
ಮಳೆ ಕೊರತೆ ಪ್ರಮಾಣ ಶೇ. 12ಕ್ಕೆ ಇಳಿಕೆ, ಜುಲೈ ಮೊದಲ ವಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ
ಜುಲೈ ಮೊದಲ ವಾರದಲ್ಲಿ ಉತ್ತಮ ಮುಂಗಾರು ಮಳೆಯಾಗಿದ್ದು, ಮಳೆ ಕೊರತೆ ಶೇ. 12 ಕ್ಕೆ ಇಳಿಕೆಯಾಗಿದೆ. ಎಲ್ ನಿನೋ ಭೀತಿ ಎದುರಿಸಲು ಪಿಎಂಒ ನಡೆಸಿದ ಉನ್ನತ ಮಟ್ಟದ ಸಭೆಯ ವಿವರಗಳು ಇಲ್ಲಿದೆ.
ದೇಶದಲ್ಲಿ ಮುಂಗಾರು ಮಳೆ ಕೊರತೆ ಗಣನೀಯವಾಗಿ ಕಡಿಮೆಯಾಗಿದ್ದು, ಜುಲೈ 7ರ ವೇಳೆಗೆ ದೇಶವ್ಯಾಪಿ ಮಳೆ ಕೊರತೆ 12 ಪ್ರತಿಶತಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜುಲೈ ಮೊದಲ ವಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಪ್ರಧಾನಿ ಕಾರ್ಯಾಲಯ (PMO) ತಿಳಿಸಿದೆ.
ಖರೀಫ್ ಹಂಗಾಮಿನ ಪ್ರಗತಿ ಹಾಗೂ ಎಲ್ ನಿನೋ ಪರಿಣಾಮದ ಕುರಿತು ಪ್ರಧಾನಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆದಿದ್ದು, ವಿವಿಧ ಇಲಾಖೆಗಳ ಸಿದ್ಧತೆ ಮತ್ತು ಪರಿಸ್ಥಿತಿಯ ಅವಲೋಕನ ನಡೆಸಲಾಗಿದೆ.
ಸಭೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಅಧಿಕಾರಿಗಳು ಜೂನ್‌ನಿಂದ ಜುಲೈ 7ರವರೆಗಿನ ಮಳೆಯ ಸ್ಥಿತಿಗತಿಗಳ ಕುರಿತು ವಿವರವಾದ ಮಾಹಿತಿ ನೀಡಿದರು. ದೇಶದಲ್ಲಿ ಮುಂಗಾರು ವ್ಯಾಪ್ತಿ ಹಾಗೂ ಎಲ್ ನಿನೋ ಉಂಟುಮಾಡಬಹುದಾದ ಪರಿಣಾಮಗಳ ಕುರಿತು ಐಎಂಡಿ ಮಹಾನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲ ರಾಜ್ಯಗಳಲ್ಲಿ ಮುಂಗಾರು ವಿಳಂಬ
ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮುಂಗಾರು ಆರಂಭವು ಸುಮಾರು 10 ದಿನಗಳ ಕಾಲ ವಿಳಂಬವಾಗಿತ್ತು. ಆದರೆ ಜುಲೈ ಮೊದಲ ವಾರದಲ್ಲಿ ಉತ್ತಮ ಮಳೆಯಾದ ಕಾರಣ ದೇಶದ ಒಟ್ಟಾರೆ ಮಳೆ ಕೊರತೆ 12 ಪ್ರತಿಶತಕ್ಕೆ ಇಳಿಕೆಯಾಗಿದೆ ಎಂದು ಪಿಎಂಒ ತಿಳಿಸಿದೆ.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ದುರ್ಬಲದಿಂದ ಮಧ್ಯಮ ಪ್ರಮಾಣದ ಎಲ್ ನಿನೋ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದರೂ, ಎಲ್ ನಿನೋ ವರ್ಷ ಎಂದ ಮಾತ್ರಕ್ಕೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲೇಬೇಕು ಎಂಬ ನಿಯಮವಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಜುಲೈ ತಿಂಗಳ ಮೇಲೆ ವಿಶೇಷ ನಿಗಾ
ಮುಂಗಾರು ಅವಧಿಯ ಒಟ್ಟು ಮಳೆಯ ಶೇ.30ಕ್ಕೂ ಹೆಚ್ಚು ಮಳೆ ಜುಲೈ ತಿಂಗಳಲ್ಲೇ ದಾಖಲಾಗುವುದರಿಂದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಖಾರಿಫ್ ಬೆಳೆಗಾಗಿ ವಿಶೇಷ ಸಿದ್ಧತೆ
ಕೇಂದ್ರ ಕೃಷಿ ಕಾರ್ಯದರ್ಶಿ ಎಲ್ ನಿನೋ ಪರಿಣಾಮವನ್ನು ಎದುರಿಸಲು ಖಾರಿಫ್ ಹಂಗಾಮಿಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ವಿವರಿಸಿದರು. ರಾಜ್ಯಗಳೊಂದಿಗೆ ಪ್ರತಿ ವಾರ ಕ್ರಾಪ್ ವೆದರ್ ವಾಚ್ ಸಭೆ ನಡೆಸಲಾಗುತ್ತಿದೆ. ಮಳೆ, ಜಲಾಶಯಗಳ ನೀರಿನ ಮಟ್ಟ, ಬಿತ್ತನೆ, ಕೃಷಿ ಒಳಸಾಮಗ್ರಿಗಳ ಲಭ್ಯತೆ, ಮಾರುಕಟ್ಟೆ ಪರಿಸ್ಥಿತಿ ಹಾಗೂ ಕೀಟ-ರೋಗಗಳ ಬಗ್ಗೆ ನಿರಂತರ ಪರಿಶೀಲನೆ ನಡೆಯುತ್ತಿದೆ.
ಅಪಾಯದ ಸಾಧ್ಯತೆ ಇರುವ 262 ಜಿಲ್ಲೆಗಳಿಗೆ ಕೃಷಿ ತುರ್ತು ಕಾರ್ಯಯೋಜನೆ ನವೀಕರಿಸಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಕೃಷಿ ವಿಜ್ಞಾನ ಕೇಂದ್ರಗಳಿಗೆ (KVK) ಎಲ್ ನಿನೋ ಅಪಾಯ ನಿರ್ವಹಣೆಗೆ ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಆಹಾರ ಉತ್ಪಾದನೆ ಮೇಲೆ ಆತಂಕ ಬೇಡ
ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಬೆಳೆ ತಳಿಗಳು ಹಾಗೂ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಕಡಿಮೆ ಮಳೆಯ ವರ್ಷಗಳಲ್ಲಿಯೂ ಆಹಾರ ಧಾನ್ಯ ಉತ್ಪಾದನೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ರಾಜ್ಯಗಳೊಂದಿಗೆ ಸಮನ್ವಯಕ್ಕೆ ಸೂಚನೆ
ಸಭೆಯ ಅಂತ್ಯದಲ್ಲಿ ಪ್ರಧಾನಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರು, ಮುಂಗಾರು ಹಾಗೂ ವಿಳಂಬವಾದ ಮಳೆಯ ಪರಿಣಾಮವನ್ನು ಸೂಕ್ಷ್ಮ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ ನಿರಂತರವಾಗಿ ಪರಿಶೀಲಿಸಬೇಕು. ಅಗತ್ಯವಿದ್ದರೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದರೆ ಯಾವುದೇ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದು ಅವರು ಒತ್ತಿ ಹೇಳಿದರು.

