ಲೈಂಗಿಕ ದೌರ್ಜನ್ಯ ಪ್ರಕರಣಗಳ ಮಾಹಿತಿ ಪೊಲೀಸರಿಗೆ- ಮಕ್ಕಳ ಸುರಕ್ಷತೆಗೆ ಮೆಟಾ ಮಹತ್ವದ ನಿರ್ಧಾರ
x

ಲೈಂಗಿಕ ದೌರ್ಜನ್ಯ ಪ್ರಕರಣಗಳ ಮಾಹಿತಿ ಪೊಲೀಸರಿಗೆ- ಮಕ್ಕಳ ಸುರಕ್ಷತೆಗೆ ಮೆಟಾ ಮಹತ್ವದ ನಿರ್ಧಾರ

ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಇದು ಮೊದಲ ಪ್ರಮುಖ ಹೆಜ್ಜೆಯಾಗಿದ್ದು, ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಮೆಟಾ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.


Click the Play button to hear this message in audio format

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಠಿಣ ನಿಲುವು ತಳೆದಿರುವ ಬೆನ್ನಲ್ಲೇ, ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ. ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗೆ ಸಂಬಂಧಿಸಿದ ಪ್ರಕರಣಗಳನ್ನು ಇನ್ನು ಮುಂದೆ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲು ಮೆಟಾ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಯಾವುದೇ ಸಾಮಾಜಿಕ ಜಾಲತಾಣ ಸಂಸ್ಥೆ ಕಾರ್ಯನಿರ್ವಹಿಸಲು ಮಕ್ಕಳ ಆನ್‌ಲೈನ್ ಸುರಕ್ಷತೆ ಮೂಲಭೂತ ಆದ್ಯತೆಯಾಗಿದ್ದು, ಇದರಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಹಾನಿಕಾರಕ ವಿಷಯಗಳ ಪ್ರಸರಣವನ್ನು ತಡೆಯಲು ಸಾಮಾಜಿಕ ಜಾಲತಾಣ ಸಂಸ್ಥೆಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಇದು ಮೊದಲ ಪ್ರಮುಖ ಹೆಜ್ಜೆಯಾಗಿದ್ದು, ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಮೆಟಾ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಮಕ್ಕಳ ಆನ್‌ಲೈನ್ ಸುರಕ್ಷತೆ ಖಚಿತಪಡಿಸಲು ಇನ್ನೂ ಹೆಚ್ಚಿನ ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ವೇಳೆ, ಇತರ ಸಾಮಾಜಿಕ ಜಾಲತಾಣಗಳೊಂದಿಗೂ ಕೇಂದ್ರ ಸರ್ಕಾರ ನಿರಂತರ ಮಾತುಕತೆ ನಡೆಸುತ್ತಿದ್ದು, ಮಕ್ಕಳಿಗೆ ಹಾನಿಕಾರಕವಾಗಿರುವ ವಿಷಯಗಳನ್ನು ಗುರುತಿಸಿ ತೆಗೆದುಹಾಕುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳ ಸುರಕ್ಷತೆಗಾಗಿ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳದ ಯಾವುದೇ ಸಾಮಾಜಿಕ ಜಾಲತಾಣ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುವಂತಹ ಹಾನಿಕಾರಕ ವಿಷಯಗಳ ಪ್ರಸರಣವನ್ನು ತಡೆಯಲು ಸಾಮಾಜಿಕ ಜಾಲತಾಣ ಸಂಸ್ಥೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಾಡುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.

ವಿಚಾರಣೆ ಎದುರಿಸಿದ್ದ ಮೆಟಾ ಪ್ರತಿನಿಧಿಗಳು

ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಸೆಪ್ಟೆಂಬರ್ 9ರಂದು ಮೆಟಾ ಇಂಡಿಯಾದ ಪ್ರತಿನಿಧಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಮೆಟಾ ಒಡೆತನದ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ವಸ್ತುಗಳ ಜಾಹೀರಾತುಗಳು ಪ್ರಸಾರವಾಗಿವೆ ಎಂಬ ಆರೋಪಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು.

ಬಿಬಿಸಿಐ ನಡೆಸಿದ ವರದಿಯಲ್ಲಿ ಮೆಟಾ ಒಡೆತನದ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ವಸ್ತುಗಳ ಜಾಹೀರಾತುಗಳು ಕಾಣಿಸಿಕೊಂಡಿರುವ ಆರೋಪಗಳನ್ನು ಬಹಿರಂಗಪಡಿಸಲಾಗಿತ್ತು. ಈ ವರದಿಯನ್ನು ಆಧಾರವಾಗಿಸಿಕೊಂಡು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಆಯೋಗವು ಜುಲೈನಲ್ಲಿ ಮೆಟಾಗೆ ನೋಟಿಸ್ ಜಾರಿ ಮಾಡಿ ಆರೋಪಗಳ ಕುರಿತು ವಿವರಣೆ ನೀಡುವಂತೆ ಸೂಚಿಸಿತ್ತು. ಇದಕ್ಕೆ ಮೆಟಾ ಒಂದು ವಾರದ ಬಳಿಕ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿತ್ತು.

ಇದರ ಬೆನ್ನಲ್ಲೇ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಮೆಟಾ ಒಡೆತನದ ಇನ್‌ಸ್ಟಾಗ್ರಾಂನಲ್ಲಿ ಪೇಯ್ಡ್‌ ಜಾಹೀರಾತುಗಳ ಮೂಲಕ ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಪ್ರಚಾರ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.

ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯ್ದೆಯಡಿ ಸಾಮಾಜಿಕ ಜಾಲತಾಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕಾದ ವರದಿ ಸಲ್ಲಿಕೆ ನಿಯಮಗಳನ್ನು ಮೆಟಾ ಸೇರಿದಂತೆ ಇತರ ವೇದಿಕೆಗಳು ಅನುಸರಿಸುತ್ತಿವೆಯೇ ಎಂಬುದನ್ನೂ ಪರಿಶೀಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪೊಲೀಸರಿಗೆ ಸೂಚಿಸಿದೆ. ಮಕ್ಕಳನ್ನು ಗುರಿಯಾಗಿಸಿಕೊಂಡು ಹಾನಿಕಾರಕ ವಿಷಯಗಳ ಪ್ರಸರಣ ತಡೆಯುವಲ್ಲಿ ಸಾಮಾಜಿಕ ಜಾಲತಾಣ ಸಂಸ್ಥೆಗಳ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಕ್ರಮ ಮಹತ್ವ ಪಡೆದಿದೆ.

Read More
Next Story