ಕೇರಳದಲ್ಲಿ ಭಾರಿ ಮಳೆ ಆರ್ಭಟ: ಇಡುಕ್ಕಿಯಲ್ಲಿ ಭೂಕುಸಿತ, ಒಬ್ಬರು ಸಾವು
x

ಭಾರತೀಯ ಹವಾಮಾನ ಇಲಾಖೆ ಇಡುಕ್ಕಿ ಸೇರಿದಂತೆ ಕೇರಳದ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.

ಕೇರಳದಲ್ಲಿ ಭಾರಿ ಮಳೆ ಆರ್ಭಟ: ಇಡುಕ್ಕಿಯಲ್ಲಿ ಭೂಕುಸಿತ, ಒಬ್ಬರು ಸಾವು

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸರಣಿ ಭೂಕುಸಿತ ಸಂಭವಿಸಿದೆ. ಮನೆ ಮೇಲೆ ಮಣ್ಣು ಕುಸಿದು ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.


Click the Play button to hear this message in audio format

ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಇಡುಕ್ಕಿ ಜಿಲ್ಲೆಯಲ್ಲಿ ಹಲವು ಕಡೆ ಭೂಕುಸಿತ ಸಂಭವಿಸಿದೆ. ವಾಗಮನ್, ಅಡೂರ್ಮಲ ಹಾಗೂ ಆದಿಮಾಲಿ ಪ್ರದೇಶಗಳಲ್ಲಿ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಒಂದೇ ದಿನ ಸಂಭವಿಸಿದ ಭೂಕುಸಿತಗಳಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ವಾಗಮನ್ ಪ್ರದೇಶದಲ್ಲಿ ಬೆಟ್ಟ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ವೈಕೋಂ ಮೂಲದ ಪ್ರಭಾಕರನ್ ನಾಯರ್ ಮೃತಪಟ್ಟಿದ್ದಾರೆ. ಅಧಿಕಾರಿಗಳು ಸಾವನ್ನು ದೃಢಪಡಿಸಿದರೂ, ನಿರಂತರ ಮಳೆ ಹಾಗೂ ದುರ್ಗಮ ಪರಿಸ್ಥಿತಿಯಿಂದಾಗಿ ಮೃತದೇಹವನ್ನು ಇನ್ನೂ ಹೊರತೆಗೆಯಲು ಸಾಧ್ಯವಾಗಿಲ್ಲ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಅಡೂರ್ಮಲದಲ್ಲಿ ಮತ್ತೊಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ

ಇನ್ನೊಂದು ಭೂಕುಸಿತ ಅಡೂರ್ಮಲ ಪ್ರದೇಶದಲ್ಲಿ ಸಂಭವಿಸಿದ್ದು, ಒಬ್ಬರು ಮಣ್ಣು ಮತ್ತು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಆದಿಮಾಲಿ ಸಮೀಪದ ಮಚ್ಚಿಪ್ಲಾವು ಪ್ರದೇಶದಲ್ಲಿ ಕೊಚ್ಚಿ–ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯ ಮೇಲೂ ಭೂಕುಸಿತ ಸಂಭವಿಸಿದೆ. ಮಣ್ಣು ಕುಸಿದ ವೇಳೆ ಕಾರು ಹಾಗೂ ಟಾರಸ್ ಲಾರಿಯೊಂದು ಅವಶೇಷಗಳ ನಡುವೆ ಸಿಲುಕಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆ ತೆರವುಗೊಳಿಸಲು ಮತ್ತು ಸಂಚಾರ ಪುನರಾರಂಭಿಸಲು ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೇರಳದ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಅಲಪ್ಪುಳ, ಎರ್ನಾಕುಳಂ, ಇಡುಕ್ಕಿ, ಕೊಟ್ಟಾಯಂ ಹಾಗೂ ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು-ಮಿಂಚು ಹಾಗೂ ಗಂಟೆಗೆ 60 ಕಿಲೋಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಕಣ್ಣೂರು, ಕಾಸರಗೋಡು, ಕೊಲ್ಲಂ,ಪಾಲಕ್ಕಾಡ್, ತಿರುವನಂತಪುರಂ, ತ್ರಿಶೂರ್, ವಯನಾಡು ಹಾಗೂ ಲಕ್ಷದ್ವೀಪ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಜಾರಿಯಾಗಿದೆ. ಮುಂದಿನ ಕೆಲ ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಭೂಕುಸಿತ ಸಂಭವಿಸುವ ಪ್ರದೇಶಗಳ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಮನವಿ ಮಾಡಿವೆ.

Read More
Next Story