
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಭರವಸೆ; ಮಾಡರ್ನಾ mRNA ಲಸಿಕೆ ಪರೀಕ್ಷೆ ಯಶಸ್ವಿ
ಚರ್ಮದ ಕ್ಯಾನ್ಸರ್‌ನ ಅತ್ಯಂತ ಭೀಕರ ರೂಪವಾದ 'ಮೆಲನೋಮಾ' (Melanoma) ಪೀಡಿತ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಮರುಕಳಿಸದಂತೆ ಹಾಗೂ ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಯುವಲ್ಲಿ ಈ ಲಸಿಕೆ ಯಶಸ್ವಿಯಾಗಿದೆ.
ಕ್ಯಾನ್ಸರ್ ರೋಗಿಗಳಿಗೆ ವೈದ್ಯಕೀಯ ಲೋಕದಿಂದ ಅತ್ಯಂತ ಆಶಾದಾಯಕರ ಸುದ್ದಿಯೊಂದು ಹೊರಬಿದ್ದಿದೆ. ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆಗಳಾದ ಮಾಡರ್ನಾ (Moderna) ಮತ್ತು ಮರ್ಕ್ (Merck) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವೈಯಕ್ತಿಕಗೊಳಿಸಿದ mRNA ಕ್ಯಾನ್ಸರ್ ವ್ಯಾಕ್ಸಿನ್ (Personalised mRNA Cancer Vaccine) ಪ್ರಯೋಗದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ.
ಚರ್ಮದ ಕ್ಯಾನ್ಸರ್‌ನ ಅತ್ಯಂತ ಭೀಕರ ರೂಪವಾದ 'ಮೆಲನೋಮಾ' (Melanoma) ಪೀಡಿತ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಮರುಕಳಿಸದಂತೆ ಹಾಗೂ ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಯುವಲ್ಲಿ ಈ ಲಸಿಕೆ ಯಶಸ್ವಿಯಾಗಿದೆ. 'ಕೀಟ್ರುಡಾ' (Keytruda) ಎಂಬ ಇಮ್ಯುನೊಥೆರಪಿ ಔಷಧಿಯೊಂದಿಗೆ ಈ ಲಸಿಕೆಯನ್ನು ನೀಡಿ ಹಂತ-3ರ (Phase 3) ಪರೀಕ್ಷೆ ನಡೆಸಲಾಗಿದ್ದು, ಧನಾತ್ಮಕ ಫಲಿತಾಂಶ ಬಂದಿದೆ.
ಏನಿದು ಪರ್ಸನಲೈಸ್ಡ್ mRNA ಕ್ಯಾನ್ಸರ್ ವ್ಯಾಕ್ಸಿನ್?
ನಾವು ಸಾಮಾನ್ಯ ಸೋಂಕುಗಳನ್ನು ತಡೆಯಲು ತೆಗೆದುಕೊಳ್ಳುವ ಲಸಿಕೆಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದೆ. ಇದನ್ನು ಪ್ರತಿಯೊಬ್ಬ ರೋಗಿಯ ಕ್ಯಾನ್ಸರ್ ಗಡ್ಡೆಯ (Tumour) ತಳಿಶಾಸ್ತ್ರೀಯ ಸಂಯೋಜನೆಗೆ (Genetic Mutations) ಅನುಗುಣವಾಗಿ ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ?
ರೋಗಿಯ ದೇಹದಿಂದ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ತೆಗೆದ ನಂತರ, ಅದರ ಡಿಎನ್‌ಎ ಪರೀಕ್ಷಿಸಿ ಪ್ರತ್ಯೇಕ ರೂಪಾಂತರಗಳನ್ನು (Mutations) ಗುರುತಿಸಲಾಗುತ್ತದೆ. mRNA ತಂತ್ರಜ್ಞಾನದ ಮೂಲಕ ರೋಗಿಯ ರೋಗನಿರೋಧಕ ವ್ಯವಸ್ಥೆಗೆ (Immune System) ನಿರ್ದೇಶನ ನೀಡಲಾಗುತ್ತದೆ.
ಇದು ರೋಗನಿರೋಧಕ ಕೋಶಗಳಿಗೆ ಕ್ಯಾನ್ಸರ್ ಕೋಶಗಳನ್ನು ನಿಖರವಾಗಿ ಗುರುತಿಸಿ, ಅವು ಮತ್ತೆ ಬೆಳೆಯುವ ಮುನ್ನವೇ ನಾಶಪಡಿಸಲು ತರಬೇತಿ ನೀಡುತ್ತದೆ.
ಪ್ರಯೋಗದ ಫಲಿತಾಂಶಗಳು ಹೇಳುವುದೇನು?
ಈ ಪ್ರಯೋಗದಲ್ಲಿ ಶಸ್ತ್ರಚಿಕಿತ್ಸೆಗೊಳಗಾದ 1,137 'ಹೈ-ರಿಸ್ಕ್ ಮೆಲನೋಮಾ' ರೋಗಿಗಳನ್ನು ಭಾಗಿ ಮಾಡಿಕೊಳ್ಳಲಾಗಿತ್ತು.
1. ಮರುಕಳಿಸುವುದನ್ನು ತಡೆಯುತ್ತದೆ: ಬರೀ ಕೀಟ್ರುಡಾ ಔಷಧಿ ನೀಡುವುದಕ್ಕಿಂತ, ಈ mRNA ಲಸಿಕೆ ಮತ್ತು ಕೀಟ್ರುಡಾ ಎರಡನ್ನೂ ಒಟ್ಟಿಗೆ ನೀಡಿದಾಗ ಕ್ಯಾನ್ಸರ್ ಮರುಕಳಿಸುವಿಕೆ ಗಣನೀಯವಾಗಿ ಕಡಿಮೆಯಾಗಿದೆ.
2. ಹರಡುವಿಕೆ ನಿಯಂತ್ರಣ: ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡುವ (Metastasis) ಅಪಾಯವನ್ನು ಈ ಕಾಂಬಿನೇಷನ್ ಚಿಕಿತ್ಸೆ ಯಶಸ್ವಿಯಾಗಿ ತಪ್ಪಿಸಿದೆ.
3. ಸುರಕ್ಷತೆ: ಈ ಚಿಕಿತ್ಸೆಯಿಂದ ರೋಗಿಗಳಲ್ಲಿ ಯಾವುದೇ ಹೊಸ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು ಸಂಸ್ಥೆಗಳು ತಿಳಿಸಿವೆ.
ಹಿಂದಿನ ಹಂತದ ಅಧ್ಯಯನಗಳ ಪ್ರಕಾರ, ಈ ಸಂಯೋಜಿತ ಚಿಕಿತ್ಸೆಯು ಕ್ಯಾನ್ಸರ್ ಮರುಕಳಿಸುವಿಕೆ ಅಥವಾ ಸಾವಿನ ಅಪಾಯವನ್ನು ಶೇಕಡಾ 49 ರಷ್ಟು ತಗ್ಗಿಸಿದೆ ಎಂಬುದು ಸಾಬೀತಾಗಿತ್ತು.
ಸಾಮಾನ್ಯ ಜನರಿಗೆ ಎಂದು ಲಭ್ಯ?
ಮಾಡರ್ನಾ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಹೊಗೆ ಅವರ ಪ್ರಕಾರ, ಈ ಲಸಿಕೆಗೆ ಈಗಾಗಲೇ ಅಗತ್ಯ ಅನುಮೋದನೆಗಳ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ನಿಯಂತ್ರಕ ಸಂಸ್ಥೆಗಳ ಅಂತಿಮ ಒಪ್ಪಿಗೆ ಸಿಕ್ಕರೆ ಮುಂದಿನ ವರ್ಷದಿಂದಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ.
ಮೆಲನೋಮಾ ಮಾತ್ರವಲ್ಲದೆ, ಈ ತಂತ್ರಜ್ಞಾನವನ್ನು ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗಳ ವಿರುದ್ಧವೂ ಬಳಸಲು ಸಂಶೋಧಕರು ಪರೀಕ್ಷೆ ನಡೆಸುತ್ತಿದ್ದಾರೆ. ಇದು ಭವಿಷ್ಯದಲ್ಲಿ 'ಕ್ಯಾನ್ಸರ್ ಕೇರ್' ಕ್ಷೇತ್ರದಲ್ಲಿ ನವ ದಿಗಂತವನ್ನು ತೆರೆಯಲಿದೆ.

