
ಮಂಗಳೂರನ್ನು ಮೈಸೂರು ರೈಲ್ವೆಗೆ ವರ್ಗಾಯಿಸಿದ ಕೇಂದ್ರದ ವಿರುದ್ಧ ಕೇರಳಂ ಆಕ್ರೋಶ
ಪಾಲಕ್ಕಾಡ್ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳಂ ಸರ್ಕಾರವು ತೀವ್ರವಾಗಿ ವಿರೋಧಿಸಿದೆ.
ಕೇರಳದ ಪಾಲಕ್ಕಾಡ್ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ (ನೈಋತ್ಯ ರೈಲ್ವೆ) ವರ್ಗಾಯಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳಂ ಸರ್ಕಾರ ವಿರೋಧಿಸಿದೆ. ರೈಲ್ವೆ ಇಲಾಖೆಯ ಕ್ರಮವನ್ನು ಕೇರಳಂ ಸರ್ಕಾರವು ಏಕಪಕ್ಷೀಯ ಮತ್ತು ರಾಜ್ಯದ ಹಿತಾಸಕ್ತಿಗೆ ವಿರುದ್ಧ ಎಂದು ಟೀಕಿಸಿದ್ದು, ಕೇಂದ್ರವು ತಕ್ಷಣವೇ ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ದಶಕಗಳಿಂದ ಪಾಲಕ್ಕಾಡ್ ರೈಲ್ವೆ ವಿಭಾಗದ ಅವಿಭಾಜ್ಯ ಅಂಗವಾಗಿದ್ದ ಮಂಗಳೂರು ಪ್ರದೇಶವು ಆರ್ಥಿಕವಾಗಿ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ನ್ಯೂ ಮಂಗಳೂರು ಬಂದರು ಪ್ರಾಧಿಕಾರ ಮತ್ತು ಪ್ರಮುಖ ಕೈಗಾರಿಕಾ ವಲಯಗಳನ್ನು ಸಂಪರ್ಕಿಸುವ ಈ ರೈಲ್ವೆ ಮಾರ್ಗವು ಪಾಲಕ್ಕಾಡ್ ವಿಭಾಗದ ಅತಿ ದೊಡ್ಡ ಆದಾಯದ ಮೂಲವಾಗಿದೆ. ಈ ಪ್ರದೇಶವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲು ಆದೇಶಿಸಿದೆ. ಇದಕ್ಕೆ ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಕ್ರಮವು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ. ಮಂಗಳೂರು ವಿಭಾಗವು ಪಾಲಕ್ಕಾಡ್ ವಿಭಾಗದ ಬೆನ್ನೆಲುಬಾಗಿದೆ. ಇದನ್ನು ಕಸಿದುಕೊಳ್ಳುವುದರಿಂದ ಪಾಲಕ್ಕಾಡ್ ವಿಭಾಗದ ಆದಾಯ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ. ಇದು ವಿಭಾಗದ ಅಭಿವೃದ್ಧಿ ಕಾಮಗಾರಿಗಳ ಮೇಲೆ ನೇರ ಪರಿಣಾಮ ಬೀರಲಿದೆ. ದಕ್ಷಿಣ ರೈಲ್ವೆಯ ಭಾಗವಾಗಿದ್ದ ಉಳ್ಳಾಲ-ಮಂಗಳೂರು ವಲಯವನ್ನು ನೈಋತ್ಯ ರೈಲ್ವೆಗೆ ಸೇರಿಸುವುದರಿಂದ ಆಡಳಿತಾತ್ಮಕ ತೊಡಕುಗಳು ಉಂಟಾಗಲಿವೆ. ರಾಜ್ಯ ಸರ್ಕಾರದ ಜೊತೆಗೆ ಯಾವುದೇ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ರಾಜ್ಯದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ನಾಯಕರ ತೀವ್ರ ಪ್ರತಿರೋಧ
ಕಾಸರಗೋಡು ಸಂಸದ ರಾಜ್‌ಮೋಹನ್ ಉನ್ನಿತನ್, ಮಂಗಳೂರು ಕಳೆದುಕೊಂಡರೆ, ಪಾಲಕ್ಕಾಡ್ ವಿಭಾಗವು ಆರ್ಥಿಕವಾಗಿ ದುರ್ಬಲಗೊಳ್ಳುತ್ತದೆ. ಭವಿಷ್ಯದಲ್ಲಿ, ಲಾಭದಾಯಕವಲ್ಲ ಎಂಬ ನೆಪವೊಡ್ಡಿ, ಈ ವಿಭಾಗವನ್ನು ಸೇಲಂ ಅಥವಾ ತಿರುವನಂತಪುರಂ ವಿಭಾಗಗಳೊಂದಿಗೆ ವಿಲೀನಗೊಳಿಸುವ ಅಪಾಯವಿದೆ. ಇದು ಪಾಲಕ್ಕಾಡ್‌ನ ಅಸ್ತಿತ್ವವನ್ನೇ ಅಳಿಸಿ ಹಾಕುವ ಪ್ರಯತ್ನ ಎಂದು ಎಚ್ಚರಿಸಿದ್ದಾರೆ. ಪಾಲಕ್ಕಾಡ್ ಸಂಸದ ವಿ.ಕೆ. ಶ್ರೀಕಂದನ್, ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಪಾಲಕ್ಕಾಡ್ ವಿಭಾಗವನ್ನು ದುರ್ಬಲಗೊಳಿಸುತ್ತಿದೆ. ಯಾವುದೇ ಕಾರಣ ನೀಡದೆ ಇಂತಹ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.
ಆರ್ಥಿಕ ಮತ್ತು ಕಾರ್ಯತಂತ್ರದ ಪರಿಣಾಮಗಳು
ರೈಲ್ವೆ ತಜ್ಞರ ಪ್ರಕಾರ, ಪಾಲಕ್ಕಾಡ್ ವಿಭಾಗವು ದಕ್ಷಿಣ ರೈಲ್ವೆಯಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ವಿಭಾಗಗಳಲ್ಲಿ ಒಂದಾಗಿದೆ. ಸರಕು ಸಾಗಣೆ, ವಿಶೇಷವಾಗಿ ಮಂಗಳೂರು ಬಂದರಿನ ಮೂಲಕ ನಡೆಯುವ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಕೈಗಾರಿಕಾ ಕಚ್ಚಾ ವಸ್ತುಗಳ ಸಾಗಣೆಯು ಪಾಲಕ್ಕಾಡ್ ವಿಭಾಗದ ಆದಾಯದ ಪ್ರಮುಖ ಮೂಲವಾಗಿದೆ. ಈ ಆದಾಯದ ಮೂಲವನ್ನು ಕಸಿದುಕೊಳ್ಳುವುದು ವಿಭಾಗದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನೇ ಕುಂಠಿತಗೊಳಿಸುತ್ತದೆ. ಅಲ್ಲದೆ, ರೈಲ್ವೆ ಸಿಬ್ಬಂದಿಯ ನಿಯೋಜನೆ, ರೈಲುಗಳ ವೇಳಾಪಟ್ಟಿ ಮತ್ತು ಪ್ರಯಾಣಿಕರ ಸೌಕರ್ಯಗಳ ವಿಷಯದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ.
ಕೇರಳಂ ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪ್ರಧಾನಿ ಮತ್ತು ರೈಲ್ವೆ ಸಚಿವಾಲಯಕ್ಕೆ ದೂರು ಸಲ್ಲಿಸಲಾಗುವುದು. ಸಂಸತ್ತಿನ ಉಭಯ ಸದನಗಳಲ್ಲಿ ಕೇರಳದ ಸಂಸದರು ಒಗ್ಗೂಡಿ ಈ ನಿರ್ಧಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿರುವ ರೈಲ್ವೆ ಸಂಘಟನೆಗಳು ಮತ್ತು ಸಾರ್ವಜನಿಕ ಸಂಘಟನೆಗಳು ಕೂಡ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಘೋಷಿಸಿವೆ.

