
ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ವಿಡಿಯೋ ಬ್ಲಾಕ್- ಕ್ಷಮೆಯಾಚಿಸಿದ ಮೆಟಾ
"ಈ ವಿಡಿಯೋ ತಾಂತ್ರಿಕ ಕಾರಣಗಳಿಂದ ರಿಮೂವ್ ಆಗಿದೆ. ಈಗ ಅದನ್ನು ಪುನಃ ರಿಸ್ಟೋರ್ ಮಾಡಲಾಗಿದೆ" ಎಂದು ಮೆಟಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ವೀಡಿಯೊವೊಂದು ಕೆಲ ಕಾಲ ಬ್ಲಾಕ್ (Block) ಆದ ಘಟನೆಗೆ ಸಂಬಂಧಿಸಿದಂತೆ, ಸೋಶಿಯಲ್ ಮೀಡಿಯಾ ದೈತ್ಯ ಮೆಟಾ ಸಂಸ್ಥೆಯು ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದೆ. ತಾಂತ್ರಿಕ ದೋಷದಿಂದಾಗಿ ಈ ಎಡವಟ್ಟು ಸಂಭವಿಸಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.
"ಈ ವಿಡಿಯೋವನ್ನು ಅಚಾತುರ್ಯದಿಂದ ತೆಗೆದುಹಾಕಲಾಗಿತ್ತು, ಈಗ ಅದನ್ನು ಪುನಃ ರಿಸ್ಟೋರ್ ಮಾಡಲಾಗಿದೆ" ಎಂದು ಮೆಟಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ, ಈ ಘಟನೆಯನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮೆಟಾ ನೀಡಿದ ವಿವರಣೆ ಮತ್ತು ವಿಡಿಯೋ ತೆಗೆದುಹಾಕಲು ಕಾರಣವಾದ ಸನ್ನಿವೇಶಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಈ ಕುರಿತು ಹೆಚ್ಚಿನ ಸ್ಪಷ್ಟನೆ ನೀಡುವಂತೆ ಮೆಟಾ ಪ್ರತಿನಿಧಿಗಳನ್ನು ಸಚಿವಾಲಯಕ್ಕೆ ಕರೆಸುವ ಸಾಧ್ಯತೆಯಿದೆ.
ಮೆಟಾ ಜಾಗತಿಕ ಮುಖ್ಯಸ್ಥರಿಗೆ ಐಟಿ ಸಚಿವಾಲಯದ ಸಮನ್ಸ್
ಸುದ್ದಿ ಸಂಸ್ಥೆ IANS ವರದಿ ಮಾಡಿರುವ ಪ್ರಕಾರ, ಪ್ರಧಾನಿ ಮೋದಿಯವರ ವಿಡಿಯೋ ತಾತ್ಕಾಲಿಕವಾಗಿ ಬ್ಲಾಕ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಮತ್ತು ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಆವಿಡಿಯೋದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
ಜುಲೈ 23 ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೊದಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 'Gen Z' ಅಂದರೆ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ್ದರು.
ಪ್ರಧಾನಿ ಭಾಷಣದ ಮುಖ್ಯ ಮುಖ್ಯಾಂಶಗಳು:
• ಕಠಿಣ ಕಾನೂನಿನ ಭರವಸೆ: ಪರೀಕ್ಷಾ ಪೇಪರ್ ಲೀಕ್ ತಡೆಯಲು ಕೇಂದ್ರ ಸಂಪುಟದ ಮುಂದೆ ಅತ್ಯಂತ ಕಠಿಣ ಕಾನೂನು ತಿದ್ದುಪಡಿ ತರುವುದಾಗಿ ಪ್ರಧಾನಿ ಅಭಯ ನೀಡಿದ್ದರು.
• ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು: ಪೇಪರ್ ಲೀಕ್ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ವಿಶೇಷ ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದರು.
• ವಿದ್ಯಾರ್ಥಿಗಳ ಭವಿಷ್ಯ ಸುರಕ್ಷಿತ: ಸುಮಾರು 22 ಲಕ್ಷ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷಕ್ಕೆ ಯಾವುದೇ ಧಕ್ಕೆಯಾಗದಂತೆ ಸರ್ಕಾರ ಕ್ರಮ ವಹಿಸಿದೆ ಎಂದು ಹೇಳಿದ್ದ ಪ್ರಧಾನಿ, "ನಮ್ಮ ಯುವಜನತೆಯ ಕಲ್ಯಾಣ ಮತ್ತು ಭವಿಷ್ಯಕ್ಕಿಂತ ಬೇರೇನೂ ಮುಖ್ಯವಲ್ಲ" ಎಂದು ಪ್ರತಿಪಾದಿಸಿದ್ದರು.
ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷವಾಗಿತ್ತು 'ಲೀಗಲ್ ರಿಕ್ವೆಸ್ಟ್' ನೋಟಿಸ್
ಲಕ್ಷಾಂತರ ವೀಕ್ಷಣೆಗಳನ್ನು (Views) ಗಳಿಸಿದ್ದ ಈ ವಿಡಿಯೋ ಮಂಗಳವಾರ ಮುಂಜಾನೆ ದಿಢೀರನೆ ಬ್ಲಾಕ್ ಮಾಡಲಾಗಿತ್ತು. ಭಾರತದಲ್ಲಿನ ಬಳಕೆದಾರರಿಗೆ 'ಕಾನೂನುಬದ್ಧ ವಿನಂತಿಯ ಮೇರೆಗೆ ಈ ಪ್ರದೇಶದಲ್ಲಿ ವೀಡಿಯೊವನ್ನು ತಡೆಹಿಡಿಯಲಾಗಿದೆ' ಎಂಬ ನೋಟಿಸ್ ಕಾಣಿಸಿಕೊಳ್ಳುತ್ತಿತ್ತು.
ತಕ್ಷಣವೇ ಎಚ್ಚೆತ್ತ ಮೆಟಾ ಸಂಸ್ಥೆಯು ವೀಡಿಯೊವನ್ನು ಪುನಃ ಸಕ್ರಿಯಗೊಳಿಸಿದ್ದು, ತಾಂತ್ರಿಕ ಎಡವಟ್ಟಿನ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿವರಣೆ ನೀಡಿದೆ.

