ರಕ್ಷಾ ಬಂಧನ ಜಾಹೀರಾತು ವಿವಾದ; ಕೃತಿ ಸನಾನ್‌ ಜಾಹೀರಾತು ಹಿಂಪಡೆದ ಜಿವಾ
x

ಜಾಹೀರಾತಿನಲ್ಲಿ ಕೃತಿ ತಮ್ಮ ಸಹೋದರನೊಂದಿಗೆ ಸಾಕು ನಾಯಿಗೂ ರಾಖಿ ಕಟ್ಟುವ ದೃಶ್ಯವಿತ್ತು.

ರಕ್ಷಾ ಬಂಧನ ಜಾಹೀರಾತು ವಿವಾದ; ಕೃತಿ ಸನಾನ್‌ ಜಾಹೀರಾತು ಹಿಂಪಡೆದ ಜಿವಾ

ಜಾಹೀರಾತಿನಿಂದ ಸಮಾಜದ ಕೆಲವು ವರ್ಗಗಳ ಭಾವನೆಗಳಿಗೆ ನೋವುಂಟಾಗಿದ್ದರೆ ಅದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ʻಗಿವʼ ಹೇಳಿದೆ. ಗೌರವದ ಸಂಕೇತವಾಗಿ ವಿವಾದಿತ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆಯಲಾಗಿದೆ ಎಂದು ಬ್ರ್ಯಾಂಡ್ ತಿಳಿಸಿದೆ.


Click the Play button to hear this message in audio format

ನಟಿ ಕೃತಿ ಸನೂನ್ ಅಭಿನಯಿಸಿರುವ ರಕ್ಷಾಬಂಧನ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ ಆಭರಣ ಬ್ರ್ಯಾಂಡ್ `ಗಿವ' (GIVA) ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆದಿದೆ. ಜಾಹೀರಾತಿನಲ್ಲಿ ಕೃತಿ ಧರಿಸಿದ್ದ ಉಡುಪು ಹಾಗೂ ಹಬ್ಬವನ್ನು ಚಿತ್ರಿಸಿರುವ ರೀತಿಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ರಕ್ಷಾ ಬಂಧನಕ್ಕಾಗಿ ರೂಪಿಸಲಾಗಿದ್ದ ಜಾಹೀರಾತಿನಲ್ಲಿ ಕೃತಿ ಸನೂನ್ ಆಫ್-ವೈಟ್ ಬಣ್ಣದ ಆಧುನಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಬ್ರಾಲೆಟ್ ಮಾದರಿಯ ಬ್ಲೌಸ್, ಕೇಪ್ ಹಾಗೂ ಡ್ರೇಪ್ ಸ್ಕರ್ಟ್ ಒಳಗೊಂಡ ಅವರ ಲುಕ್ ಸಾಂಪ್ರದಾಯಿಕ ಹಬ್ಬದ ಜಾಹೀರಾತಿಗೆ ಸೂಕ್ತವಲ್ಲ ಎಂದು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಟೀಕಿಸಿದ್ದರು.

ಸಹೋದರನ ಜತೆಗೆ ಸಾಕು ನಾಯಿಗೂ ರಾಖಿ

ಜಾಹೀರಾತಿನಲ್ಲಿ ಕೃತಿ ತಮ್ಮ ಸಹೋದರನೊಂದಿಗೆ ಸಾಕು ನಾಯಿಗೂ ರಾಖಿ ಕಟ್ಟುವ ದೃಶ್ಯವಿತ್ತು. ಸಾಂಪ್ರದಾಯಿಕ ರಕ್ಷಾ ಬಂಧನ ಆಚರಣೆಯಲ್ಲಿ ಕಾಣುವ ಆರತಿ ಮತ್ತು ತಿಲಕದಂತಹ ಆಚರಣೆಗಳು ಇಲ್ಲದಿರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ಟೀಕೆ ವ್ಯಕ್ತಪಡಿಸಿದ್ದರು. ಸಹೋದರ-ಸಹೋದರಿ ಹಬ್ಬದ ಜಾಹೀರಾತಿನ ಸನ್ನಿವೇಶದಲ್ಲಿ ಆಯ್ಕೆ ಮಾಡಿರುವ ಉಡುಪು ಮತ್ತು ಸ್ಟೈಲಿಂಗ್ ಕುರಿತು ಅವರು ಪ್ರಶ್ನಿಸಿದ್ದರು.

‘ಭಾರತೀಯ ಸಂಸ್ಕೃತಿಗೆ ಗೌರವವಿದೆ’

ವಿವಾದದ ಬೆನ್ನಲ್ಲೇ ʻಗಿವʼ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳ ಬಗ್ಗೆ ಬ್ರ್ಯಾಂಡ್‌ಗೆ ಅತ್ಯಂತ ಗೌರವವಿದೆ ಎಂದು ತಿಳಿಸಿದೆ.

ಜಾಹೀರಾತಿನಿಂದ ಸಮಾಜದ ಕೆಲವು ವರ್ಗಗಳ ಭಾವನೆಗಳಿಗೆ ನೋವುಂಟಾಗಿದ್ದರೆ ಅದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ʻಗಿವʼ ಹೇಳಿದೆ. ಗೌರವದ ಸಂಕೇತವಾಗಿ ವಿವಾದಿತ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆಯಲಾಗಿದೆ ಎಂದು ಬ್ರ್ಯಾಂಡ್ ತಿಳಿಸಿದೆ.

‘ಮಹಿಳೆಯರ ಉಡುಪಿನ ಬಗ್ಗೆ ಯಾವಾಗ ಪ್ರಶ್ನಿಸುವುದನ್ನು ನಿಲ್ಲಿಸುತ್ತೀರಿ?’

ಜಾಹೀರಾತು ಹಿಂಪಡೆಯುವ ಒಂದು ದಿನ ಮುನ್ನ ಕೃತಿ ಸನೂನ್ ತಮ್ಮ ಉಡುಪಿನ ಬಗ್ಗೆ ಬಂದ ಟೀಕೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದರು. ಹಬ್ಬದ ಸಾರ ಉಡುಪಿನಲ್ಲಿ ಅಲ್ಲ, ಸಂಪ್ರದಾಯದ ಬಗ್ಗೆ ವ್ಯಕ್ತಿಯಲ್ಲಿರುವ ಭಾವನೆ ಮತ್ತು ಅರ್ಥದಲ್ಲಿ ಇದೆ ಎಂದು ಅವರು ಹೇಳಿದ್ದರು.

ರಕ್ಷಾ ಬಂಧನ ರಕ್ಷಣೆಯ ಬಾಂಧವ್ಯವನ್ನು ಪ್ರತಿನಿಧಿಸುತ್ತದೆ. ತಮ್ಮ ಸಹೋದರಿಯೂ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತಾರೆ ಮತ್ತು ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೃತಿ ವಿವರಿಸಿದ್ದರು. ತಮ್ಮ ನಾಯಿಗಳೂ ಕುಟುಂಬದ ಭಾಗವಾಗಿರುವುದರಿಂದ ಅವರ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನೂ ಈ ಆಚರಣೆಯೊಂದಿಗೆ ಸೇರಿಸಿಕೊಂಡಿರುವುದಾಗಿ ಅವರು ತಿಳಿಸಿದ್ದರು.

ಮಹಿಳೆಯರು ಏನು ಧರಿಸಬೇಕು ಎಂಬುದನ್ನು ಪ್ರಶ್ನಿಸುವುದನ್ನು ಯಾವಾಗ ನಿಲ್ಲಿಸುತ್ತೇವೆ ಎಂದು ಕೃತಿ ಪ್ರಶ್ನಿಸಿದ್ದರು. ಮಹಿಳೆಯೊಬ್ಬರ ಸಂಸ್ಕೃತಿಯ ಮೇಲಿನ ಗೌರವವನ್ನು ಆಕೆಯ ಉಡುಪಿನಿಂದ ಮಾತ್ರ ಅಳೆಯಬಾರದು. ಸಂಸ್ಕೃತಿ ಮತ್ತು ಸಂಪ್ರದಾಯಗಳು ಹೃದಯದಲ್ಲಿರುತ್ತವೆ ಎಂದು ಅವರು ಪ್ರತಿಪಾದಿಸಿದ್ದರು.

Read More
Next Story