ಮಂಗಗಳ ಮುತ್ತಿಗೆಗೆ ಬೆದರಿ ಬೆಟ್ಟದ ಮೇಲಿಂದ ಬಿದ್ದು ನವವಿವಾಹಿತೆ ಸಾವು
x

ಉಚ್ಚಿಪಿಳ್ಳೈಯಾರ್ ದೇವಸ್ಥಾನದಿಂದ ಕೆಳಗೆ ಬಿದ್ದು 24 ವರ್ಷದ ನವವಿವಾಹಿತೆ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಗಗಳ ಮುತ್ತಿಗೆಗೆ ಬೆದರಿ ಬೆಟ್ಟದ ಮೇಲಿಂದ ಬಿದ್ದು ನವವಿವಾಹಿತೆ ಸಾವು

ತಮಿಳುನಾಡಿನ ತೂತುಕುಡಿಯಲ್ಲಿ ಮಂಗಗಳ ಹಿಂಡು ಮುತ್ತಿಗೆ ಹಾಕಿದಾಗ ಗಾಬರಿಗೊಂಡು ಬೆಟ್ಟದ ತುದಿಯ ಉಚ್ಚಿಪಿಳ್ಳೈಯಾರ್ ದೇವಸ್ಥಾನದಿಂದ ಕೆಳಗೆ ಬಿದ್ದು 24 ವರ್ಷದ ನವವಿವಾಹಿತೆ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


Click the Play button to hear this message in audio format

ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಮಂಗಗಳಿಗೆ ಹಣ್ಣು ತಿನ್ನಿಸಲು ಹೋದ 24 ವರ್ಷದ ನವವಿವಾಹಿತೆಯೊಬ್ಬರು, ಮಂಗಗಳ ಹಿಂಡು ಏಕಾಏಕಿ ಮುತ್ತಿಗೆ ಹಾಕಿದಾಗ ಉಂಟಾದ ಗಾಬರಿಯಿಂದ ಕಾಲು ಜಾರಿ ಬೆಟ್ಟದ ತುದಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಮೃತರನ್ನು ತೂತುಕುಡಿಯ ದಕ್ಷಿಣ ತಿಟ್ಟಂಕುಲಂ ನಿವಾಸಿ ಅನಿತಾ ಎಂದು ಗುರುತಿಸಲಾಗಿದೆ. ಇವರಿಗೆ ಕಳೆದ ತಿಂಗಳಷ್ಟೇ ವಿದೇಶದಲ್ಲಿ ಕೆಲಸ ಮಾಡುವ 29 ವರ್ಷದ ಸುರೇಶ್ ಎಂಬುವವರೊಂದಿಗೆ ವಿವಾಹವಾಗಿತ್ತು. ಇತ್ತೀಚೆಗಷ್ಟೇ ಸುರೇಶ್ ಊರಿಗೆ ಮರಳಿದ್ದು, ದಂಪತಿ ಕಳುಗುಮಲೈನಲ್ಲಿರುವ ಪ್ರಸಿದ್ಧ ಕಳುಗಾಸಲಮೂರ್ತಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು.

ಮುಖ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿದ ದಂಪತಿ, ನಂತರ ಬೆಟ್ಟದ ತುದಿಯಲ್ಲಿರುವ ಉಚ್ಚಿಪಿಳ್ಳೈಯಾರ್ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಕೋತಿಗಳಿಗೆ ದಂಪತಿ ಹಣ್ಣುಗಳನ್ನು ನೀಡುತ್ತಿದ್ದರು. ಆಗ ಹಠಾತ್ತನೆ ಭಾರಿ ಸಂಖ್ಯೆಯ ಮಂಗಗಳು ಅವರನ್ನು ಸುತ್ತುವರೆದಿವೆ. ಮಂಗಗಳ ನಡವಳಿಕೆಯಿಂದ ತೀವ್ರವಾಗಿ ಗಾಬರಿಗೊಂಡ ಅನಿತಾ, ತಕ್ಷಣವೇ ಆತಂಕಕ್ಕೆ ಒಳಗಾಗಿ ಸಮತೋಲನ ಕಳೆದುಕೊಂಡು ಬೆಟ್ಟದಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಪತಿಯ ಕಣ್ಣೆದುರೇ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಣ್ಣೆದುರೇ ಹೆಂಡತಿಯನ್ನು ಕಳೆದುಕೊಂಡ ಪತಿ ಸುರೇಶ್ ಸ್ಥಳದಲ್ಲಿ ಕಣ್ಣೀರಿಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

ಘಟನೆ ಕುರಿತು ಮಾಹಿತಿ ಪಡೆದ ಕಳುಗುಮಲೈ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಕಂದಕದಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Read More
Next Story