ಕಾಸರಗೋಡು-ಮಂಗಳೂರು ನಡುವೆ ಮಹಿಳೆಯರಿಗೆ ಇಂದಿನಿಂದ ಉಚಿತ ಬಸ್ ಪ್ರಯಾಣ
x

ಪ್ರಿಯದರ್ಶಿನಿ ಉಚಿತ ಬಸ್ ಯೋಜನೆ

ಕಾಸರಗೋಡು-ಮಂಗಳೂರು ನಡುವೆ ಮಹಿಳೆಯರಿಗೆ ಇಂದಿನಿಂದ ಉಚಿತ ಬಸ್ ಪ್ರಯಾಣ

ಕೇರಳದ ಪ್ರಿಯದರ್ಶಿನಿ ಯೋಜನೆಯಡಿ ಕಾಸರಗೋಡು, ಮಂಗಳೂರು, ಪುತ್ತೂರು ಮತ್ತು ಸುಳ್ಯ ಮಾರ್ಗದ ಬಸ್‌ಗಳಲ್ಲಿ ಮಹಿಳೆಯರಿಗೆ ಇಂದಿನಿಂದ ಉಚಿತ ಪ್ರಯಾಣ ಸೌಲಭ್ಯ ಆರಂಭವಾಗಿದೆ.


Click the Play button to hear this message in audio format

ಕರ್ನಾಟಕದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಬೆನ್ನಲ್ಲೇ ಕರಾವಳಿ ಭಾಗದ ಮಹಿಳಾ ಪ್ರಯಾಣಿಕರಿಗೆ ಮತ್ತೊಂದು ಬಂಪರ್ ಕೊಡುಗೆ ಲಭಿಸಿದೆ. ಕೇರಳ ಸರ್ಕಾರದ ಬಹುನಿರೀಕ್ಷಿತ 'ಪ್ರಿಯದರ್ಶಿನಿ' ಉಚಿತ ಬಸ್ ಪ್ರಯಾಣ ಯೋಜನೆ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ಗಡಿನಾಡು ಕಾಸರಗೋಡು ಜಿಲ್ಲೆಯಲ್ಲೂ ಈ ಸೇವೆ ಲಭ್ಯವಾಗುತ್ತಿದೆ.

ಈ ನೂತನ ಯೋಜನೆಯ ವಿಶೇಷತೆಯೆಂದರೆ ಕಾಸರಗೋಡು ಜಿಲ್ಲೆಯ ಒಳಗೆ ಮಾತ್ರವಲ್ಲದೆ, ಮಂಗಳೂರು, ಪುತ್ತೂರು ಹಾಗೂ ಸುಳ್ಯ ಅಂತರರಾಜ್ಯ ಮಾರ್ಗಗಳಲ್ಲಿ ಸಂಚರಿಸುವ ಕೇರಳ ಸಾರಿಗೆ ಸಂಸ್ಥೆಯ ಬಸ್‌ಗಳಿಗೂ ಈ ಉಚಿತ ಪ್ರಯಾಣ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಇದರಿಂದಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ ಪ್ರತಿದಿನ ಸಂಚರಿಸುವ ಸಾವಿರಾರು ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ದೊಡ್ಡ ಮಟ್ಟದ ಆರ್ಥಿಕ ವಿನಾಯಿತಿ ಸಿಕ್ಕಂತಾಗಿದೆ.

ಸದ್ಯ ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯ ಸುಮಾರು 75 ಕ್ಕೂ ಹೆಚ್ಚು ಕೇರಳ ಕೆಎಸ್‌ಆರ್‌ಟಿಸಿ ಸಾಮಾನ್ಯ (ಆರ್ಡಿನರಿ), ಟೌನ್-ಟು-ಟೌನ್ ಹಾಗೂ ಲಿಮಿಟೆಡ್ ಸ್ಟಾಪ್ ಬಸ್‌ಗಳಲ್ಲಿ ಮಾತ್ರ ಈ ಸೌಲಭ್ಯ ಅನ್ವಯವಾಗಲಿದೆ. ಪ್ರತಿದಿನ ಮುಂಜಾನೆ ನಾಲ್ಕು ಗಂಟೆಯಿಂದಲೇ ಮಂಗಳೂರು ಮತ್ತು ಕಾಸರಗೋಡು ನಡುವೆ ನೂರಕ್ಕೂ ಅಧಿಕ ಟ್ರಿಪ್‌ಗಳು ಸಂಚರಿಸುತ್ತಿದ್ದು, ಕರಾವಳಿಯ ಮಹಿಳೆಯರು ಇದರ ಸಂಪೂರ್ಣ ಲಾಭ ಪಡೆಯಬಹುದಾಗಿದೆ.

ಈ ಯೋಜನೆಗೆ ಯಾವುದೇ ಸ್ಮಾರ್ಟ್ ಕಾರ್ಡ್, ಗುರುತಿನ ಚೀಟಿ ಅಥವಾ ಮುಂಚಿತ ನೋಂದಣಿಯ ಅಗತ್ಯವಿರುವುದಿಲ್ಲ. ಮಹಿಳಾ ಪ್ರಯಾಣಿಕರು ಬಸ್ ನಿರ್ವಾಹಕರಿಂದ ನೇರವಾಗಿ ಶೂನ್ಯ ದರದ ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಕೇವಲ ಫಾಸ್ಟ್ ಪ್ಯಾಸೆಂಜರ್ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಾಮಾನ್ಯ ಬಸ್‌ಗಳಲ್ಲಿ ಈ ಸೇವೆ ಲಭ್ಯವಿರಲಿದ್ದು, ಕರಾವಳಿ ಭಾಗದ ಪ್ರವಾಸೋದ್ಯಮಕ್ಕೂ ಇದು ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ.

Read More
Next Story