
ಲೋಕಸಭೆ ಸ್ಥಾನಗಳನ್ನು 850ಕ್ಕೆ ಏರಿಸುವ ಕೇಂದ್ರದ ಪ್ರಸ್ತಾಪ
Delimitation| ಲೋಕಸಭಾ ಸ್ಥಾನಗಳ ಸಂಖ್ಯೆ 850 ಕ್ಕೆ ಏರಿಸಲು ಕೇಂದ್ರ ಸರ್ಕಾರ ಪ್ರಸ್ತಾವ
ಲೋಕಸಭೆ ಸ್ಥಾನಗಳನ್ನು 850ಕ್ಕೆ ಏರಿಸುವ ಕೇಂದ್ರದ ಪ್ರಸ್ತಾವ ಹಾಗೂ ಕ್ಷೇತ್ರ ಮರುವಿಂಗಡಣೆ ಮಸೂದೆ ಕುರಿತು ಯೋಗೇಂದ್ರ ಯಾದವ್ ಮತ್ತು ಸಿಎಂ ಸ್ಟಾಲಿನ್ ವ್ಯಕ್ತಪಡಿಸಿರುವ ತೀವ್ರ ವಿರೋಧದ ಸಮಗ್ರ ವಿವರ ಇಲ್ಲಿದೆ.
ದೇಶದಲ್ಲಿರುವ ಒಟ್ಟು 543 ಲೋಕಸಭಾ ಕ್ಷೇತ್ರಗಳನ್ನು ಕ್ಷೇತ್ರ ಪುನರ್ವಿಂಗಡಣೆ ಮೂಲಕ 850ಕ್ಕೆ ಹೆಚ್ಚಿಸುವ ಮಹತ್ವದ ಪ್ರಸ್ತಾವನೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಕ್ಷೇತ್ರ ಪುನರ್ವಿಂಗಡಣೆ ಯೋಜನೆಯನ್ವಯ ವಿವಿಧ ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸ್ಥಾನಗಳನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಸೂದೆಯನ್ನು ಗುರುವಾರ (ಏ.16) ಸಂಸತ್ತಿನಲ್ಲಿ ಮಂಡಿಸಲು ಆಡಳಿತ ರೂಢ ಬಿಜೆಪಿ ಸರ್ಕಾರ ಸಜ್ಜಾಗಿದೆ. ಇದೇ ಸಲುವಾಗಿ ಏ.16 ರಿಂದ 18 ರವರೆಗೆ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ.
ಪ್ರಸ್ತುತ 543 ಸದಸ್ಯ ಬಲ ಹೊಂದಿರುವ ಲೋಕಸಭೆಯಲ್ಲಿ ಮಹತ್ವದ ಬದಲಾವಣೆ ತರಲು ಸಂವಿಧಾನದ 131ನೇ ತಿದ್ದುಪಡಿ ಮಸೂದೆ ಪ್ರಸ್ತಾವನೆಯನ್ನು ಈಗಾಗಲೇ ಸಂಸದರಿಗೆ ವಿತರಿಸಲಾಗಿದೆ.
ʼಒಕ್ಕೂಟ ವ್ಯವಸ್ಥೆಯ ಭರವಸೆಗಳಿಗೆ ದ್ರೋಹʼ
ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ʼʼಇದು ಒಕ್ಕೂಟ ವ್ಯವಸ್ಥೆಯ ಭರವಸೆಗಳಿಗೆ ಮಾಡಿದ ದ್ರೋಹ" ಎಂದು ಟೀಕಿಸಿದ್ದಾರೆ. ಮಹಿಳಾ ಮೀಸಲಾತಿ ಜಾರಿಗೆ ತರುವ ನೆಪದಲ್ಲಿ ಅವಧಿಗೂ ಮುನ್ನವೇ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಸುಗಮಗೊಳಿಸಲು ಸರ್ಕಾರ ಈ ತಂತ್ರ ಹೂಡಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸುದೀರ್ಘವಾಗಿ ಬರೆದಿರುವ ಯಾದವ್, ʻʻಈ ಮಸೂದೆಯು ಸೀಟುಗಳ ಸಂಪೂರ್ಣ ಮರುಹಂಚಿಕೆ ಮತ್ತು ವ್ಯಾಪಕವಾದ ಗೆರಿಮ್ಯಾಂಡರಿಂಗ್‌ಗೆ (ಕ್ಷೇತ್ರಗಳ ಅಸಮರ್ಪಕ ವಿನ್ಯಾಸ) ಅವಕಾಶ ನೀಡಲಿದೆ. ಇದು ದೇಶದ ಹಲವು ಪ್ರದೇಶಗಳಲ್ಲಿ ರಾಜಕೀಯ ಅಧಿಕಾರದ ಹಕ್ಕು ಕಸಿದುಕೊಳ್ಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯವಾರು ಪ್ರಾತಿನಿಧ್ಯ ರಕ್ಷಿಸುವ ಬಗ್ಗೆ ಪ್ರಧಾನಮಂತ್ರಿಗಳು ನೀಡಿದ್ದ ಭರವಸೆಯನ್ನು ಈ ಮಸೂದೆ ಉಲ್ಲಂಘಿಸಿದೆʼʼ ಎಂದು ಆರೋಪಿಸಿದ್ದಾರೆ.
ಮಸೂದೆಯ ಪ್ರಮುಖ ಅಂಶಗಳನ್ನು ವಿಶ್ಲೇಷಿಸಿರುವ ಯಾದವ್, ʻʻ1971ರ ಜನಗಣತಿಯ ಆಧಾರದ ಮೇಲೆ ಸೀಟು ಹಂಚಿಕೆಗೆ ಇದ್ದ ನಿರ್ಬಂಧವನ್ನು ಸರ್ಕಾರ ಯಾವುದೇ ರಕ್ಷಣಾತ್ಮಕ ನಿಯಮಗಳಿಲ್ಲದೆ ತೆಗೆದುಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
815 ಸ್ಥಾನಗಳ ಏರಿಕೆಯು ಮಹಿಳಾ ಮೀಸಲಾತಿಗೆ ಅನಿವಾರ್ಯ ಎಂದು ಸರ್ಕಾರ ಸಮರ್ಥಿಸಿಕೊಂಡರೂ ಇದು ಹಳೆಯ ಸಾಂವಿಧಾನಿಕ ರಕ್ಷಣೆಗಳನ್ನು ಮೀರುವ ತಂತ್ರವಾಗಿದೆ. ಅಲ್ಲದೆ, ಸೀಮಾ ನಿರ್ಣಯಕ್ಕೆ ಯಾವ ಜನಗಣತಿ ಬಳಸಬೇಕು ಎನ್ನುವ ನಿರ್ಧಾರವನ್ನು ಸಂವಿಧಾನದಿಂದ ಕಾನೂನಿನ ವ್ಯಾಪ್ತಿಗೆ ತರಲಾಗುತ್ತಿದೆ. ಕ್ಷೇತ್ರ ಮರುವಿಂಗಡಣಾ ಆಯೋಗದ ಕೆಲಸವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲದಿರುವುದು ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಪ್ರಜಾಪ್ರಭುತ್ವದ ಸಮತೋಲನ ಹಾಳುಗೆಡವಲಿದೆʼʼ ಎಂದು ಟೀಕಿಸಿದ್ದಾರೆ.
ಮೋದಿ ಸರ್ಕಾರಕ್ಕೆ ಸ್ಟಾಲಿನ್ ಎಚ್ಚರಿಕೆ
ಇನ್ನೊಂದೆಡೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೇಂದ್ರ ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕ್ಷೇತ್ರ ಮರುವಿಂಗಡಣೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆಯಾದರೆ ಅಥವಾ ಉತ್ತರ ಭಾರತದ ರಾಜ್ಯಗಳ ರಾಜಕೀಯ ಪ್ರಭಾವ ಅತಿಯಾದರೆ ಇಡೀ ರಾಜ್ಯವನ್ನೇ ಬಂದ್ ಮಾಡಿ, ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕ್ರಿಯೆಯ ಬಗ್ಗೆ ಯಾವುದೇ ರಾಜಕೀಯ ಪಕ್ಷ ಅಥವಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಕೇಂದ್ರವು ಅತ್ಯಂತ ರಹಸ್ಯ ಮತ್ತು ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ. ಮಸೂದೆಯ ಬಗ್ಗೆ ಸೂಕ್ತ ವಿವರಣೆ ನೀಡದಿರುವುದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಳವಳ ಮತ್ತು ಸಂಶಯ ಹುಟ್ಟುಹಾಕಿದೆ ಎಂದು ಅವರು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.

