
ಸುಪ್ರೀಂ ಕೋರ್ಟ್ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ
ಬಿಜೆಪಿ, ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಮಮತಾ ಮುಂದು; ಸಿಎಂ ಸ್ಥಾನಕ್ಕೆ ರಾಜೀನಾಮೆ ಇಲ್ಲ!
"ಕೇಂದ್ರ ಸರ್ಕಾರ ಬಯಸಿದರೆ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಿ, ಆದರೆ ಅದು ಅಧಿಕೃತ ದಾಖಲೆಗಳಲ್ಲಿ ನಮೂದಾಗಬೇಕು" ಎಂದು ಕೇಂದ್ರಕ್ಕೆ ಮಮತಾ ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕವೂ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ಚುನಾವಣೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ತಮ್ಮ ನಿವಾಸದಲ್ಲಿ ಗೆದ್ದ ಟಿಎಂಸಿ ಶಾಸಕರೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, "ಬಿಜೆಪಿ ಚುನಾವಣೆಯಲ್ಲಿ ಅಕ್ರಮವೆಸಗಿದೆ ಮತ್ತು ಜನಾದೇಶವನ್ನು ಬಲವಂತವಾಗಿ ಕಸಿದುಕೊಂಡಿದೆ" ಎಂದು ತೀವ್ರ ವಾಗ್ದಾಳಿ ನಡೆಸಿದರು. ಈ ಜನಾದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಅವರು ಘೋಷಿಸಿದ್ದಾರೆ.
ಕೋರ್ಟ್ ಕಡೆಗೆ ಮಮತಾ ಒಲವು
ಕಾನೂನು ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ನಿರ್ಧರಿಸಿರುವ ಮಮತಾ, ತಾವೂ ಸೇರಿದಂತೆ ಚಂದ್ರಿಮಾ ಭಟ್ಟಾಚಾರ್ಯ ಹಾಗೂ ಇತರ ಸಹೋದ್ಯೋಗಿಗಳೊಂದಿಗೆ ನ್ಯಾಯಾಲಯದಲ್ಲಿ ತಮ್ಮ ಕಾನೂನು ವೃತ್ತಿಯನ್ನು ಪುನರಾರಂಭಿಸುವುದಾಗಿ ತಿಳಿಸಿದ್ದಾರೆ. ಸ್ಥಳೀಯವಾಗಿ ಹಿನ್ನಡೆಯಾಗಿದ್ದರೂ, ತಮ್ಮ ಪಕ್ಷದ ಪ್ರಮುಖ ಗುರಿ ದೆಹಲಿ ಆಗಿದ್ದು, 'ಇಂಡಿಯಾ' ಮೈತ್ರಿಕೂಟದ ಅಡಿಯಲ್ಲಿ ಒಗ್ಗಟ್ಟಿನ ಹೋರಾಟ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ನೀಡಲು ಸಿಎಂ ನಕಾರ
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ಮಮತಾ ಬ್ಯಾನರ್ಜಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. "ಇದು ಕಳವು ಮಾಡಲಾದ ಜನಾದೇಶವಾಗಿದ್ದು, ಅದನ್ನು ವಿರೋಧಿಸುವ ಭಾಗವಾಗಿ ನಾನು ಅಧಿಕಾರದಲ್ಲಿ ಮುಂದುವರಿಯುತ್ತೇನೆ" ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಬೆಂಬಲಿಸಿರುವ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, "ಅಧಿಕಾರದಲ್ಲಿ ಉಳಿಯುವುದೇ ನಮ್ಮ ವಿರೋಧದ ಸಂಕೇತ" ಎಂದಿದ್ದಾರೆ.
"ಕೇಂದ್ರ ಸರ್ಕಾರ ಬಯಸಿದರೆ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಿ, ಆದರೆ ಅದು ಅಧಿಕೃತ ದಾಖಲೆಗಳಲ್ಲಿ ನಮೂದಾಗಬೇಕು" ಎಂದು ಕೇಂದ್ರಕ್ಕೆ ಮಮತಾ ಸವಾಲು ಹಾಕಿದ್ದಾರೆ.
ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ
ಕ್ಷೇತ್ರಗಳಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಗೆದ್ದ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲೇ ಉಳಿಯಬೇಕು ಮತ್ತು ಯಾವುದೇ ಹಿಂಸಾಚಾರ ನಡೆಯದಂತೆ ನೇರ ಹೊಣೆಗಾರಿಕೆ ಹೊರಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೆ, ಪಕ್ಷದ ಸಾಂಸ್ಕೃತಿಕ ಅಸ್ಮಿತೆ ಮತ್ತು ಸ್ಥೈರ್ಯದ ಸಂಕೇತವಾಗಿ, ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನದಂದು ಎಲ್ಲಾ ಟಿಎಂಸಿ ಕಚೇರಿಗಳಲ್ಲಿ 'ರವೀಂದ್ರ ಸಂಗೀತ'ವನ್ನು ನುಡಿಸಲು ನಿರ್ಧರಿಸಲಾಗಿದೆ.

