
ಪತಿಯನ್ನು ಹತ್ಯೆಗೈದ ಸೋನಂ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮೇಘಾಲಯ ಸರ್ಕಾರ- ನಾಳೆ ವಿಚಾರಣೆ
ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಸೋನಂ ರಘುವಂಶಿಗೆ ನೀಡಿದ ಜಾಮೀನು ರದ್ದುಗೊಳಿಸುವಂತೆ ಮೇಘಾಲಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ.
ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪತ್ನಿ ಸೋನಂ ರಘುವಂಶಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಮೇಘಾಲಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪ್ರಕರಣದ ತುರ್ತು ವಿಚಾರಣೆಗೆ ಮನವಿ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ಶುಕ್ರವಾರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ವಾದ
ಮೇಘಾಲಯ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸೋನಂ ರಘುವಂಶಿಗೆ ಕೇವಲ ಬಂಧನದ ವೇಳೆ ಬಂಧನದ ಕಾರಣವನ್ನು ಸಮರ್ಪಕವಾಗಿ ತಿಳಿಸಿಲ್ಲ ಎಂಬ ಆಧಾರದ ಮೇಲೆ ಜಾಮೀನು ನೀಡಲಾಗಿದೆ ಎಂದು ವಾದಿಸಿದರು. ಬಂಧನದ ವೇಳೆ ಸಂಬಂಧಿತ ಕಾನೂನು ಸೆಕ್ಷನ್ ಉಲ್ಲೇಖಿಸುವಲ್ಲಿ ಸಣ್ಣ ತಾಂತ್ರಿಕ ಅಥವಾ ಟೈಪಿಂಗ್ ದೋಷ ಸಂಭವಿಸಿದೆ. ಇಂತಹ ತಪ್ಪನ್ನು ಆಧಾರವಾಗಿಸಿಕೊಂಡು ಜಾಮೀನು ನೀಡಿರುವುದು ಸರಿಯಲ್ಲ ಎಂದು ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಇದಲ್ಲದೆ, ಜಾಮೀನು ಮುಂದುವರಿದರೆ ಸೋನಂ ತಲೆಮರೆಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ಹೈಕೋರ್ಟ್‌ನಲ್ಲಿ ಸರ್ಕಾರಕ್ಕೆ ಹಿನ್ನಡೆ
ಇದಕ್ಕೂ ಮೊದಲು ಸೋಮವಾರ, ಸೋನಂಗೆ ಕೆಳ ನ್ಯಾಯಾಲಯ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮೇಘಾಲಯ ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಮೃತ ರಾಜಾ ರಘುವಂಶಿ ಅವರ ಹಿರಿಯ ಸಹೋದರ ವಿಪಿನ್ ರಘುವಂಶಿ, ನ್ಯಾಯಕ್ಕಾಗಿ ಕುಟುಂಬವು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದರು. "ಸೋನಂಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ. ಅಗತ್ಯವಿದ್ದರೆ ಖಾಸಗಿ ವಕೀಲರನ್ನು ನೇಮಿಸಿಕೊಂಡು ಕಾನೂನು ಹೋರಾಟ ಮುಂದುವರಿಸುತ್ತೇವೆ," ಎಂದು ಅವರು ಹೇಳಿದ್ದಾರೆ.
ಹೈಕೋರ್ಟ್ ಜಾಮೀನು ನೀಡಿದ್ದೇಕೆ?
ಸೋನಂಗೆ ಜಾಮೀನು ನೀಡುವ ವೇಳೆ ಮೇಘಾಲಯ ಹೈಕೋರ್ಟ್, ಬಂಧನ ಪ್ರಕ್ರಿಯೆಯಲ್ಲಿ ಪೊಲೀಸರು ಗಂಭೀರ ಕಾನೂನು ಲೋಪ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು. ಬಂಧಿಸುವ ಸಂದರ್ಭದಲ್ಲಿ ಆರೋಪಿಗೆ ಬಂಧನದ ಸ್ಪಷ್ಟ ಕಾರಣಗಳನ್ನು ಪರಿಣಾಮಕಾರಿಯಾಗಿ ತಿಳಿಸದೇ ಇರುವುದು ಬಂಧನ ಪ್ರಕ್ರಿಯೆಯ ಮೂಲ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ಪೊಲೀಸರ ಈ ನಡೆ ಭಾರತ ಸಂವಿಧಾನದ ವಿಧಿ 22(1) ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 47(1) ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಕಾನೂನು ಏನು ಹೇಳುತ್ತದೆ?
ಸಂವಿಧಾನದ ವಿಧಿ 22(1) ಪ್ರಕಾರ, ಬಂಧಿತ ವ್ಯಕ್ತಿಗೆ ಬಂಧನದ ಕಾರಣವನ್ನು ತಕ್ಷಣ ತಿಳಿಸಬೇಕು. ಜೊತೆಗೆ ತನ್ನ ಆಯ್ಕೆಯ ವಕೀಲರನ್ನು ಸಂಪರ್ಕಿಸುವ ಹಕ್ಕು ಪ್ರತಿಯೊಬ್ಬ ಬಂಧಿತನಿಗೂ ಇದೆ. ಅದೇ ರೀತಿ, BNSS ಸೆಕ್ಷನ್ 47(1) ಪ್ರಕಾರವೂ ಬಂಧನದ ವೇಳೆ ಆರೋಪಿಗೆ ಬಂಧನದ ಕಾರಣ ಹಾಗೂ ಆರೋಪಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದು ಪೊಲೀಸರ ಕಡ್ಡಾಯ ಕರ್ತವ್ಯವಾಗಿದೆ.
ಏನಿದು ರಾಜಾ ರಘುವಂಶಿ ಹತ್ಯೆ ಪ್ರಕರಣ?
ಮಧ್ಯಪ್ರದೇಶದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರು 2025ರ ಮೇ 11ರಂದು ಸೋನಂ ರಘುವಂಶಿ ಅವರನ್ನು ವಿವಾಹವಾಗಿದ್ದರು. ಮೇ 20ರಂದು ದಂಪತಿ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಆದರೆ ಮೂರು ದಿನಗಳ ಬಳಿಕ ಸೋನಂ ನಾಪತ್ತೆಯಾಗಿದ್ದಳು. ಜೂನ್ 2ರಂದು ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಸೋಹ್ರಾ (ಚಿರಾಪುಂಜಿ) ಸಮೀಪದ ಕಂದಕದಲ್ಲಿ ರಾಜಾ ರಘುವಂಶಿ ಅವರ ಮೃತದೇಹ ಪತ್ತೆಯಾಗಿತ್ತು. ಇದಾದ ಹಲವು ದಿನಗಳ ಬಳಿಕ ಸೋನಂ ಪತ್ತೆಯಾಗಿದ್ದಳು. ವಿಚಾರಣೆ ವೇಳೆ ರಾಜಾ ರಘುವಂಶಿಯನ್ನು ಸೋನಂ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಹತ್ಯೆ ಮಾಡಿರುವುದು ಬಯಲಾಗಿತ್ತು.
ಈ ಪ್ರಕರಣದ ತನಿಖೆ ವೇಳೆ ಸೋನಂ ರಘುವಂಶಿ, ಆಕೆಯ ಪ್ರಿಯಕರ ಎಂದು ಹೇಳಲಾದ ರಾಜ್ ಕುಶ್ವಾಹಾ ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ, ಸೋನಂಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಮೇಘಾಲಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ನಡೆಯಲಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

