
ಮಮತಾ ಬ್ಯಾನರ್ಜಿ
ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಚುನಾವಣೆಯಲ್ಲಿ ಸೋತಿಲ್ಲ: ಮಮತಾ ಬ್ಯಾನರ್ಜಿ ಹೇಳಿಕೆ
ಚುನಾವಣಾ ಪ್ರಕ್ರಿಯೆಯಲ್ಲಿ ನೇರ ಹಸ್ತಕ್ಷೇಪ ನಡೆದಿದ್ದು, ಮತದಾರರ ಪಟ್ಟಿಯಿಂದ ಬರೋಬ್ಬರಿ 90 ಲಕ್ಷ ಹೆಸರುಗಳನ್ನು ಅಳಿಸಿಹಾಕಲಾಗಿತ್ತು ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸೋಲಿನ ಬಳಿಕವೂ ದಿಟ್ಟತನ ಪ್ರದರ್ಶಿಸಿರುವ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು, ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣೆಯಲ್ಲಿ ವ್ಯಾಪಕ ಅಕ್ರಮ ಹಾಗೂ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿರುವ ಅವರು, ತಮ್ಮದು 'ನೈತಿಕ ಗೆಲುವು' ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಇಂಡಿಯಾ ಮೈತ್ರಿಕೂಟದ ನಾಯಕರು ತಮ್ಮ ಬೆಂಬಲಕ್ಕೆ ನಿಂತಿದ್ದು, ಹೊಸ ಹುರುಪಿನೊಂದಿಗೆ ರಾಜಕೀಯ ಹೋರಾಟ ಮುಂದುವರಿಸುವುದಾಗಿ ಸುಳಿವು ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಭಾರಿ ಅಕ್ರಮದ ಆರೋಪ
"ನಾನು ರಾಜೀನಾಮೆ ನೀಡುವುದಿಲ್ಲ. ನಾವು ಚುನಾವಣೆಯಲ್ಲಿ ಸೋತಿಲ್ಲ," ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗುಡುಗಿರುವ ಮಮತಾ, ತಾವು ಪ್ರಧಾನಿ ಮತ್ತು ಗೃಹ ಸಚಿವರನ್ನು ಒಳಗೊಂಡ ಇಡೀ ಸರ್ಕಾರಿ ಯಂತ್ರದ ವಿರುದ್ಧ ಹೋರಾಡಿರುವುದಾಗಿ ತಿಳಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ನೇರ ಹಸ್ತಕ್ಷೇಪ ನಡೆದಿದ್ದು, ಮತದಾರರ ಪಟ್ಟಿಯಿಂದ ಬರೋಬ್ಬರಿ 90 ಲಕ್ಷ ಹೆಸರುಗಳನ್ನು ಅಳಿಸಿಹಾಕಲಾಗಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
"ನಾವು ನ್ಯಾಯಾಲಯದ ಮೊರೆ ಹೋದಾಗ 32 ಲಕ್ಷ ಹೆಸರುಗಳನ್ನು ಮರು ಸೇರ್ಪಡೆ ಮಾಡಲಾಯಿತು. ಆದರೆ, ಏಕಕಾಲದಲ್ಲಿ ಸಲ್ಲಿಸಲಾಗಿದ್ದ ಮತ್ತೊಂದು 7 ಲಕ್ಷ ಹೆಸರುಗಳನ್ನು ಯಾರಿಗೂ ಗೊತ್ತಾಗದಂತೆ ಸೇರಿಸಲಾಗಿದೆ. ಎಂತಹ ಕೊಳಕು ಮತ್ತು ಕುತಂತ್ರದ ಆಟಗಳನ್ನು ಆಡಲಾಗಿದೆ ಎಂಬುದಕ್ಕೆ ಇದೇ ಸಾಕ್ಷಿ," ಎಂದು ಮಮತಾ ವಾಗ್ದಾಳಿ ನಡೆಸಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಿಂದಲೂ ಇಂತಹ ಭೀಕರ ಚುನಾವಣೆಯನ್ನು ನೋಡಿರಲಿಲ್ಲ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆ ವೇಳೆ ಹಿಂಸಾಚಾರ
ಮತ ಎಣಿಕೆ ಪ್ರಕ್ರಿಯೆಯಲ್ಲೂ ಹಿಂಸಾಚಾರ ಮತ್ತು ಬೆದರಿಕೆ ಒಡ್ಡಲಾಗಿದೆ ಎಂದು ನಿರ್ಗಮಿಸುವ ಮುಖ್ಯಮಂತ್ರಿ ಆರೋಪಿಸಿದ್ದಾರೆ. "ಮೊದಲ ಸುತ್ತಿನ ಎಣಿಕೆ ಮುಗಿಯುತ್ತಿದ್ದಂತೆ, ಬಿಜೆಪಿ 195-200 ಸ್ಥಾನಗಳನ್ನು ಪಡೆಯಲಿದೆ ಎಂದು ಬಿಂಬಿಸಲು ಶುರುಮಾಡಿದರು. ಅಂತಿಮ ಫಲಿತಾಂಶಕ್ಕಾಗಿ ಕಾಯಲಿಲ್ಲ. ಆ ಬಳಿಕ, ಬಿಜೆಪಿ ನಾಯಕರು ಮತಗಟ್ಟೆಗಳ ಒಳನುಗ್ಗಿ ನಮ್ಮ ಕಾರ್ಯಕರ್ತರು ಮತ್ತು ಎಣಿಕೆ ಏಜೆಂಟರ ಮೇಲೆ ಹಲ್ಲೆ ನಡೆಸಿದರು," ಎಂದು ಅವರು ವಿವರಿಸಿದರು.
ತಾವು ಸುಮಾರು 30,000 ಮತಗಳ ಮುನ್ನಡೆಯಲ್ಲಿದ್ದಾಗ, ಬಿಜೆಪಿ ಅಭ್ಯರ್ಥಿ 200 ಸಿಆರ್ ಪಿಎಫ್ ಸಿಬ್ಬಂದಿ ಮತ್ತು 200ಕ್ಕೂ ಹೆಚ್ಚು ಗೂಂಡಾಗಳೊಂದಿಗೆ ಎಣಿಕೆ ಕೇಂದ್ರದ ಒಳನುಗ್ಗಿದರು. ಮಹಿಳೆಯರನ್ನೂ ಬಿಡದೆ ನಮ್ಮವರ ಮೇಲೆ ಹಲ್ಲೆ ನಡೆಸಿ, ಎಲ್ಲಾ ಫಾರ್ಮ್‌ಗಳನ್ನು ಕಸಿದುಕೊಂಡರು ಎಂದು ಮಮತಾ ಆರೋಪಿಸಿದ್ದಾರೆ.
"ನನ್ನ ಮೇಲೂ ಹಲ್ಲೆ ನಡೆಸಿದರು"
ಮತ ಎಣಿಕೆ ಕೇಂದ್ರದ ಬಳಿ ತಮ್ಮ ಮೇಲೂ ಹಲ್ಲೆ ನಡೆದಿದೆ ಎಂದು ಮಮತಾ ಸ್ಫೋಟಕ ಮಾಹಿತಿ ನೀಡಿದ್ದಾರೆ. "ಅವರು ನನ್ನ ಕಾರನ್ನು ತಡೆದರು, ಆಗ ನಾನು ಬೇರೆ ದಾರಿಯಲ್ಲಿ ಹೋದೆ. ಒಳಗೆ ಪ್ರವೇಶಿಸುತ್ತಿದ್ದಂತೆ ಸಿಆರ್ ಪಿಎಫ್ ಸಿಬ್ಬಂದಿ ನನ್ನನ್ನು ತಡೆದರು. ನಾನು ಅಭ್ಯರ್ಥಿ ಎಂದು ಹೇಳಿದರೂ ಕೇಳದೆ, ನನ್ನ ಹೊಟ್ಟೆ ಮತ್ತು ಬೆನ್ನಿಗೆ ಒದ್ದು ಹಲ್ಲೆ ಮಾಡಿದರು. ಆ ಸಮಯದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು," ಎಂದು ಅವರು ಆರೋಪಿಸಿದ್ದಾರೆ. ಈ ಎಲ್ಲಾ ದೌರ್ಜನ್ಯಗಳ ವಿರುದ್ಧ ಹೋರಾಡುವುದಾಗಿ ಗುಡುಗಿರುವ ಅವರು, "ನಾನು ಬೀದಿಯಲ್ಲಿದ್ದೆ, ಮುಂದೆಯೂ ಬೀದಿಯಲ್ಲೇ ಇರುತ್ತೇನೆ" ಎಂದು ಎಚ್ಚರಿಸಿದ್ದಾರೆ.
ಬೆಂಬಲಕ್ಕೆ ನಿಂತ ಇಂಡಿಯಾ ಮೈತ್ರಿಕೂಟ
ಚುನಾವಣಾ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟದ ನಾಯಕರು ತಮ್ಮನ್ನು ಸಂಪರ್ಕಿಸಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎಂದು ಮಮತಾ ತಿಳಿಸಿದ್ದಾರೆ. "ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಮತ್ತು ಹೇಮಂತ್ ಸೊರೇನ್ ಕರೆ ಮಾಡಿದ್ದರು. ಮೈತ್ರಿಕೂಟದ ಎಲ್ಲರೂ ನನ್ನ ಜೊತೆಗಿದ್ದಾರೆ. ಅಖಿಲೇಶ್ ಅವರು ಇಂದೇ ಭೇಟಿಯಾಗಲು ಬಯಸಿದ್ದರು, ನಾಳೆ ಬರುವಂತೆ ಹೇಳಿದ್ದೇನೆ. ಪ್ರತಿಯೊಬ್ಬರೂ ಭೇಟಿಯಾಗಲಿದ್ದಾರೆ," ಎಂದರು.
ಈಗ ನಾನು "ಸ್ವತಂತ್ರ ಹಕ್ಕಿ"
ಇದೀಗ ಯಾವುದೇ ಅಧಿಕಾರ ಇಲ್ಲದೆ ಸಾಮಾನ್ಯ ಕಾರ್ಯಕರ್ತೆಯಂತೆ ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದು ತಮ್ಮ ಗುರಿ ಎಂದು ಮಮತಾ ಹೇಳಿದ್ದಾರೆ. "ನಾನು ಈಗ ಸ್ವತಂತ್ರ ಹಕ್ಕಿ. ನನ್ನ ಇಡೀ ಜೀವನವನ್ನು ಜನರ ಸೇವೆಗೆ ಮುಡಿಪಾಗಿಟ್ಟಿದ್ದೇನೆ. 15 ವರ್ಷಗಳ ಅಧಿಕಾರಾವಧಿಯಲ್ಲಿ ನಾನು ಒಂದು ಪೈಸೆ ಪಿಂಚಣಿ ಅಥವಾ ವೇತನವನ್ನು ಪಡೆದಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಂದಿನ ಕಾರ್ಯತಂತ್ರವನ್ನು ಪಕ್ಷದ ಮುಖಂಡರು ಮತ್ತು ಮೈತ್ರಿಕೂಟದ ನಾಯಕರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.

