ಮಣಿಪುರದಲ್ಲಿ ಮತ್ತೆ ರಕ್ತಪಾತ: ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಖರ್ಗೆ ಕಿಡಿ
x

ಮಣಿಪುರದಲ್ಲಿ ಮತ್ತೆ ರಕ್ತಪಾತ: ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಖರ್ಗೆ ಕಿಡಿ

ಹಿಂಸಾಚಾರ ಆರಂಭವಾಗಿ 29 ತಿಂಗಳು ಕಳೆದರೂ ಪ್ರಧಾನಿ ಮೋದಿ ಒಮ್ಮೆಯೂ ಮಣಿಪುರಕ್ಕೆ ಕಾಲಿಟ್ಟಿಲ್ಲ. ಅವರು ನೀಡಿದ್ದ ಆಶ್ವಾಸನೆಗಳು ಸಂಪೂರ್ಣವಾಗಿ ಹುಸಿಯಾಗಿವೆ ಎಂದು ಖರ್ಗೆ ಟೀಕಿಸಿದ್ದಾರೆ.


Click the Play button to hear this message in audio format

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮೂರು ನೇರ ಹಾಗೂ ಖಡಕ್ ಪ್ರಶ್ನೆಗಳನ್ನು ಎಸೆದಿದ್ದಾರೆ. ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಅಮಾಯಕರ ಪ್ರಾಣ ಬಲಿಯಾಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಬಿಜೆಪಿಯ ಅಸಮರ್ಥತೆಯಿಂದಾಗಿ ಮಣಿಪುರದಲ್ಲಿ ಮತ್ತೆ ಅಮಾಯಕರ ರಕ್ತ ಹರಿಯುತ್ತಿದೆ. ಇತ್ತೀಚಿನ ಹಿಂಸಾಚಾರದಲ್ಲಿ ನಾಲ್ವರು ಅಮಾಯಕರು ಪ್ರಾಣ ಕಳೆದುಕೊಂಡಿರುವುದು ತೀವ್ರ ಖಂಡನೀಯ. 2023ರ ಮೇ ತಿಂಗಳಿನಿಂದ ಆರಂಭವಾದ ಈ ಹಿಂಸಾಚಾರದಲ್ಲಿ ಈವರೆಗೆ 300ಕ್ಕೂ ಅಧಿಕ ಅಮೂಲ್ಯ ಜೀವಗಳು ಬಲಿಯಾಗಿವೆ. ಸುಮಾರು 24,530ಕ್ಕೂ ಹೆಚ್ಚು ನಾಗರಿಕರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ಅಸಹಾಯಕ ಕುಟುಂಬಗಳು ಈ ಸುದೀರ್ಘ ದುರಂತದ ಭಾರವನ್ನು ನಿರಂತರವಾಗಿ ಅನುಭವಿಸುತ್ತಿದ್ದಾರೆ" ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಬಿಜೆಪಿಯು ಮಣಿಪುರದಲ್ಲಿ ಕೇವಲ ಅಧಿಕಾರ ಉಳಿಸಿಕೊಳ್ಳುವ ರಾಜಕೀಯ ಚದುರಂಗದಾಟದಲ್ಲಿ ಮುಳುಗಿದೆ. ರಾಷ್ಟ್ರಪತಿ ಆಳ್ವಿಕೆ ಹೇರುವುದು, ಮುಖ್ಯಮಂತ್ರಿಯನ್ನು ಬದಲಾಯಿಸುವುದು, ಮತ್ತೆ ತನ್ನದೇ ಸರ್ಕಾರವನ್ನು ಪ್ರತಿಷ್ಠಾಪಿಸುವುದು—ಇಂತಹ ಯಾವುದೇ ರಾಜಕೀಯ ಗಿಮಿಕ್‌ಗಳಿಂದ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗಿಲ್ಲ. ಹಿಂಸಾಚಾರ ಆರಂಭವಾಗಿ ಬರೋಬ್ಬರಿ 29 ತಿಂಗಳುಗಳು ಕಳೆದರೂ ಪ್ರಧಾನಿ ಮೋದಿ ಒಮ್ಮೆಯೂ ಮಣಿಪುರಕ್ಕೆ ಕಾಲಿಟ್ಟಿಲ್ಲ. ಸಂಸತ್ತಿನಲ್ಲಿ ಅವರು ನೀಡಿದ್ದ ಆಶ್ವಾಸನೆಗಳು ಸಂಪೂರ್ಣವಾಗಿ ಹುಸಿಯಾಗಿವೆ" ಎಂದು ನೇರವಾಗಿ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.

ಖರ್ಗೆ ಅವರ ಮೂರು ಪ್ರಶ್ನೆಗಳು

ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ಗಡಿ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರಕ್ತಪಾತವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಬಿಜೆಪಿ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದಿರುವ ಖರ್ಗೆ, ಈ ಕೆಳಗಿನ ಮೂರು ಪ್ರಶ್ನೆಗಳಿಗೆ ಕೇಂದ್ರ ಉತ್ತರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. "2023ರ ಜೂನ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದಲ್ಲಿ ರಚಿಸುವುದಾಗಿ ಘೋಷಿಸಿದ್ದ ಶಾಂತಿ ಸಮಿತಿ ಏನಾಯಿತು? ಆ ಸಮಿತಿಯ ಸಭೆಗಳು ಎಲ್ಲಿ ನಡೆದವು ಮತ್ತು ಅದರ ಫಲಿತಾಂಶವೇನು?"

"ಸೂಕ್ಷ್ಮ ಗಡಿ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು, ಸಾಮಾನ್ಯ ನಾಗರಿಕರ ಜೀವ-ಆಸ್ತಿ ರಕ್ಷಿಸಲು ಮತ್ತು ಭದ್ರತಾ ಸವಾಲುಗಳನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ನಿಜವಾದ, ಸ್ಪಷ್ಟವಾದ ಕ್ರಮಗಳೇನು?" "ಸುಪ್ರೀಂ ಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿಯು ನೀಡಿದ ಪ್ರಮುಖ ಶಿಫಾರಸುಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದುವರೆಗೆ ಕೈಗೊಂಡಿರುವ ಕ್ರಮಗಳೇನು? ಪರಿಹಾರ ಶಿಬಿರಗಳಲ್ಲಿ 31 ಅಸ್ವಾಭಾವಿಕ ಸಾವುಗಳು ಸಂಭವಿಸಿವೆ ಎಂದು ಸ್ವತಃ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದರೂ, ಅಲ್ಲಿರುವ ಸಾವಿರಾರು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಏನು ಮಾಡಿದೆ?" "ಮೂರು ವರ್ಷಗಳು ಸಮೀಪಿಸುತ್ತಿವೆ, 300ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇಷ್ಟೆಲ್ಲಾ ಆದರೂ ಈ ಮಹಾನ್ ಆಡಳಿತಾತ್ಮಕ ವೈಫಲ್ಯದ ಹೊಣೆಯನ್ನು ಯಾರು ಹೊರುತ್ತಾರೆ? ಪ್ರಧಾನಿ ಮತ್ತು ಗೃಹ ಸಚಿವರು ಕಣ್ಣು ತೆರೆಯಲು ಇನ್ನೆಷ್ಟು ಹೆಣಗಳು ಬೀಳಬೇಕು?" ಎಂದು ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.

ಮೈತೇಯಿ-ಕುಕಿ ಸಂಘರ್ಷದ ನಡುವೆ ಕುಕಿ-ನಾಗಾ ಹೊಸ ಕಿಡಿ

2023ರ ಮೇ 3ರಂದು ಮಣಿಪುರದ ಕಣಿವೆ ಪ್ರದೇಶದಲ್ಲಿ ಬಹುಸಂಖ್ಯಾತರಾಗಿರುವ ಮೈತೇಯಿ ಮತ್ತು ಬೆಟ್ಟಗುಡ್ಡಗಳ ಪ್ರದೇಶದಲ್ಲಿ ವಾಸಿಸುವ 'ಕುಕಿ-ಜೋಮಿ' ಬುಡಕಟ್ಟು ಸಮುದಾಯಗಳ ನಡುವೆ ಮೀಸಲಾತಿ ಮತ್ತು ಭೂ ಹಕ್ಕುಗಳ ವಿಚಾರವಾಗಿ ಆರಂಭವಾದ ಜನಾಂಗೀಯ ಸಂಘರ್ಷವು ರಾಜ್ಯವನ್ನು ಇಬ್ಭಾಗ ಮಾಡಿದೆ. ಈ ಸಂಘರ್ಷದಲ್ಲಿ ಈವರೆಗೆ ಅಧಿಕೃತವಾಗಿ 306ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 49 ಜನರು ಇಂದಿಗೂ ನಾಪತ್ತೆಯಾಗಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಆದರೆ, ಪರಿಸ್ಥಿತಿ ಇಷ್ಟಕ್ಕೇ ನಿಲ್ಲದೆ, ಇತ್ತೀಚಿನ ತಿಂಗಳುಗಳಲ್ಲಿ ಮಣಿಪುರದಲ್ಲಿ ಮತ್ತೊಂದು ಆತಂಕಕಾರಿ ತಿರುವು ಕಂಡುಬಂದಿದೆ. ಬೆಟ್ಟದ ಬುಡಕಟ್ಟುಗಳಾದ ಕುಕಿ ಮತ್ತು ನಾಗಾ ಸಮುದಾಯಗಳ ನಡುವೆಯೂ ಭೂಮಿ ಮತ್ತು ಗಡಿ ವಿಚಾರವಾಗಿ ಸಶಸ್ತ್ರ ಸಂಘರ್ಷಗಳು ಆರಂಭವಾಗಿವೆ. ಪ್ರಸಕ್ತ ವರ್ಷದ ಆರಂಭದಿಂದೀಚೆಗೆ ಕುಕಿ-ನಾಗಾ ಜನಾಂಗೀಯ ಘರ್ಷಣೆಗಳಲ್ಲಿಯೇ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಡಜನ್‌ಗಟ್ಟಲೆ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಈ ಸಂಘರ್ಷವು ತಮೆಂಗ್ಲಾಂಗ್, ನೊನೆ, ಕಾಂಗ್‌ಪೋಕ್ಪಿ, ಉಖ್ರುಲ್ ಮತ್ತು ಕಾಮ್‌ಜೊಂಗ್ ಜಿಲ್ಲೆಗಳಿಗೆ ವ್ಯಾಪಿಸಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಕಾಮ್‌ಜೊಂಗ್‌ನಲ್ಲಿ ಬೆಳಿಗ್ಗೆಯೇ ಮನೆಗಳಿಗೆ ಬೆಂಕಿ

ಬುಧವಾರ ಮುಂಜಾನೆ ಮಣಿಪುರದ ಕಾಮ್‌ಜೊಂಗ್ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದೆ. ಚಸ್ಸಾದ್ ಗ್ರಾಮದ ಸಮೀಪವಿರುವ ಖೋಯ್ಕೈ ಕುಕಿ ಎಂಬ ಗ್ರಾಮಕ್ಕೆ ಮುಂಜಾನೆ ಸುಮಾರು 5:30ರ ವೇಳೆಗೆ ನುಗ್ಗಿದ ಶಂಕಿತ ಉಗ್ರರು/ಬಂಡುಕೋರರು ಹಲವು ಮನೆಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕುಕಿ ಮತ್ತು ನಾಗಾ ಸಮುದಾಯಗಳ ನಡುವಿನ ಉದ್ವಿಗ್ನತೆಯಿಂದಾಗಿ ಗ್ರಾಮಸ್ಥರು ಈ ಹಿಂದೆಯೇ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಇಡೀ ಗ್ರಾಮ ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ರವಾನಿಸಲಾಗಿದ್ದು, ಬೆಂಕಿ ಹಚ್ಚಿದ ಕಿಡಿಗೇಡಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story