ಹೊಸ ಆರ್‌ಟಿಐ ನಿಯಮಗಳ ವಿರುದ್ಧ ಅಣ್ಣಾ ಹಜಾರೆ ಆಕ್ರೋಶ, ಜುಲೈ 5ರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
x

ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದುವ ಹಕ್ಕಿದೆ. 

ಹೊಸ ಆರ್‌ಟಿಐ ನಿಯಮಗಳ ವಿರುದ್ಧ ಅಣ್ಣಾ ಹಜಾರೆ ಆಕ್ರೋಶ, ಜುಲೈ 5ರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

ಆರ್‌ಟಿಐ ಅರ್ಜಿ ಶುಲ್ಕ 10 ರಿಂದ 30 ರೂಪಾಯಿಗೆ ಹೆಚ್ಚಿಸಿರುವುದು, ಅರ್ಜಿಯ ಪದಗಳ ಮಿತಿ 150ಕ್ಕೆ ಸೀಮಿತಗೊಳಿಸಿರುವುದು ಹಾಗೂ ಮಾಹಿತಿ ಕೇಳುವವರ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿರುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ನೂತನ ಮಾಹಿತಿ ಹಕ್ಕು (ಆರ್‌ಟಿಐ) ತಿದ್ದುಪಡಿ ನಿಯಮಗಳನ್ನು ವಿರೋಧಿಸಿರುವ ಹಿರಿಯ ಸಮಾಜಸೇವಕ ಅಣ್ಣಾ ಹಜಾರೆ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಸಮರ ಸಾರಿದ್ದಾರೆ. ಜೂನ್ 12ರಂದು ಹೊರಡಿಸಲಾಗಿರುವ 'ಮಹಾರಾಷ್ಟ್ರ ಆರ್‌ಟಿಐ ನಿಯಮಗಳು-2026' ಅನ್ನು ಸಂಪೂರ್ಣವಾಗಿ ಹಿಂಪಡೆಯದಿದ್ದರೆ, ಜುಲೈ 5ರಿಂದ ತಾವು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅವರು ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.

ಹೊಸ ನಿಯಮಾವಳಿಗಳು ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತವೆ ಎಂದು ಅಣ್ಣಾ ಹಜಾರೆ ಆರೋಪಿಸಿದ್ದಾರೆ. ಆರ್‌ಟಿಐ ಅರ್ಜಿಯ ಶುಲ್ಕವನ್ನು 10 ರೂಪಾಯಿಯಿಂದ 30 ರೂಪಾಯಿಗೆ ಹೆಚ್ಚಿಸಿರುವುದು, ಅರ್ಜಿಯ ಪದಗಳ ಮಿತಿಯನ್ನು 150ಕ್ಕೆ ಸೀಮಿತಗೊಳಿಸಿರುವುದು ಹಾಗೂ ಮಾಹಿತಿ ಕೇಳುವವರ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿರುವುದು ಸಾಮಾನ್ಯ ಜನರಿಗೆ ಮಾಹಿತಿ ಸಿಗದಂತೆ ಮಾಡುವ ಹುನ್ನಾರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುತಿನ ಚೀಟಿ ಕಡ್ಡಾಯ ಮಾಡುವುದರಿಂದ ಭ್ರಷ್ಟಾಚಾರವನ್ನು ಬಯಲಿಗೆಳೆಯುವವರ ಪ್ರಾಣಕ್ಕೆ ಅಪಾಯ ಎದುರಾಗಬಹುದು ಮತ್ತು ಇದು ಆರ್‌ಟಿಐ ಕಾರ್ಯಕರ್ತರನ್ನು ಬೆದರಿಸುವ ತಂತ್ರವಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬರೆದ ಪತ್ರದಲ್ಲಿ ಹಜಾರೆ ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಕಣ್ಣೊರೆಸುವ ತಂತ್ರ ಎಂದ ಹಜಾರೆ

ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಬೆನ್ನಲ್ಲೇ ಮಹಾರಾಷ್ಟ್ರದ ಮುಖ್ಯ ಮಾಹಿತಿ ಆಯುಕ್ತ ರಾಹುಲ್ ಪಾಂಡೆ ಅವರು ರಾಳೇಗಣ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದರು. ಇದರ ಪರಿಣಾಮವಾಗಿ ಎಚ್ಚೆತ್ತ ಸರ್ಕಾರ, ನಿಯಮಾವಳಿಯಲ್ಲಿ ಎರಡು ಸಣ್ಣ ಬದಲಾವಣೆಗಳನ್ನು ಮಾಡಿದೆ. ಮಾಹಿತಿ ಕೇಳುವ ಉದ್ದೇಶವನ್ನು ಸ್ಪಷ್ಟಪಡಿಸಬೇಕು ಎಂಬ ನಿಯಮವನ್ನು ಕೈಬಿಡಲಾಗಿದ್ದು, ಮೇಲ್ಮನವಿ ವಿಚಾರಣೆ ವೇಳೆ ವಕೀಲರ ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಕೇವಲ ಈ ಕಣ್ಣೊರೆಸುವ ತಂತ್ರಗಳಿಂದ ತಾವು ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹಜಾರೆ, ಪಾರದರ್ಶಕತೆಗೆ ಧಕ್ಕೆ ತರುವ ಹೊಸ ನಿಯಮಾವಳಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಜುಲೈ 5ರ ಗಡುವು

ತಮ್ಮ ಬೇಡಿಕೆ ಈಡೇರದಿದ್ದರೆ, ಜುಲೈ 5ರಂದು ರಾಳೇಗಣ ಸಿದ್ಧಿಯ ಯಾದವ್ ಬಾಬಾ ದೇವಸ್ಥಾನದಲ್ಲಿ ಪ್ರಾಣವನ್ನಾದರೂ ಪಣಕ್ಕಿಟ್ಟು ಉಪವಾಸ ಸತ್ಯಾಗ್ರಹ ಕೂರುವುದಾಗಿ ಅಣ್ಣಾ ಹಜಾರೆ ಗಡುವು ನೀಡಿದ್ದಾರೆ. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ದೇಶಾದ್ಯಂತ ದೊಡ್ಡ ಮಟ್ಟದ ಜನಾಂದೋಲನ ರೂಪಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಹಿರಿಯ ಹೋರಾಟಗಾರನ ಈ ಅಲ್ಟಿಮೇಟಂನಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಭವನೀಯ ಪ್ರತಿಭಟನೆಯ ಬಿಸಿಯಿಂದ ತಪ್ಪಿಸಿಕೊಳ್ಳಲು ಸದ್ಯಕ್ಕೆ ಹೊಸ ಆರ್‌ಟಿಐ ನಿಯಮಗಳ ಜಾರಿಗೆ ತಡೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಸರ್ಕಾರ ಮತ್ತು ಹೋರಾಟಗಾರರ ನಡುವಿನ ಸಭೆಗಳು ಈ ವಿವಾದದ ಭವಿಷ್ಯವನ್ನು ನಿರ್ಧರಿಸಲಿವೆ.

Read More
Next Story