ಮಗ ಸತ್ತಿದ್ದಾನೆಂದು ಅಪರಿಚಿತ ಶವಕ್ಕೆ ಅಂತ್ಯಸಂಸ್ಕಾರ; ತಿಂಗಳ ಬಳಿಕ ಮನೆಗೆ ಬಂದ ಪುತ್ರ!
x

ಸುಮಾರು ಒಂದು ತಿಂಗಳ ಬಳಿಕ ಸನಾತನ್ ಜೀವಂತವಾಗಿ ಮನೆಗೆ ಮರಳಿದ್ದಾರೆ.

ಮಗ ಸತ್ತಿದ್ದಾನೆಂದು ಅಪರಿಚಿತ ಶವಕ್ಕೆ ಅಂತ್ಯಸಂಸ್ಕಾರ; ತಿಂಗಳ ಬಳಿಕ ಮನೆಗೆ ಬಂದ ಪುತ್ರ!

ಒಡಿಶಾದಲ್ಲಿ ನಾಪತ್ತೆಯಾಗಿದ್ದ ಯುವಕನ ಶವವೆಂದು ಭಾವಿಸಿ ಕುಟುಂಬ ಅಂತ್ಯಸಂಸ್ಕಾರ ನೆರವೇರಿಸಿತ್ತು. ತಿಂಗಳ ಬಳಿಕ ಆತ ಜೀವಂತವಾಗಿ ಮನೆಗೆ ಮರಳಿದ್ದು, ಶವ ಯಾರದ್ದು ಎಂಬ ಪ್ರಶ್ನೆ ಮೂಡಿದೆ.


Click the Play button to hear this message in audio format

ಒಡಿಶಾದ ಧೆಂಕನಾಲ್ ಜಿಲ್ಲೆಯಲ್ಲಿ ನಡೆದ ವಿಚಿತ್ರ ಘಟನೆಯೊಂದು ಇಡೀ ಕುಟುಂಬವನ್ನೇ ಬೆಚ್ಚಿಬೀಳಿಸಿದೆ. 29 ವರ್ಷದ ಸನಾತನ್ ನಾಯಕ್ ಎಂಬುವರು ಸತ್ತು ಬದುಕಿದ ಕತೆಯಿದು. ಹೊಲದಲ್ಲಿ ಪತ್ತೆಯಾದ ಕೊಳೆತ ಶವವೊಂದನ್ನು ಪೋಷಕರು ತಮ್ಮ ಮಗ ಸನಾತನ್​ ಅವರದ್ದೇ ಎಂದು ತಪ್ಪಾಗಿ ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸಿತ್ತು. ಅಷ್ಟೇ ಅಲ್ಲ, ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ದುಃಖದಲ್ಲಿತ್ತು ಆದರೆ, ಸುಮಾರು ಒಂದು ತಿಂಗಳ ಬಳಿಕ ಸನಾತನ್ ನಾಯಕ್ ಜೀವಂತವಾಗಿ ಮನೆಗೆ ಮರಳಿದ್ದು ಕುಟುಂಬಕ್ಕೆ ಆಘಾತದ ಜೊತೆಗೆ ಅಪಾರ ನೆಮ್ಮದಿಯನ್ನೂ ತಂದಿದೆ.

ಅಂತ್ಯಸಂಸ್ಕಾರ ಮಾಡಿದ್ದು ಯಾರ ಶವಕ್ಕೆ?

ಜುಲೈ 27ರಂದು ಸೈಕಲ್‌ನಲ್ಲಿ ಮನೆಯಿಂದ ಹೊರಟಿದ್ದ ಸನಾತನ್ ನಾಯಕ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜುಲೈ 27ರಂದು ಸೈಕಲ್‌ನಲ್ಲಿ ಮನೆಯಿಂದ ಹೊರಗೆ ಹೋದ ಬಳಿಕ ಅವರು ಮರಳಿ ಬಂದಿರಲಿಲ್ಲ. ಮೊದಲಿಗೆ ಕುಟುಂಬಸ್ಥರು ಅವರು ಯಾವುದಾದರೂ ಸಂಬಂಧಿಕರ ಮನೆಗೆ ಹೋಗಿರಬಹುದು, ಕೆಲವೇ ದಿನಗಳಲ್ಲಿ ವಾಪಸ್ ಬರುತ್ತಾರೆ ಎಂದುಕೊಂಡಿದ್ದರು. ಆದರೆ ದಿನಗಳು ಕಳೆದರೂ ಸನಾತನ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಸಂಬಂಧಿಕರ ಮನೆಗಳು ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಹೊಲದಲ್ಲಿ ಪತ್ತೆಯಾದ ಕೊಳೆತ ಶವ

ಸನಾತನ್ ನಾಪತ್ತೆಯಾದ ಸುಮಾರು 10 ದಿನಗಳ ಬಳಿಕ ಅವರ ಮನೆಯ ಸಮೀಪದ ಭತ್ತದ ಗದ್ದೆಯೊಂದರಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು. ಶವ ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಕೆಲಕಾಲ ನೀರಿನಲ್ಲಿ ಬಿದ್ದಿದ್ದಿರಬಹುದು ಎಂದು ತಿಳಿದುಬಂದಿತ್ತು. ಪೊಲೀಸರು ಶವ ಪತ್ತೆಯಾಗಿರುವ ವಿಷಯವನ್ನು ಸನಾತನ್ ಕುಟುಂಬಕ್ಕೆ ತಿಳಿಸಿದರು. ಆದರೆ ಕುಟುಂಬಸ್ಥರು ಸ್ಥಳಕ್ಕೆ ತೆರಳುವ ವೇಳೆಗೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ನಂತರ ಶವದ ಮೇಲಿದ್ದ ಬಟ್ಟೆಗಳನ್ನು ಆಧರಿಸಿ ಕುಟುಂಬಸ್ಥರು ಅದು ಸನಾತನ್ ಅವರದ್ದೇ ಎಂದು ಗುರುತಿಸಿದರು.

ಮಗನೆಂದು ಭಾವಿಸಿ ಅಂತ್ಯಸಂಸ್ಕಾರ

ಬಟ್ಟೆಗಳ ಆಧಾರದ ಮೇಲೆ ಶವವನ್ನು ಸನಾತನ್ ಅವರದ್ದೇ ಎಂದು ನಂಬಿದ ಕುಟುಂಬ, ಶವವನ್ನು ಪಡೆದುಕೊಂಡು ಅಂತ್ಯಸಂಸ್ಕಾರ ನೆರವೇರಿಸಿತು. ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ಶುದ್ಧಿಕ್ರಿಯೆಯನ್ನೂ ನಡೆಸಿತು.

ಕುಟುಂಬಸ್ಥರು ಸನಾತನ್ ಮೃತಪಟ್ಟಿದ್ದಾರೆ ಎಂದು ನಂಬಿ ಶೋಕಾಚರಣೆ ಆರಂಭಿಸಿದ್ದರು. ಅವರ ಪತ್ನಿಯೂ ಪತಿಯ ಸಾವಿನ ಬಳಿಕ ವಿಧವೆಯಾಗಿ ಪಾಲಿಸಬೇಕಾದ ಸಂಪ್ರದಾಯಗಳನ್ನು ಅನುಸರಿಸಲು ಆರಂಭಿಸಿದ್ದರು. ಕುಟುಂಬಕ್ಕೆ ಸನಾತನ್ ಇನ್ನಿಲ್ಲ ಎಂಬ ನೋವಿನ ನಡುವೆ ದಿನಗಳು ಸಾಗುತ್ತಿದ್ದವು.

‘ನಿಮ್ಮ ಮಗ ಬದುಕಿದ್ದಾನೆ’ ಎಂದ ಪೊಲೀಸರು

ಆದರೆ ಸುಮಾರು ಒಂದು ತಿಂಗಳ ಬಳಿಕ ನಡೆದ ಘಟನೆಯೊಂದು ಕುಟುಂಬದ ದುಃಖವನ್ನೇ ಸಂತೋಷವಾಗಿ ಪರಿವರ್ತಿಸಿತು. ಸನಾತನ್ ನಾಯಕ್ ಜೀವಂತವಾಗಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಕುಟುಂಬಕ್ಕೆ ನೀಡಿದರು. ಮೊದಲು ಈ ಸುದ್ದಿ ಕೇಳಿದ ಕುಟುಂಬಸ್ಥರಿಗೆ ನಂಬಲಾಗಲಿಲ್ಲ. ನಂತರ ಸಂಬಂಧಿಕರು ತಕ್ಷಣ ಅವರು ಪತ್ತೆಯಾದ ಸ್ಥಳಕ್ಕೆ ತೆರಳಿ ಸನಾತನ್ ಅವರನ್ನು ಮನೆಗೆ ಕರೆತಂದರು.

ಜೀವಂತವಾಗಿಯೇ ಸನಾತನ್ ಮನೆಗೆ ಮರಳುತ್ತಿದ್ದಂತೆ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಯಿತು. ವಿಶೇಷವಾಗಿ ಪತ್ನಿ ಸೇರಿದಂತೆ ಕುಟುಂಬ ಸದಸ್ಯರಿಗೆ ಇದು ನಂಬಲಸಾಧ್ಯವಾದ ವಿಷಯವಾಗಿತ್ತು.

‘ಬಟ್ಟೆ ನೋಡಿ ಮಗನೆಂದು ಗುರುತಿಸಿದ್ದೆವು’

ಸನಾತನ್ ಅವರ ತಾಯಿ ಮಂಜು ನಾಯಕ್ ಈ ಘಟನೆ ಕುರಿತು ಮಾತನಾಡಿದ್ದು, ಮಗ ಜುಲೈ 27ರಂದು ಮನೆಯಿಂದ ಹೊರಟಿದ್ದ ಎಂದು ತಿಳಿಸಿದ್ದಾರೆ. ಕೆಲವು ದಿನಗಳಾದರೂ ಮಗ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ಆರಂಭಿಸಿದ್ದರು. ಬಳಿಕ ಹೊಲದಲ್ಲಿ ಯುವಕನೊಬ್ಬನ ಕೊಳೆತ ಶವ ಪತ್ತೆಯಾಗಿರುವ ಮಾಹಿತಿ ಸಿಕ್ಕಿತ್ತು.

ಆ ಶವ ಸನಾತನ್ ಅವರದ್ದಾಗಿರಬಹುದು ಎಂದು ಕುಟುಂಬಕ್ಕೆ ಅನುಮಾನ ಬಂದಿತ್ತು. ಆದರೆ ಸನಾತನ್ ಸಾಮಾನ್ಯವಾಗಿ ಆ ಪ್ರದೇಶಕ್ಕೆ ಹೋಗುತ್ತಿರಲಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಆದರೂ ಶವದ ಮೇಲಿದ್ದ ಬಟ್ಟೆಗಳನ್ನು ಆಧರಿಸಿ ಅದು ತಮ್ಮ ಮಗನದ್ದೇ ಎಂದು ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಸುಮಾರು ಒಂದು ತಿಂಗಳ ಬಳಿಕ ಪೊಲೀಸರು ಸನಾತನ್ ಬದುಕಿದ್ದಾರೆ ಎಂದು ತಿಳಿಸಿದಾಗ ಕುಟುಂಬಕ್ಕೆ ಆಘಾತವಾಯಿತು ಎಂದು ಮಂಜು ನಾಯಕ್ ಹೇಳಿದ್ದಾರೆ.

ಹಾಗಾದರೆ ಸುಟ್ಟುಹೋದ ಶವ ಯಾರದ್ದು?

ಈ ಘಟನೆ ಇದೀಗ ಕುಟುಂಬ ಮಾತ್ರವಲ್ಲ, ಪೊಲೀಸರ ಮುಂದೆಯೂ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಭತ್ತದ ಗದ್ದೆಯಲ್ಲಿ ಪತ್ತೆಯಾದ ಶವ ಸನಾತನ್ ಅವರದ್ದಲ್ಲ ಎಂದಾದರೆ, ಆ ಶವ ಯಾರದ್ದು? ಶವದ ಗುರುತು ಇನ್ನೂ ಅಧಿಕೃತವಾಗಿ ಪತ್ತೆಯಾಗಿಲ್ಲ. ಸನಾತನ್ ಕುಟುಂಬವು ಬಟ್ಟೆಗಳನ್ನು ಆಧರಿಸಿ ಶವವನ್ನು ಗುರುತಿಸಿತ್ತು ಎನ್ನಲಾಗಿದ್ದು, ಇದೀಗ ಸನಾತನ್ ಜೀವಂತವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆ ಶವದ ನಿಜವಾದ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಪ್ರಮುಖ ಸವಾಲಾಗಿದೆ.

Read More
Next Story