
LIVE : ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಪ್ರಶ್ನಿಸಿದ ಸುಪ್ರೀಂ; ಸಂಸತ್‌ನಲ್ಲಿ ಗದ್ದಲ
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಕಠಿಣ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡಿಸುತ್ತಿದೆ. 10 ವರ್ಷ ಜೈಲು, 10 ಕೋಟಿ ರೂ. ದಂಡದ ಪ್ರಸ್ತಾವ ಇದರಲ್ಲಿ ಇದೆ.
ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದಿರುವ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ-2026 ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲು ಸರ್ಕಾರ ಮುಂದಾಗಿದೆ. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಮಸೂದೆಯನ್ನು ಸದನದಲ್ಲಿ ಮಂಡಿಸಲಿದ್ದು, 2024ರ ಕಾಯ್ದೆಗೆ ತಿದ್ದುಪಡಿ ತರಲು ಅನುಮತಿ ಕೋರಿ ಬಳಿಕ ಚರ್ಚೆ ಹಾಗೂ ಅಂಗೀಕಾರಕ್ಕೆ ಮುಂದಾಗಲಿದ್ದಾರೆ.
ಲೋಕಸಭೆಯ ಕಲಾಪ ಬೆಳಿಗ್ಗೆ 11 ಗಂಟೆಗೆ ಪ್ರಶ್ನೋತ್ತರ ಅವಧಿಯೊಂದಿಗೆ ಆರಂಭವಾಗಲಿದ್ದು, ನಂತರ ದಿನದ ಶಾಸನ ಕಾರ್ಯಗಳಲ್ಲಿ ಈ ಮಹತ್ವದ ಮಸೂದೆಗೆ ಆದ್ಯತೆ ನೀಡಲಾಗುತ್ತದೆ.
ಈ ತಿದ್ದುಪಡಿ ಮಸೂದೆಯ ಪ್ರಮುಖ ಉದ್ದೇಶ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ಹೆಚ್ಚಿಸುವುದಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ವಂಚನೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ, 10 ಕೋಟಿ ರೂ.ವರೆಗೆ ದಂಡ, ಅಕ್ರಮದಲ್ಲಿ ಭಾಗಿಯಾದವರ ಆಸ್ತಿಯನ್ನು ವಶಪಡಿಸಿಕೊಳ್ಳುವ ಅಧಿಕಾರ ಸೇರಿದಂತೆ ಕಠಿಣ ಶಿಕ್ಷೆಗಳ ಪ್ರಸ್ತಾವವನ್ನು ಮಸೂದೆ ಒಳಗೊಂಡಿದೆ. ಜೊತೆಗೆ ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ವ್ಯವಸ್ಥೆ ರೂಪಿಸಿ, ಮೂರು ತಿಂಗಳೊಳಗೆ ತೀರ್ಪು ನೀಡುವ ವ್ಯವಸ್ಥೆಯನ್ನೂ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಕೇಂದ್ರ ಸಚಿವ ಸಂಪುಟವು ಕಳೆದ ಶುಕ್ರವಾರ ಈ ಮಸೂದೆಗೆ ಹಾಗೂ ಸಂಬಂಧಿತ ನಿಯಮಗಳಿಗೆ ಅನುಮೋದನೆ ನೀಡಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವವೂ ಇದರಲ್ಲಿ ಸೇರಿದೆ.
ಇದೇ ವೇಳೆ, ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ-2026ಯನ್ನೂ ಲೋಕಸಭೆ ಪರಿಗಣಿಸಲಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು 1956ರ ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ಕಾಯ್ದೆಗೆ ತಿದ್ದುಪಡಿ ತರುವ ಈ ಮಸೂದೆಯನ್ನು ಚರ್ಚೆಗೆ ಮಂಡಿಸಲಿದ್ದಾರೆ.
Live Updates
- 27 July 2026 9:56 AM IST
NEET ವಿವಾದದ ಬಳಿಕ ಕೇಂದ್ರದ ಹೊಸ ಮಸೂದೆ ಇಂದು ಮಂಡನೆ
ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಸಾರ್ವಜನಿಕ ಪರೀಕ್ಷೆಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ–2026 ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಸೂದೆಯನ್ನು ಸದನದಲ್ಲಿ ಮಂಡಿಸಲಿದ್ದು, ಈ ಕುರಿತು ಎಂಟರಿಂದ ಹತ್ತು ಗಂಟೆಗಳ ಕಾಲ ಚರ್ಚೆ ನಡೆಯುವ ಸಾಧ್ಯತೆ ಇದೆ. ಎನ್‌ಡಿಎ ಪರವಾಗಿ ಬಿಜೆಪಿ ಸಂಸದರಾದ ಬನ್ಸುರಿ ಸ್ವರಾಜ್ ಹಾಗೂ ತೇಜಸ್ವಿ ಸೂರ್ಯ ಚರ್ಚೆಗೆ ಮುನ್ನಡೆ ನೀಡುವ ನಿರೀಕ್ಷೆಯಿದೆ.
ಮಸೂದೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತ್ವರಿತ ವಿಚಾರಣೆಗೆ ಪ್ರತಿ ರಾಜ್ಯದಲ್ಲೂ ವಿಶೇಷ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವವಿದೆ. ಅಲ್ಲದೆ, ಇಂತಹ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವ ವ್ಯವಸ್ಥೆಯನ್ನೂ ಒಳಗೊಂಡಿದೆ.
ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಮಸೂದೆಗೆ ಮಹತ್ವ ಹೆಚ್ಚಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.
ಚರ್ಚೆಯಲ್ಲಿ ತೆಲುಗು ದೇಶಂ ಪಕ್ಷದ ಲಾವು ಶ್ರೀಕೃಷ್ಣ ದೇವರಾಯಲು, ಜೆಡಿಯು ಪಕ್ಷದ ರಾಜೀವ್ ರಂಜನ್ ಸಿಂಗ್, ಶಿವಸೇನೆಯ ಶ್ರೀಕಾಂತ್ ಶಿಂಡೆ, ಎನ್‌ಸಿಪಿಯ ಸುನೀಲ್ ತಟ್ಕರೆ, ಅಪ್ನಾ ದಳದ ಅನುಪ್ರಿಯಾ ಪಟೇಲ್ ಹಾಗೂ ಲೋಕ ಜನಶಕ್ತಿ ಪಕ್ಷದ ಅರುಣ್ ಭಾರತಿ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಹಲವು ಸಂಸದರು ಭಾಗವಹಿಸುವ ಸಾಧ್ಯತೆ ಇದೆ.
- 27 July 2026 9:51 AM IST
`ಚಲೋ ಸಂಸತ್' ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್; ಲೋಕಸಭೆಯಲ್ಲಿ ಚರ್ಚೆಗೆ ಕಾಂಗ್ರೆಸ್ ಆಗ್ರಹ
ಜುಲೈ 20ರಂದು ಜಂತರ್ ಮಂತರ್ ಸಮೀಪ ನಡೆದ 'ಚಲೋ ಸಂಸತ್' ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಕ್ರಮದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಕಾಂಗ್ರೆಸ್ ಸಂಸದ ಹಿಬಿ ಈಡನ್ ಲೋಕಸಭೆಯಲ್ಲಿ ಮುಂದೂಡಿಕೆ ಸೂಚನೆ ಸಲ್ಲಿಸಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ರ್ಯಾಪಿಡ್ ಆಕ್ಷನ್ ಫೋರ್ಸ್ ಸೇರಿದಂತೆ ಭದ್ರತಾ ಸಿಬ್ಬಂದಿ ಅತಿಯಾದ ಮತ್ತು ಅಸಮಂಜಸ ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಕ್ರಮವು ಗಂಭೀರ ಸಾರ್ವಜನಿಕ ಮಹತ್ವದ ವಿಷಯವಾಗಿದ್ದು, ಈ ಕುರಿತು ಲೋಕಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.



