x

ಭಾರತದಲ್ಲಿ ಆಡಳಿತ ಬದಲಾವಣೆಯ ಪ್ರಯತ್ನ ನಡೆಯಲ್ಲ: ಮೋಹನ್ ಭಾಗವತ್‌

ಆರ್‌ಎಸ್‌ಎಸ್‌ ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್‌ ಆಡಳಿತ ಬದಲಾವಣೆಯ ಪ್ರಯತ್ನಗಳು, ಪ್ರತಿಭಟನೆಗಳು, ಸಾಮಾಜಿಕ ಸಂವಾದ ಮತ್ತು ಭಾರತದ ಏಕತೆ ಹಾಗೂ ವೈವಿಧ್ಯತೆಯ ಕುರಿತು ಮಾತನಾಡಿದ್ದಾರೆ.


ಭಾರತದಲ್ಲಿ ಆಡಳಿತ ಬದಲಾವಣೆಗೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮಂಗಳವಾರ ನಡೆದ ಆರ್‌ಎಸ್‌ಎಸ್‌ನ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ ಮಾತನಾಡಿದ ಅವರು, ಫ್ರಾನ್ಸ್‌, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿ, ಭಾರತದಲ್ಲಿಯೂ ಇಂತಹ ಪ್ರಯತ್ನಗಳು ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು.

ಚುನಾವಣಾ ಆಯೋಗದ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಆಡಳಿತ ಬದಲಾವಣೆಗೆ ಸಂಬಂಧಿಸಿದ ಚರ್ಚೆಗಳು ತೀವ್ರಗೊಂಡಿದ್ದವು. ಈ ಬೆಳವಣಿಗೆಗಳ ನಡುವೆಯೇ ಭಾಗವತ್‌ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

“ಪಶ್ಚಿಮದಲ್ಲಿ ಬಿರುಗಾಳಿ ಎದ್ದಿದೆ. ಫ್ರಾನ್ಸ್‌, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಏನಾಯಿತು ಎಂಬುದನ್ನು ಗಮನಿಸಿ. ಭಾರತದಲ್ಲಿ ಆಡಳಿತ ಬದಲಾವಣೆ ಆಗುವುದಿಲ್ಲ. ಇಂತಹ ಪ್ರಯತ್ನಗಳು ಭಾರತದಲ್ಲಿಯೂ ನಡೆಯುತ್ತಿವೆ. ಆದರೆ ಭಾರತವು ದೃಢ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಸಮಾಜದ ಸಾಮೂಹಿಕ ಶಕ್ತಿಯೂ ಹೆಚ್ಚಾಗಿದೆ” ಎಂದು ಭಾಗವತ್‌ ಹೇಳಿದರು.

ಪರಿಹಾರ ಕಂಡುಕೊಳ್ಳಲು ಪ್ರತಿಭಟನೆ ನಡೆಯಲಿ

ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಪ್ರತಿಭಟನೆಗಳು ಮತ್ತು ಚಳವಳಿಗಳು ನಡೆಯುವುದು ಸಹಜ. ಆದರೆ ಅವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿರಬೇಕು. ದ್ವೇಷ ಮತ್ತು ವೈಮನಸ್ಸು ಹರಡುವ ಸಾಧನಗಳಾಗಬಾರದು ಎಂದು ಭಾಗವತ್‌ ಹೇಳಿದರು.

“ಸಮಸ್ಯೆಗಳು ಎದುರಾದಾಗ ಚಳವಳಿಗಳು ರೂಪುಗೊಳ್ಳುತ್ತವೆ. ಆದರೆ ಅವು ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಸಾಗಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಮುಖ್ಯ ಉದ್ದೇಶವಾಗಿರಬೇಕು. ನಮ್ಮ ಕಾರ್ಯಗಳು ವೈಮನಸ್ಸು ಸೃಷ್ಟಿಸಬಾರದು. ಎಲ್ಲರೂ ಔಚಿತ್ಯದ ಮಿತಿಗಳನ್ನು ಗೌರವಿಸಬೇಕು” ಎಂದು ಅವರು ತಿಳಿಸಿದರು.

ಪ್ರತಿಭಟನೆಗಳು ಕೇವಲ ಮತಗಳಿಕೆ ಅಥವಾ ಜನಪ್ರಿಯತೆ ಗಳಿಸುವ ಉದ್ದೇಶದಿಂದ ನಡೆಯಬಾರದು ಎಂದೂ ಅವರು ಹೇಳಿದರು.“ಇಂತಹ ಪ್ರಯತ್ನಗಳು ಮತಗಳಿಕೆ ಅಥವಾ ಅಗ್ಗದ ಜನಪ್ರಿಯತೆಯ ಬೆನ್ನತ್ತಬಾರದು. ಚಳವಳಿಗಳಿಂದ ಮಾತ್ರ ಪರಿಹಾರ ಸಿಗುವುದಿಲ್ಲ. ಸಮಾಜದಲ್ಲಿ ಸಂವಾದ ಮತ್ತು ಪರಸ್ಪರ ಚರ್ಚೆಯ ಮೂಲಕವೇ ನಿಜವಾದ ಪರಿಹಾರಗಳು ಹೊರಹೊಮ್ಮುತ್ತವೆ” ಎಂದು ಭಾಗವತ್‌ ಅಭಿಪ್ರಾಯಪಟ್ಟರು.

ಅಶಾಂತಿ ಸೃಷ್ಟಿಸುವ ಶಕ್ತಿಗಳ ಬಗ್ಗೆ ಎಚ್ಚರಿಕೆ

ಸಮಾಜದಲ್ಲಿ ಅಸಮಾಧಾನ, ಗೊಂದಲ ಮತ್ತು ಅರಾಜಕತೆ ಸೃಷ್ಟಿಸಲು ಕೆಲವು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಭಾಗವತ್‌ ಎಚ್ಚರಿಸಿದರು. ಜನರಲ್ಲಿ ತಾವು ಅನ್ಯಾಯಕ್ಕೆ ಒಳಗಾಗಿದ್ದೇವೆ ಎಂಬ ಭಾವನೆ ಬಿತ್ತುವ ಮೂಲಕ ಅಸಮಾಧಾನ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಇಂತಹ ಶಕ್ತಿಗಳಿಂದ ಉಂಟಾಗುವ ಗೊಂದಲ ಮತ್ತು ಭಿನ್ನಾಭಿಪ್ರಾಯಗಳಿಗೆ ಬಲಿಯಾಗದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.

ಭಾರತದ ವೈವಿಧ್ಯತೆಯೇ ಶಕ್ತಿ

ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಸಂರಕ್ಷಿಸುವ ಅಗತ್ಯದ ಬಗ್ಗೆಯೂ ಭಾಗವತ್‌ ಮಾತನಾಡಿದರು. ಸಮಾಜವನ್ನು ವಿಭಜಿಸುವ ಪ್ರವೃತ್ತಿಗಳಿಂದ ಉಂಟಾಗುವ ಬೌದ್ಧಿಕ ಗೊಂದಲದ ಬಗ್ಗೆ ಎಚ್ಚರದಿಂದ ಇರಬೇಕು. ಯಾವುದೇ ಪ್ರಚೋದನೆಗೆ ಒಳಗಾಗದೆ, ಪರಸ್ಪರ ಸೌಹಾರ್ದವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಭಾರತವು ವಿಶ್ವಗುರು ಸ್ಥಾನಕ್ಕೇರಬೇಕು ಎಂಬ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು. “ನಮ್ಮ ವೈಯಕ್ತಿಕ ಅಹಂಕಾರವನ್ನು ಬದಿಗಿಡಬೇಕು. ನಮ್ಮ ಮತ್ತು ಇತರರ ಆರಾಧನಾ ಪದ್ಧತಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊರೆಯಬೇಕು. ವೈವಿಧ್ಯತೆಯನ್ನು ವಿಭಜನೆ ಎಂದು ಭಾವಿಸುವ ಪ್ರವೃತ್ತಿಯನ್ನೂ ಕೈಬಿಡಬೇಕು” ಎಂದು ಅವರು ಹೇಳಿದರು.

ಭಾರತದ ಮೇಲಿನ ಭಕ್ತಿ, ಪೂರ್ವಜರ ಬಗ್ಗೆ ಹೆಮ್ಮೆ ಮತ್ತು ಭಾರತೀಯ ಸಂಸ್ಕೃತಿಯ ಬಗೆಗಿನ ಬದ್ಧತೆ ಈ ಮೂರು ಅಂಶಗಳು ಎಲ್ಲರನ್ನೂ ಒಗ್ಗೂಡಿಸಬೇಕು. ಈ ಮೌಲ್ಯಗಳನ್ನು ಹೃದಯಪೂರ್ವಕವಾಗಿ ಸ್ವೀಕರಿಸಿ ರಾಷ್ಟ್ರದ ಪ್ರಗತಿಗಾಗಿ ಶ್ರಮಿಸಬೇಕು ಎಂದು ಭಾಗವತ್‌ ಕರೆ ನೀಡಿದರು.

Read More
Next Story