
ಕೋಲ್ಕತ್ತಾ ದುರ್ಗಾ ಪೂಜಾ ಮಂಟಪದಲ್ಲಿ ಕಾಲ್ತುಳಿತ: ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ, ಮಟ್ಟದ ತನಿಖೆಗೆ ಆದೇಶ
ದುರಂತದ ನೈತಿಕ ಹೊಣೆ ಹೊತ್ತು ಚೋರ್‌ಬಗಾನ್ ದುರ್ಗಾ ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಂತ ಬ್ಯಾನರ್ಜಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದ ಚೋರ್‌ಬಗಾನ್ ದುರ್ಗಾ ಪೂಜಾ ಮಂಟಪದಲ್ಲಿ ಭಾರೀ ಮಳೆಯ ನಡುವೆಯೂ ಸೇರಿದ್ದ ಜನಸಂದಣಿಯಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಿರೀಶ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯ ಬೆನ್ನಲ್ಲೇ ಭಾನುವಾರ ನಿಗದಿಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಭೆ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಸಚಿವ ಉಮೇಶ್ ರಾಯ್ ಸ್ಪಷ್ಟಪಡಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೂಜಾ ಮಂಟಪದ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಅತ್ಯಂತ ಕಿರಿದಾಗಿದ್ದವು ಹಾಗೂ ಸೂಕ್ತ ಬೆಳಕಿನ ವ್ಯವಸ್ಥೆ ಇರಲಿಲ್ಲ. ನೂಕುನುಗ್ಗಲಿನಲ್ಲಿ ಉಸಿರುಗಟ್ಟಿ ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸ್ಥಳದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಕೊರತೆಯಿಂದಾಗಿ, ಪ್ರಜ್ಞಾಹೀನರನ್ನು ದ್ವಿಚಕ್ರ ವಾಹನಗಳ ಮೂಲಕವೇ ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸರ್ಕಾರದ ಪರಿಹಾರ ಮತ್ತು ತನಿಖೆ
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್‌ವಾಲ್ ಅವರು ಕಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಮುಖ್ಯಮಂತ್ರಿ, ಘಟನೆಯ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸುವುದಾಗಿ ಘೋಷಿಸಿದರು. ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ಉದ್ಯೋಗ, ಗಾಯಾಳುಗಳಿಗೆ ತಲಾ 5 ಲಕ್ಷ ರೂ. ಹಾಗೂ ಸಂಪೂರ್ಣ ಉಚಿತ ಚಿಕಿತ್ಸೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ನಾಗರಿಕರ ನೆರವಿಗಾಗಿ ರಾಜ್ಯ ಸರ್ಕಾರ 18003455678 ಟೋಲ್ ಫ್ರೀ ಸಹಾಯವಾಣಿಯನ್ನು ಆರಂಭಿಸಿದೆ.
ಪ್ರಧಾನಿ, ಗೃಹ ಸಚಿವರ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಕಟಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ನಿಗದಿತ ಕಾರ್ಯಕ್ರಮಗಳನ್ನು ಮುಂದೂಡಿ, ಆಸ್ಪತ್ರೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್. ರವಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆಗೆ ತೀವ್ರ ಕಂಬನಿ ಮಿಡಿದಿದ್ದಾರೆ.
ವಿರೋಧ ಪಕ್ಷಗಳ ಆಕ್ರೋಶ
ದುರಂತದ ನೈತಿಕ ಹೊಣೆ ಹೊತ್ತು ಚೋರ್‌ಬಗಾನ್ ದುರ್ಗಾ ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಂತ ಬ್ಯಾನರ್ಜಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ, ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ, ಆಂಬ್ಯುಲೆನ್ಸ್ ಮತ್ತು ಗುಂಪು ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದನ್ನು ತೀವ್ರವಾಗಿ ಪ್ರಶ್ನಿಸಿರುವ ಟಿಎಂಸಿ ಪಕ್ಷ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘಟನೆಯ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
91ನೇ ವರ್ಷದ ಆಚರಣೆಯಲ್ಲಿದ್ದ ಚೋರ್‌ಬಗಾನ್
ಚೋರ್‌ಬಗಾನ್ ಸರ್ಬೋಜನಿನ್ ದುರ್ಗಾ ಪೂಜೆಯು ಈ ವರ್ಷ ತನ್ನ 91ನೇ ವರ್ಷದ ಆಚರಣೆಯಲ್ಲಿತ್ತು. 'ಆರೋಬ್' (ಶಬ್ದ ಮತ್ತು ಗದ್ದಲದಿಂದ ದೂರವಿರುವುದು) ಎಂಬ ವಿಶಿಷ್ಟ ಥೀಮ್‌ನಡಿ ಈ ಉತ್ಸವವನ್ನು ಆಯೋಜಿಸಲಾಗಿತ್ತು. ಇಲ್ಲಿ ದುರ್ಗಾ ಮಾತೆಯನ್ನು ಯುದ್ಧೋನ್ಮುಖಳಾಗಿ ತೋರಿಸುವ ಬದಲು ಧ್ಯಾನಸ್ಥ ಸ್ಥಿತಿಯಲ್ಲಿ ಮತ್ತು ಮಹಿಷಾಸುರನು ಶಸ್ತ್ರಾಸ್ತ್ರಗಳನ್ನು ತ್ಯಜಿಸಿರುವಂತೆ ಚಿತ್ರಿಸಲಾಗಿತ್ತು. ಜಗತ್ತಿನ ಹಿಂಸಾಚಾರಗಳ ನಡುವೆ ಶಾಂತಿಯ ಸಂದೇಶ ಸಾರುವ ಈ ಕಲಾಕೃತಿಯನ್ನು ವೀಕ್ಷಿಸಲು ಮಳೆಯನ್ನೂ ಲೆಕ್ಕಿಸದೆ ಜನಸಾಗರವೇ ಹರಿದುಬಂದಿತ್ತು.

