
ತಮಿಳುನಾಡಿನ ಶಾಸಕರು ಈಗಲ್ಟನ್ ರೆಸಾರ್ಟ್‌ಗೆ ಬಂದಿರುವ ವದಂತಿ ಸುಳ್ಳು, ಅದು ಸದ್ಯ ಮುಚ್ಚಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಸಿ.ಎಂ ಆಯ್ಕೆ: ಖರ್ಗೆಗೆ ವರದಿ ಸಲ್ಲಿಕೆ, ಕೆ.ಸಿ. ವೇಣುಗೋಪಾಲ್‌ಗೆ ಬಹುಪಾಲು ಶಾಸಕರ ಬೆಂಬಲ
ಪಕ್ಷದ ಬಹುತೇಕ ಶಾಸಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ತಮ್ಮ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ (UDF) ಮೈತ್ರಿಕೂಟ 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯಭೇರಿ ಬಾರಿಸಿದ್ದು, ಇದೀಗ ಮುಖ್ಯಮಂತ್ರಿ ಗಾದಿಗೆ ಯಾರು ಏರಲಿದ್ದಾರೆ ಎಂಬ ಕುತೂಹಲ ತೀವ್ರಗೊಂಡಿದೆ. ನೂತನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಎಐಸಿಸಿ ವೀಕ್ಷಕರು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ಅವರು ಗುರುವಾರ ಕೇರಳದಲ್ಲಿ ನೂತನ ಶಾಸಕರೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಶಾಸಕರ ಒಲವು ಯಾರ ಕಡೆಗಿದೆ ಎಂಬುದನ್ನು ಕಲೆಹಾಕಿದ ವೀಕ್ಷಕರು, ದೆಹಲಿಗೆ ಮರಳಿ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಂತಿಮವಾಗಿ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ.
ವೇಣುಗೋಪಾಲ್ ಮುಂಚೂಣಿ, ಸತೀಶನ್‌ಗೆ ಜನಬೆಂಬಲ:
ಮೂಲಗಳ ಪ್ರಕಾರ, ಪಕ್ಷದ ಬಹುತೇಕ ಶಾಸಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ತಮ್ಮ ಬೆಂಬಲ ಸೂಚಿಸಿದ್ದಾರೆ. ಆದರೆ, ಇನ್ನೊಂದೆಡೆ, ಈ ಹಿಂದೆ ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ವಿ.ಡಿ. ಸತೀಶನ್ ಅವರ ಪರವಾಗಿ ಕೇರಳದ ಜನರ ಒಲವು ಹೆಚ್ಚಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೂವರು ಪ್ರಬಲ ಆಕಾಂಕ್ಷಿಗಳು:
ಸದ್ಯ ಕೇರಳ ಮುಖ್ಯಮಂತ್ರಿ ಹುದ್ದೆಗೆ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಹಾಗೂ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರು ಈ ಮೂವರನ್ನೂ ಮಾತುಕತೆಗಾಗಿ ದೆಹಲಿಗೆ ಕರೆಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೇರಲು ಕೆ.ಸಿ. ವೇಣುಗೋಪಾಲ್ ತೀವ್ರ ಉತ್ಸುಕರಾಗಿದ್ದು, ಪಕ್ಷದ ವರಿಷ್ಠರ ಮಟ್ಟದಲ್ಲಿರುವ ತಮ್ಮ ಪ್ರಭಾವವನ್ನು ಬಳಸುತ್ತಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗಿನ ಅವರ ನಿಕಟ ಒಡನಾಟವು ಅವರಿಗೆ ಸಿಎಂ ರೇಸ್‌ನಲ್ಲಿ ದೊಡ್ಡ ಮಟ್ಟದ ಲಾಭ ತಂದುಕೊಡುವ ಸಾಧ್ಯತೆಯಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

