ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
x

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಚುನಾವಣಾ ಆಯೋಗದ ಕಾರ್ಯವೈಖರಿಯ ಮೇಲೆ ಪ್ರಭಾವ ಬೀರುತ್ತಿರುವ ಆರೋಪ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.


Click the Play button to hear this message in audio format

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪಗಳನ್ನು ಮಾಡಿದ್ದು, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಚುನಾವಣಾ ಆಯೋಗದ ಕಾರ್ಯವೈಖರಿಯ ಮೇಲೆ ಪ್ರಭಾವ ಬೀರುತ್ತಿರುವ ಆರೋಪ ಹೊರಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಖರ್ಗೆ ಕಠಿಣವಾಗಿ ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸುವಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬದಲು, ಆಡಳಿತಾರೂಢ ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂಬುದು ದೇಶದ ಜನತೆಗೆ ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಐದು ಪ್ರಮುಖ ಬೇಡಿಕೆಗಳು

ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮತದಾರರ ಪಟ್ಟಿಯಲ್ಲಿ ಕೈಗೊಳ್ಳಲಾದ ಎಲ್ಲಾ ಬದಲಾವಣೆಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾದ ವ್ಯಕ್ತಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯನ್ನು ಸರಳ ಸ್ವರೂಪದಲ್ಲಿ, ನಿಗದಿತ ಸಮಯದೊಳಗೆ ಒದಗಿಸಬೇಕು. ಲೋಪದೋಷಗಳು ಕಂಡುಬಂದಿರುವ ಕಡೆಗಳಲ್ಲಿ ತಕ್ಷಣವೇ ಸ್ವತಂತ್ರ ಮತ್ತು ನಿರ್ದಿಷ್ಟ ಕಾಲಮಿತಿಯ ತನಿಖೆಯನ್ನು ನಡೆಸಬೇಕು. ಚುನಾವಣಾ ಪ್ರಕ್ರಿಯೆಯು ಯಾವುದೇ ಅನುಮಾನಗಳಿಗೆ ಆಸ್ಪದ ನೀಡದಂತೆ ಸಂಪೂರ್ಣ ಪಾರದರ್ಶಕವಾಗಿರಬೇಕು ಎಂದು ಆಗ್ರಹಿಸಿದರು.

ಆಯೋಗದ ಆಂತರಿಕ ಬಿಕ್ಕಟ್ಟು

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರಸ್ತಾಪಿಸಿದ ಖರ್ಗೆ, ಆಯೋಗದ ಇಬ್ಬರು ಆಯುಕ್ತರೇ ಸಿಇಸಿ ಅವರ ಕಾರ್ಯವೈಖರಿಯನ್ನು "ಸ್ವೇಚ್ಛಾಚಾರದ ಮತ್ತು ಅಸಮಂಜಸ" ಎಂದು ಕರೆದಿರುವುದು ಆತಂಕಕಾರಿ ವಿಷಯವಾಗಿದೆ. "ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಸಿಇಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಈಗ ಇಡೀ ದೇಶಕ್ಕೆ ಗೊತ್ತಾಗಿದೆ. ಇಂತಹ ಸಂವಿಧಾನಬದ್ಧ ಹುದ್ದೆಯ ಘನತೆಯನ್ನು ಮರೆತವರಿಗೆ ಆ ಸ್ಥಾನದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಆಯುಕ್ತರ ಮೇಲೆ ಒತ್ತಡ ಹೇರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಖರ್ಗೆ ಕಿಡಿಕಾರಿದ್ದಾರೆ. ಸಂವಿಧಾನಬದ್ಧ ಸಂಸ್ಥೆಗಳ ಸ್ವಾಯತ್ತತೆಯನ್ನು ನಾಶಪಡಿಸುತ್ತಿರುವ ಪ್ರಧಾನಿಯವರು, ತಮ್ಮ ನೈತಿಕ ಹೊಣೆಯನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ದೇಶದ ಪ್ರತಿಯೊಬ್ಬ ನಾಗರಿಕನ ಮತದ ಹಕ್ಕನ್ನು ರಕ್ಷಿಸುವುದು ಸಂವಿಧಾನದ ಮೂಲ ಮಂತ್ರವಾಗಿದ್ದು, ಈ ಜವಾಬ್ದಾರಿಯನ್ನು ಪೂರೈಸುವಲ್ಲಿ ಕಾಂಗ್ರೆಸ್ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೀದಿಗಿಳಿದು ಹೋರಾಟದ ಎಚ್ಚರಿಕೆ

ಚುನಾವಣಾ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಲ್ಲದೆ, ದೇಶಾದ್ಯಂತ ಬೀದಿಗಿಳಿದು ಬೃಹತ್ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಈಗಾಗಲೇ ಈ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದು, ಅವರ ಬೆಂಬಲಕ್ಕೆ ನಿಂತಿರುವ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರಿಗೆ ಖರ್ಗೆ ಧನ್ಯವಾದಗಳು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಅಂತಿಮ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದರು.

Read More
Next Story