ಹಲ್ದ್ವಾನಿ ಶುದ್ಧೀಕರಣ ವಿವಾದ: ಜೆ.ಪಿ. ನಡ್ಡಾಗೆ ಖರ್ಗೆ ಪತ್ರ, ಭರವಸೆ ಈಡೇರಿಸಲು ಆಗ್ರಹ
x

ಹಲ್ದ್ವಾನಿ ಶುದ್ಧೀಕರಣ ವಿವಾದ: ಜೆ.ಪಿ. ನಡ್ಡಾಗೆ ಖರ್ಗೆ ಪತ್ರ, ಭರವಸೆ ಈಡೇರಿಸಲು ಆಗ್ರಹ

ರಾಜ್ಯಸಭೆಯಲ್ಲಿ ನೀಡಿದ ಭರವಸೆ ಕೇವಲ ಮಾತಿಗೆ ಸೀಮಿತವಾಯಿತೇ? ಘಟನೆ ನಡೆದು ಮೂರು ವಾರ ಕಳೆದರೂ ಎಫ್‌ಐಆರ್ ದಾಖಲಿಸದಿರುವುದು ಆಶ್ಚರ್ಯಕರ ಮತ್ತು ಆಕ್ಷೇಪಾರ್ಹ ಎಂದು ಖರ್ಗೆ ದೂರಿದ್ದಾರೆ.


Click the Play button to hear this message in audio format

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಲಾದ ಘಟನೆಗೆ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದನದಲ್ಲಿ ನೀಡಿದ ಭರವಸೆಯಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರಿಗೆ ಕಟುವಾಗಿ ಪತ್ರ ಬರೆದಿದ್ದಾರೆ.

ಕಳೆದ ತಿಂಗಳು ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಂಡು ಭಾಷಣ ಮಾಡಿದ್ದರು. ಖರ್ಗೆ ಅವರು ಕಾರ್ಯಕ್ರಮ ಮುಗಿಸಿ ತೆರಳಿದ ನಂತರ, ಆ ಸ್ಥಳದಲ್ಲಿ ನಡೆದ ಶುದ್ಧೀಕರಣ ಪ್ರಕ್ರಿಯೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಖರ್ಗೆ ಅವರು ದಲಿತ ಸಮುದಾಯದ ನಾಯಕರಾಗಿರುವುದರಿಂದ, ಅವರು ನಿಂತ ಸ್ಥಳವನ್ನು ಅಪವಿತ್ರವೆಂದು ಭಾವಿಸಿ ಈ ರೀತಿ ನಡೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದು ನೇರವಾಗಿ ಅಸ್ಪೃಶ್ಯತೆಯ ಆಚರಣೆ ಎಂದು ವ್ಯಾಖ್ಯಾನಿಸಲಾಗಿತ್ತು.

ಈ ವಿಷಯವನ್ನು ಆಗಸ್ಟ್ 13ರಂದು ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಸ್ತಾಪಿಸಿದ್ದರು. ಈ ಸಂದರ್ಭದಲ್ಲಿ ಸದನದಲ್ಲಿದ್ದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ಇದು ಅತ್ಯಂತ ದುಃಖಕರ ಸಂಗತಿ. ಇದು ಕೇವಲ ಕಾಂಗ್ರೆಸ್ ಪಕ್ಷಕ್ಕಲ್ಲ, ದೇಶಕ್ಕೇ ಅಗೌರವ. ಭಾರತೀಯ ಜನತಾ ಪಕ್ಷವು ಅಂತಹ ಯಾವುದೇ ಜಾತಿವಾದಿ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ. ಘಟನೆಯ ಕುರಿತು ಖಂಡಿತವಾಗಿಯೂ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಖರ್ಗೆ ಅವರ ಪತ್ರದಲ್ಲಿ ಏನಿದೆ?

ಘಟನೆ ನಡೆದು 24 ದಿನಗಳು ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರು ಜೆ.ಪಿ. ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ನೀವು ನೀಡಿದ ಭರವಸೆ ಕೇವಲ ಮಾತಿಗೆ ಸೀಮಿತವಾಯಿತೇ? ಘಟನೆ ನಡೆದು ಮೂರು ವಾರ ಕಳೆದರೂ ಎಫ್‌ಐಆರ್ ದಾಖಲಿಸದಿರುವುದು ಆಶ್ಚರ್ಯಕರ ಮತ್ತು ಆಕ್ಷೇಪಾರ್ಹ ಎಂದು ಖರ್ಗೆ ದೂರಿದ್ದಾರೆ. ನಾನು ಮಾತನಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ್ದು ಕೇವಲ ನನಗೆ ಮಾಡಿದ ಅವಮಾನವಲ್ಲ, ಇದು ದೇಶದ ಸಂವಿಧಾನದ ಆಶಯ ಮತ್ತು ಮಾನವೀಯ ಮೌಲ್ಯಗಳಿಗೇ ಮಾಡಿದ ಅಪಮಾನ. ಇದು ನೇರವಾಗಿ ಅಸ್ಪೃಶ್ಯತೆಯನ್ನು ಪ್ರೇರೇಪಿಸುವ ಕೃತ್ಯ ಎಂದು ಬರೆದಿದ್ದಾರೆ.

ಮಹದ್ ಚಳವಳಿಯ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರ್ವಜನಿಕ ಕೊಳದಿಂದ ನೀರು ಕುಡಿದಾಗ, ಜಾತಿವಾದಿಗಳು 108 ಮಡಕೆ ಗೋಮೂತ್ರ ಮತ್ತು ಸಗಣಿ ಬಳಸಿ ಶುದ್ಧೀಕರಣ ಮಾಡಿದ್ದನ್ನು ಖರ್ಗೆ ನೆನಪಿಸಿದ್ದಾರೆ. ಮಂತ್ರ ಪಠಣಗಳಿಂದ ಪಾವಿತ್ರ್ಯತೆ ಬರುವುದಿಲ್ಲ, ಅಸ್ಪೃಶ್ಯತೆ ಆಚರಿಸುವವರ ಮನಸ್ಥಿತಿಯೇ ಕಲುಷಿತವಾಗಿದೆ ಎಂದು ಕಿಡಿಕಾರಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಮಾತ್ರವಲ್ಲದೆ, ಇಂತಹ ಘಟನೆಗಳನ್ನು ನಿತ್ಯ ಎದುರಿಸುವ ಕೋಟ್ಯಂತರ ಜನರ ಧ್ವನಿಯಾಗಿ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಿರ್ದೇಶನ ನೀಡಿ, ಶುದ್ಧೀಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರಾಜಕೀಯ ದುಷ್ಪರಿಣಾಮಗಳು

ಈ ವಿಷಯವು ಈಗ ದಲಿತ ಮತ್ತು ಹಿಂದುಳಿದ ವರ್ಗಗಳ ರಾಜಕೀಯದ ಕೇಂದ್ರಬಿಂದುವಾಗಿದೆ. ಬಿಜೆಪಿ ಸರ್ಕಾರದ ಮೌನವು ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ, ರಾಜ್ಯ ಸರ್ಕಾರವು ಕಾನೂನು ಕ್ರಮ ಕೈಗೊಳ್ಳುವ ಬದಲು ಪ್ರಕರಣವನ್ನು ಹಳ್ಳ ಹಿಡಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸದನದಲ್ಲಿ ಭರವಸೆ ನೀಡಿದ ಜೆ.ಪಿ. ನಡ್ಡಾ ಅವರು ಈಗ ಈ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಒಂದು ಕಡೆ ಕೇಂದ್ರ ಸರ್ಕಾರವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಘೋಷಿಸುತ್ತಿದ್ದರೆ, ಇನ್ನೊಂದು ಕಡೆ ಇಂತಹ ಘಟನೆಗಳು ನಡೆಯುತ್ತಿರುವುದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ. ಸದ್ಯದ ಪರಿಸ್ಥಿತಿಯಲ್ಲಿ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷವು ಇದನ್ನು ದೊಡ್ಡ ಮಟ್ಟದ ಪ್ರತಿಭಟನೆಯಾಗಿ ಪರಿವರ್ತಿಸಲು ಸಿದ್ಧತೆ ನಡೆಸಿದೆ.

Read More
Next Story