
ಕೇರಳ ಮುಖ್ಯಮಂತ್ರಿ ರೇಸ್: ಬೀದಿಗಿಳಿದ ಬೆಂಬಲಿಗರು, ಹೈಕಮಾಂಡ್ ಅಂಗಳದಲ್ಲಿ ಸಿಎಂ ಆಯ್ಕೆ ಚೆಂಡು!
ವಿ.ಡಿ. ಸತೀಶನ್: ಮಿತ್ರಪಕ್ಷಗಳು ಸತೀಶನ್ ಒಲವು ಹೊಂದಿವೆ ಎನ್ನಲಾಗಿದೆ. ಕಣ್ಣೂರಿನ ಇರಿಕ್ಕೂರು ಹಾಗೂ ಆಲಪ್ಪುಳದಲ್ಲಿ ಸತೀಶನ್ ಪರ ಮೆರವಣಿಗೆಗಳು ನಡೆದಿದ್ದು, ವೇಣುಗೋಪಾಲ್ ವಿರುದ್ಧ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಗೆ ಸಿದ್ಧತೆಗಳು ಬಿರುಸುಗೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಗಾದಿಗಾಗಿ 'ಕೈ' ಪಾಳಯದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನೂತನ ನಾಯಕನನ್ನು ಆಯ್ಕೆ ಮಾಡುವ ಅಂತಿಮ ಹೊಣೆಯನ್ನು ಇದೀಗ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಡಲಾಗಿದೆ. ಆದರೆ, ಪ್ರಮುಖ ಆಕಾಂಕ್ಷಿಗಳ ಬೆಂಬಲಿಗರು ಮಾತ್ರ ತಮ್ಮ ನಾಯಕರ ಪರವಾಗಿ ಬೀದಿಗಿಳಿದು ಭಾರಿ ಕಸರತ್ತು ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಹುದ್ದೆಗಾಗಿ ಪ್ರಮುಖವಾಗಿ ಮೂವರು ನಾಯಕರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು ಅವರ ಬೆಂಬಲಿಗರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.
ಕೆ.ಸಿ. ವೇಣುಗೋಪಾಲ್: ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ಅವರು ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ವೇಣುಗೋಪಾಲ್ ಅವರಿಗೆ ಅತಿ ಹೆಚ್ಚು ಶಾಸಕರ ಬೆಂಬಲವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಬೆಂಬಲಾರ್ಥವಾಗಿ ತಿರುವನಂತಪುರದ ಇಂದಿರಾ ಭವನದ ಬಳಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು, ಕಿಡಿಗೇಡಿಗಳು ಅದರ ಮೇಲೆ ಗ್ರೀಸ್ ಸುರಿದು ವಿರೂಪಗೊಳಿಸಿದ ಘಟನೆಯೂ ನಡೆದಿದೆ.
ವಿ.ಡಿ. ಸತೀಶನ್: ಮಿತ್ರಪಕ್ಷಗಳು ಸತೀಶನ್ ಒಲವು ಹೊಂದಿವೆ ಎನ್ನಲಾಗಿದೆ. ಕಣ್ಣೂರಿನ ಇರಿಕ್ಕೂರು ಹಾಗೂ ಆಲಪ್ಪುಳದಲ್ಲಿ ಸತೀಶನ್ ಪರ ಮೆರವಣಿಗೆಗಳು ನಡೆದಿದ್ದು, ವೇಣುಗೋಪಾಲ್ ವಿರುದ್ಧ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ರಮೇಶ್ ಚೆನ್ನಿತ್ತಲ: ಇವರು ಬೀದಿಬದಿಯ ಫ್ಲೆಕ್ಸ್ ಸಮರದಲ್ಲಿ ಹಿಂದೆ ಬಿದ್ದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಇವರ ಬೆಂಬಲಿಗರು ಭಾರಿ ಅಭಿಯಾನವನ್ನೇ ಆರಂಭಿಸಿದ್ದಾರೆ. ಚೆನ್ನಿತ್ತಲ ಅವರನ್ನೇ ಸಿಎಂ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ನಾಯಕ ಕೆ. ಮುರಳೀಧರನ್, "ಪ್ರಜಾಪ್ರಭುತ್ವದಲ್ಲಿ ಇಂತಹ ಪೈಪೋಟಿಗಳು ಅತ್ಯಂತ ಸಹಜ. ಭಾನುವಾರದ ವೇಳೆಗೆ ಹೈಕಮಾಂಡ್ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ಫ್ಲೆಕ್ಸ್ ಬೋರ್ಡ್‌ಗಳ ಗಾತ್ರವನ್ನು ನೋಡಿ ಯಾರೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದಿಲ್ಲ," ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

