
ಮೆಸ್ಸಿ ಕಾರ್ಯಕ್ರಮ ವಿವಾದ : 33,000 ಅಭಿಮಾನಿಗಳಿಗೆ ಟಿಕೆಟ್ ಹಣ ವಾಪಸ್
ಲಿಯೋನೆಲ್ ಮೆಸ್ಸಿ ಅವರ ಕೋಲ್ಕತ್ತಾ ಭೇಟಿಯ ವೇಳೆ ಯುುವ ಭಾರತೀ ಕ್ರೀಡಾಂಗಣದಲ್ಲಿ ನಡೆದ ಗೊಂದಲದ ಘಟನೆಗೆ ಸಂಬಂಧಿಸಿದಂತೆ ಟಿಕೆಟ್ ಖರೀದಿಸಿದ್ದ 33,000 ಅಭಿಮಾನಿಗಳಿಗೆ ಹಣ ವಾಪಸ್ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ರಾಜ್ಯದ ಕ್ರೀಡಾ ಬಜೆಟ್‌ನಿಂದ ಟಿಕೆಟ್ ಹಣವನ್ನು ಮರುಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಲಿಯೋನೆಲ್ ಮೆಸ್ಸಿ ಅವರು 2025ರ ಡಿಸೆಂಬರ್ 13ರಂದು ಕೋಲ್ಕತ್ತಾದ ಯುವ ಭಾರತೀ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. ಆದರೆ, ಮೆಸ್ಸಿ ಅವರ ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆ ಹಾಗೂ ನಿರ್ವಹಣೆಯ ವೈಫಲ್ಯದಿಂದಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರೇಕ್ಷಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಮೆಸ್ಸಿ ಕ್ರೀಡಾಂಗಣದಲ್ಲಿ ಸ್ವಲ್ಪ ಸಮಯ ಮಾತ್ರ ಕಾಣಿಸಿಕೊಂಡ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಕ್ರೀಡಾಂಗಣದಲ್ಲಿ ಹಿಂಸಾಚಾರ ಮತ್ತು ವಸ್ತುಗಳನ್ನು ಎಸೆಯುವ ಘಟನೆಗಳೂ ನಡೆದಿದ್ದವು.
ಕಾರ್ಯಕ್ರಮದ ಟಿಕೆಟ್‌ಗಳನ್ನು 4,000 ಮತ್ತು 6,000 ರೂಪಾಯಿಗೆ ಖರೀದಿಸಿದ್ದ ಪ್ರೇಕ್ಷಕರು ಹಣ ವಾಪಸ್ ನೀಡುವಂತೆ ಆಗ್ರಹಿಸಿದ್ದರು. ಆದರೆ ಘಟನೆ ನಡೆದ ಹಲವು ತಿಂಗಳುಗಳ ಬಳಿಕವೂ ಆ ಬೇಡಿಕೆ ಈಡೇರಿರಲಿಲ್ಲ ಎಂದು ವರದಿ ತಿಳಿಸಿದೆ. ಕಾರ್ಯಕ್ರಮದ ಅವ್ಯವಸ್ಥೆಗೆ ಅಂದಿನ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರ ಪಾತ್ರದ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದವು.
33,000 ಮಂದಿಗೆ ಹಣ ಮರುಪಾವತಿ
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನಬಣ್ಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, ಮೆಸ್ಸಿ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದು, ಅವರ ಕಾರ್ಯಕ್ರಮಕ್ಕಾಗಿ 33,000 ಕ್ರೀಡಾಭಿಮಾನಿಗಳು ಟಿಕೆಟ್ ಖರೀದಿಸಿದ್ದರು ಎಂದು ಹೇಳಿದರು.
4,000 ಮತ್ತು 6,000 ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ಖರೀದಿಸಿದ್ದ ಅಭಿಮಾನಿಗಳಿಗೆ ಹಣವನ್ನು ವಾಪಸ್ ನೀಡುವುದು ತಮ್ಮ ಉದ್ದೇಶವಾಗಿದೆ. ಈ ಸಂಬಂಧ ಆಂತರಿಕವಾಗಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಮರುಪಾವತಿ ಕ್ರಮವನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಣವನ್ನು ರಾಜ್ಯದ ಕ್ರೀಡಾ ಬಜೆಟ್‌ನಿಂದ ಮರುಪಾವತಿಸುವುದಾಗಿ ಅವರು ಹೇಳಿದ್ದಾರೆ. ಇದರಿಂದಾಗಿ ಮೆಸ್ಸಿ ಕಾರ್ಯಕ್ರಮದ ವೇಳೆ ಟಿಕೆಟ್ ಖರೀದಿಸಿ ಹಣ ವಾಪಸ್‌ಗಾಗಿ ಕಾಯುತ್ತಿದ್ದ ಸಾವಿರಾರು ಅಭಿಮಾನಿಗಳಿಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ.
ಕ್ರೀಡಾ ಕ್ಷೇತ್ರದ ವ್ಯವಸ್ಥೆಯಲ್ಲಿ ಬದಲಾವಣೆಗೆ ಒತ್ತು
ಮೆಸ್ಸಿ ಕಾರ್ಯಕ್ರಮದ ಗೊಂದಲವನ್ನು ಉಲ್ಲೇಖಿಸಿದ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳದ ಕ್ರೀಡಾ ಕ್ಷೇತ್ರದಲ್ಲಿ ವ್ಯವಸ್ಥಿತ ಬದಲಾವಣೆ ಅಗತ್ಯವಿದೆ ಎಂದು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಅಥವಾ ರಾಷ್ಟ್ರೀಯ ತಂಡಗಳಿಗೆ ರಾಜ್ಯದಿಂದ ಪ್ರತಿನಿಧಿಸುವ ಕ್ರೀಡಾಪಟುಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರತಿಭೆ, ಸಾಮರ್ಥ್ಯ, ಶಿಸ್ತು ಮತ್ತು ಕ್ರೀಡಾ ಆಸಕ್ತಿ ಇದ್ದರೂ ಅಗತ್ಯ ಮೂಲಸೌಕರ್ಯ, ವ್ಯವಸ್ಥೆ, ಯೋಜನೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಅವರು ಹೇಳಿದ್ದಾರೆ. ಕ್ರೀಡಾ ಕ್ಷೇತ್ರದ ಪ್ರತಿಯೊಂದು ಸಂಸ್ಥೆಯನ್ನೂ ರಾಜಕೀಯ ನಿಯಂತ್ರಣದಲ್ಲಿಡುವ ಪದ್ಧತಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದೂ ಅವರು ತಿಳಿಸಿದ್ದಾರೆ.
400 ಕೋಟಿ ರೂಪಾಯಿ ಕ್ರೀಡಾ ಬಜೆಟ್
ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ 400 ಕೋಟಿ ರೂಪಾಯಿ ಬಜೆಟ್ ಮೀಸಲಿಡಲಾಗಿದೆ ಎಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಇದು ಪೂರ್ಣ ವರ್ಷದ ಬಜೆಟ್ ಅಲ್ಲ, ಎಂಟು ತಿಂಗಳ ಅವಧಿಗೆ ಮೀಸಲಾದ ಬಜೆಟ್ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಲ್ಲಿ ಸಣ್ಣ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಈ ಕ್ರೀಡಾಂಗಣಗಳಲ್ಲಿ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣಗಳ ಜೊತೆಗೆ ವ್ಯಾಯಾಮಶಾಲೆಗಳನ್ನೂ ನಿರ್ಮಿಸಲು ಉದ್ದೇಶಿಸಲಾಗಿದೆ. ಎಲ್ಲಾ 294 ಕ್ರೀಡಾಂಗಣಗಳನ್ನು ಒಂದೇ ವರ್ಷದಲ್ಲಿ ನಿರ್ಮಿಸಲು ಸಾಧ್ಯವಿಲ್ಲದ ಕಾರಣ, ಮೊದಲ ಹಂತದಲ್ಲಿ 100 ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕ್ರೀಡಾಪಟುಗಳಿಗೆ ನೇಮಕಾತಿ ಪತ್ರ ವಿತರಣೆ
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಹಾಕಿ ಆಟಗಾರ ಗುರ್ಬಕ್ಷ್ ಸಿಂಗ್, ಕ್ರೀಡಾ ಸಚಿವ ಇಂದ್ರನಿಲ್ ಖಾನ್, ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಕಲ್ಯಾಣ್ ಚೌಬೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸುವುದರ ಜತೆಗೆ ಅವರಿಗೆ ನೇಮಕಾತಿ ಪತ್ರಗಳನ್ನೂ ವಿತರಿಸಲಾಯಿತು.
ಹಲವು ಕ್ರೀಡಾಪಟುಗಳಿಗೆ ನೇಮಕಾತಿ ನೀಡುವ ಸಂಬಂಧದ ಕಡತಗಳು 11 ವರ್ಷಗಳಿಂದ ಮುಖ್ಯಮಂತ್ರಿ ಕಚೇರಿಯಲ್ಲಿ ಬಾಕಿ ಉಳಿದಿದ್ದವು ಎಂದು ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಕ್ರೀಡಾಪಟುಗಳ ನೇಮಕಾತಿ ಹಾಗೂ ಕ್ರೀಡಾ ಕ್ಷೇತ್ರದ ಆಡಳಿತ ವ್ಯವಸ್ಥೆಯಲ್ಲಿ ವಿಳಂಬವಾಗಿರುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

