
ಪುಣೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ; ಮೂರನೇ ಆರೋಪಿ ಬಂಧನ
ಪುಣೆಯ ಲೋಹಗಢ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಆರೋಪಿ ರಿತೇಶ್ ಹಂಗೆಯನ್ನು ಬಂಧಿಸಲಾಗಿದೆ. ಹತ್ಯೆಗೆ ಸಂಚು ರೂಪಿಸುವಲ್ಲಿ ರಿತೇಶ್ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪ್ರಿಯಕರನೊಂದಿಗೆ ಸೇರಿ ಉದ್ಯಮಿ ಹಾಗೂ ತನ್ನ ನಿಶ್ಚಿತ ವರ ಕೇತನ್ ಅಗರ್ವಾಲ್ ಅವರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಬಳಿಕ ಇದೀಗ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೇತನ್ ಚೌಧರಿಯ ಸ್ನೇಹಿತ ರಿತೇಶ್ ಹಂಗೆ ಅವರನ್ನು ಶುಕ್ರವಾರ ಬಂಧಿಸಲಾಗಿದ್ದು, ಜೂನ್ 18ರಂದು ಲೋಹಗಢ್ ಕೋಟೆಯಲ್ಲಿ ಕೇತನ್ ಅಗರ್ವಾಲ್ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸುವಲ್ಲಿ ರಿತೇಶ್ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ವೇಳೆ ರಿತೇಶ್ ಈ ಯೋಜನೆಯ ಬಗ್ಗೆ ತಿಳಿದಿದ್ದದ್ದು ಬೆಳಕಿಗೆ ಬಂದಿದೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಹೇಳಿದ್ದಾರೆ. ಕೇತನ್ ಅವರ ಕೈ-ಕಾಲು ಮುರಿದು ಬಳಿಕ ಹತ್ಯೆ ಮಾಡುವ ಹಿಂದಿನ ಯೋಜನೆಯೂ ರಿತೇಶ್‌ಗೆ ತಿಳಿದಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಹತ್ಯೆಯ ಬಳಿಕ ಚೇತನ್, ರಿತೇಶ್‌ಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಪೊಲೀಸರು ವಶಪಡಿಸಿಕೊಂಡ ಮೊಬೈಲ್ ಫೋನ್‌ನ ಫೊರೆನ್ಸಿಕ್ ವಿಶ್ಲೇಷಣೆ ವೇಳೆ ರಿತೇಶ್‌ನ ಪಾತ್ರ ಬೆಳಕಿಗೆ ಬಂದಿದೆ. ಲೋಹಗಢ್ ಕೋಟೆಯಿಂದ ಕೇತನ್ ಅವರನ್ನು ತಳ್ಳುವ ಬಗ್ಗೆ ಹಾಗೂ ಹತ್ಯೆಯ ಸಾಕ್ಷ್ಯಗಳನ್ನು ನಾಶಪಡಿಸುವ ಕುರಿತು ಮೊಬೈಲ್‌ನಲ್ಲಿ ಚಾಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಡ್ ಮೂಲದ ರಿತೇಶ್ ಹಂಗೆ ಅವರನ್ನು ವಡಗಾಂವ್ ಮಾವಳ್ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ತಮ್ಮ ಸಂಬಂಧಕ್ಕೆ ಕೇತನ್ ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬುದು ಪೊಲೀಸರ ಆರೋಪವಾಗಿದೆ.
ಆರಂಭದಲ್ಲಿ ಕೇತನ್ ಅಗರ್ವಾಲ್ ಅವರ ಸಾವನ್ನು ಪೊಲೀಸರು ಅಪಘಾತ ಎಂದು ಪರಿಗಣಿಸಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದರು. ಆದರೆ ಕೇತನ್ ಅವರ ಸಹೋದರಿಗೆ ಸಿಯಾ ಗೋಯಲ್ ನೀಡಿದ ಹೇಳಿಕೆಗಳ ಬಗ್ಗೆ ಅನುಮಾನ ಮೂಡಿತ್ತು. ಘಟನೆ ನಡೆದ ನಾಲ್ಕು ದಿನಗಳ ಬಳಿಕ ಸಿಯಾ, ಕೇತನ್ ಕುಟುಂಬದ ಮನೆಗೆ ಸಂತಾಪ ಸೂಚಿಸಲು ತೆರಳಿದ್ದ ವೇಳೆ ಸಹೋದರಿ ಲೋಹಗಢ್‌ನಲ್ಲಿ ನಡೆದ ಘಟನೆ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದರು. ಸಿಯಾ ನೀಡಿದ ಉತ್ತರಗಳಲ್ಲಿ ವ್ಯತ್ಯಾಸ ಹಾಗೂ ಕೆಲವು ವಿಚಾರಗಳಲ್ಲಿ ಆಕೆ ತೋರಿದ ಹಿಂಜರಿಕೆ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು. ಬಳಿಕ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ ಪ್ರಕರಣದ ಮರುತನಿಖೆಗೆ ಮನವಿ ಮಾಡಿದರು.
ಏನಿದು ಪ್ರಕರಣ?
ಕೇತನ್ ಮತ್ತು ಸಿಯಾ ಮೇ 31, ಜೂನ್ 14 ಹಾಗೂ ಜೂನ್ 18ರಂದು ಒಟ್ಟು ಮೂರು ಬಾರಿ ಲೋಹಗಢ್ ಕೋಟೆಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಆರಂಭದಲ್ಲಿ ಫೋಟೋ ತೆಗೆದುಕೊಳ್ಳುವಾಗ ಕೇತನ್ ಕಾಲು ಜಾರಿ ಕಂದಕಕ್ಕೆ ಬಿದ್ದಿದ್ದಾರೆ ಎಂದು ಸಿಯಾ ಪೊಲೀಸರಿಗೆ ತಿಳಿಸಿದ್ದರು. ಆದರೆ ತನಿಖೆಯಲ್ಲಿ ಸಿಯಾ ಮತ್ತು ಚೇತನ್ ಸೇರಿ ಕೇತನ್ ಅವರನ್ನು ತಳ್ಳಿ ಕೊಲೆ ಮಾಡಿ, ಅದನ್ನು ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಇಬ್ಬರನ್ನೂ ಜೂನ್ 23ರಂದು ಬಂಧಿಸಲಾಗಿತ್ತು.
ಪ್ರಕರಣದ ತನಿಖೆಯಲ್ಲಿ ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಕೇತನ್ ಕುಟುಂಬದ ಅನುಮಾನಗಳನ್ನು ಆಧರಿಸಿ ಪೊಲೀಸರು ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಲೋಹಗಢ್ ಪ್ರದೇಶದಲ್ಲಿ ಜೂನ್ ತಿಂಗಳ ಬಿಸಿಲಿನ ನಡುವೆಯೂ ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ಕೇತನ್ ಮತ್ತು ಸಿಯಾ ಅವರ ವಾಹನ ಹಾಗೂ ಚಲನವಲನಗಳನ್ನು ಹಿಂಬಾಲಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಈ ಸುಳಿವಿನಿಂದ ತನಿಖೆ ನಡೆಸಿದಾಗ ಆತ ಚೇತನ್ ಎಂದು ಪೊಲೀಸರು ಗುರುತಿಸಿದ್ದಾರೆ. ಸಿಯಾ ಮತ್ತು ಚೇತನ್ ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದು, ಜನವರಿಯಿಂದ ಜೂನ್‌ವರೆಗೆ 2,000ಕ್ಕೂ ಹೆಚ್ಚು ಬಾರಿ ಮಾತನಾಡಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವಿನ ಕರೆಗಳ ಒಟ್ಟು ಅವಧಿ ಸುಮಾರು 238 ಗಂಟೆಗಳಷ್ಟಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಇದರ ಜೊತೆಗೆ ಫೇಸ್‌ಟೈಮ್ ಹಾಗೂ ವಾಟ್ಸಾಪ್ ಮೂಲಕವೂ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಮತ್ತೊಂದೆಡೆ, ಕೇತನ್ ಮತ್ತು ಸಿಯಾ ಜೂನ್ 6ರಂದು ಮದುವೆಗೂ ಮುನ್ನದ ಫೋಟೋಶೂಟ್‌ಗಾಗಿ ಮುಂಬೈನಿಂದ ಬಾಲಿಗೆ ತೆರಳಲು ಸಿದ್ಧರಾಗಿದ್ದರು. ಆದರೆ ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಕೇತನ್ ಅವರ ಪಾಸ್‌ಪೋರ್ಟ್ ಕಾಣೆಯಾಗಿದ್ದರಿಂದ ಪ್ರವಾಸ ರದ್ದಾಯಿತು. ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್, ಕುಟುಂಬದ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಾಸ್‌ಪೋರ್ಟ್‌ಗಳಿದ್ದ ಪೌಚ್‌ನ್ನು ಕಾರಿನಲ್ಲೇ ಇಡಲಾಗಿತ್ತು. ಮಾರ್ಗಮಧ್ಯೆ ಫುಡ್ ಮಾಲ್‌ನಲ್ಲಿ ನಿಲ್ಲಿಸಿದಾಗ ಸಿಯಾ ಮೊಬೈಲ್ ತೆಗೆದುಕೊಳ್ಳಲು ಕಾರಿಗೆ ಹಿಂದಿರುಗಿದ್ದರು. ವಿಮಾನ ನಿಲ್ದಾಣ ತಲುಪಿದಾಗ ಉಳಿದ ಎಲ್ಲರ ಪಾಸ್‌ಪೋರ್ಟ್‌ಗಳು ಇದ್ದರೂ ಕೇತನ್ ಅವರ ಪಾಸ್‌ಪೋರ್ಟ್ ಮಾತ್ರ ಕಾಣೆಯಾಗಿತ್ತು ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೇತನ್ ತಂದೆ ಅನುಮಾನ ವ್ಯಕ್ತಪಡಿಸಿದ್ದು, ಪಾಸ್‌ಪೋರ್ಟ್ ಕಳೆದುಹೋದ 12 ದಿನಗಳ ಬಳಿಕ ಲೋಹಗಢ್‌ನಲ್ಲಿ ಕೇತನ್ ಹತ್ಯೆಯಾಗಿರುವುದು ಪ್ರಕರಣದ ತನಿಖೆಯಲ್ಲಿ ಮತ್ತೊಂದು ಪ್ರಮುಖ ಅಂಶವಾಗಿದೆ.

