪಿತು ಹಾಗೂ ಘಟನೆಯ ಸಂದರ್ಭ ಕಾರಿನಲ್ಲಿದ್ದವರ ಸ್ಥಿತಿ ಹೇಗಿತ್ತು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಅತಿವೇಗದಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ನಿಯಂತ್ರಣ ತಪ್ಪಿ ಮುಂಬೈನ ಕೋಸ್ಟಲ್ ರಸ್ತೆಯ ಮೇಲ್ಸೇತುವೆಯಿಂದ ಕೆಳಗೆ ಬಿದ್ದು, ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಮುಂಜಾನೆ ಸುಮಾರು 5 ಗಂಟೆಗೆ ಸಂಭವಿಸಿದ ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.
ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ಮೆರೈನ್ ಡ್ರೈವ್‌ನಿಂದ ಹಾಜಿ ಅಲಿ ಕಡೆಗೆ ತೆರಳುತ್ತಿತ್ತು. ಕೋಸ್ಟಲ್ ರಸ್ತೆಯ ಮೇಲ್ಸೇತುವೆಯಲ್ಲಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಯ ಅಂಚಿನಿಂದ ಹೊರಕ್ಕೆ ಚಿಮ್ಮಿ ಕೆಳಗಿನ ನಿರ್ಮಾಣ ಸ್ಥಳಕ್ಕೆ ಅಪ್ಪಳಿಸಿದೆ. ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಕೋಸ್ಟಲ್ ರಸ್ತೆ ನಿಯಂತ್ರಣ ಕೊಠಡಿ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ದೃಶ್ಯದಲ್ಲಿ ಕಾರು ಬೆಳಗಿನ ಜಾವ 5.03ರ ಸುಮಾರಿಗೆ ಮೇಲ್ಸೇತುವೆಯಿಂದ ಕೆಳಗೆ ಹಾರುತ್ತಿರುವುದು ಕಂಡುಬಂದಿದೆ. ಸೇತುವೆಯಿಂದ ಹೊರಬಿದ್ದ ಬಳಿಕ ಕಾರು ಗಾಳಿಯಲ್ಲಿ ಎರಡು ಬಾರಿ ಪಲ್ಟಿಯಾಗಿ, ಭಾರಿ ರಭಸದಿಂದ ಕೆಳಭಾಗದಲ್ಲಿದ್ದ ನಿರ್ಮಾಣ ಸ್ಥಳಕ್ಕೆ ಬಿದ್ದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ನಾಲ್ವರು ಪ್ರಯಾಣಿಕರು; ಮೂವರು ಮೃತ್ಯು
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದ ನಾಲ್ವರನ್ನು ಹೊರತೆಗೆದಿದ್ದಾರೆ. ಬಳಿಕ ಎಲ್ಲರನ್ನೂ ಸಮೀಪದ ನಾಯರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮೂವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಮೃತರಲ್ಲಿ 21 ವರ್ಷದ ಶನಾಯ್ ಗಜ್ಜಲ್ ಹಾಗೂ 17 ವರ್ಷದ ಬಾಲಕ ಸೇರಿದ್ದಾನೆ. ಸುಮಾರು 25 ವರ್ಷ ವಯಸ್ಸಿನ ಮತ್ತೊಬ್ಬ ಪುರುಷನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸುಮಾರು 20 ವರ್ಷದ ಮತ್ತೊಬ್ಬ ಯುವಕನಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಕಾರಣ ಪತ್ತೆಗೆ ಪೊಲೀಸರ ತನಿಖೆ
ಅಪಘಾತಕ್ಕೆ ಅತಿವೇಗ ಕಾರಣವಾಗಿರಬಹುದೆಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿದ್ದರೂ, ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರನ್ನು ಯಾರು ಚಲಾಯಿಸುತ್ತಿದ್ದರು, ಅಪಘಾತ ಸಂಭವಿಸುವ ಮುನ್ನ ವಾಹನದ ವೇಗ ಎಷ್ಟಿತ್ತು, ಚಾಲಕನ ನಿಯಂತ್ರಣ ಏಕೆ ತಪ್ಪಿತು ಹಾಗೂ ಘಟನೆಯ ಸಂದರ್ಭ ಕಾರಿನಲ್ಲಿದ್ದವರ ಸ್ಥಿತಿ ಹೇಗಿತ್ತು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
10.58 ಕಿ.ಮೀ ಉದ್ದದ ಕೋಸ್ಟಲ್ ರಸ್ತೆ
ಮುಂಬೈನ ದಕ್ಷಿಣ ಭಾಗದಲ್ಲಿರುವ ಮೆರೈನ್ ಡ್ರೈವ್‌ನಿಂದ ವರ್ಲಿ ತುದಿಯ ಬಾಂದ್ರಾ–ವರ್ಲಿ ಸಮುದ್ರ ಸೇತುವೆ ಸಂಪರ್ಕಿಸುವ ಮಾರ್ಗದವರೆಗೆ ಕೋಸ್ಟಲ್ ರಸ್ತೆ ಸುಮಾರು 10.58 ಕಿಲೋಮೀಟರ್ ಉದ್ದವಿದೆ. ನಗರದ ಪ್ರಮುಖ ವೇಗದ ಸಂಚಾರ ಮಾರ್ಗವಾಗಿರುವ ಈ ರಸ್ತೆಯಲ್ಲಿ ಮುಂಜಾನೆ ಸಂಭವಿಸಿದ ಭೀಕರ ಅಪಘಾತ ಇದೀಗ ವಾಹನಗಳ ವೇಗ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆ ಕುರಿತು ಮತ್ತೊಮ್ಮೆ ಗಮನ ಸೆಳೆದಿದೆ.

