ಉತ್ತರಪ್ರದೇಶದಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ; 8 ಮಕ್ಕಳು ಸೇರಿ 11 ಮಂದಿ ಸಾವು
x

ಕಾರ್ಖಾನೆಗೆ 2019ರಲ್ಲಿ ಸ್ಫೋಟಕ ಪರವಾನಗಿ ನೀಡಲಾಗಿತ್ತು. ಈ ಪರವಾನಗಿ 2026ರವರೆಗೆ ಮಾನ್ಯವಾಗಿತ್ತು.

ಉತ್ತರಪ್ರದೇಶದಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ; 8 ಮಕ್ಕಳು ಸೇರಿ 11 ಮಂದಿ ಸಾವು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.


Click the Play button to hear this message in audio format

ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಎಂಟು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಮನೌರಿ ಗ್ರಾಮದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಕಾರ್ಖಾನೆಯ ಕಟ್ಟಡದ ಜೊತೆಗೆ ಪಕ್ಕದಲ್ಲಿದ್ದ ಐದರಿಂದ ಆರು ಮನೆಗಳು ಕೂಡ ಕುಸಿದುಬಿದ್ದಿವೆ.

ಜಿಲ್ಲಾಧಿಕಾರಿ ಅಮಿತ್ ಪಾಲ್ ಅವರ ಪ್ರಕಾರ, ಕಾರ್ಖಾನೆಗೆ 2019ರಲ್ಲಿ ಸ್ಫೋಟಕ ಪರವಾನಗಿ ನೀಡಲಾಗಿತ್ತು. ಈ ಪರವಾನಗಿ 2026ರವರೆಗೆ ಮಾನ್ಯವಾಗಿತ್ತು. ಆದರೆ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 2024ರಲ್ಲೇ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಪರವಾನಗಿ ರದ್ದಾದ ಬಳಿಕವೂ ಕಾರ್ಖಾನೆ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದರ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ

ಸ್ಫೋಟದ ತೀವ್ರತೆಗೆ ಹಲವು ಕಟ್ಟಡಗಳು ಕುಸಿದಿರುವ ಹಿನ್ನೆಲೆಯಲ್ಲಿ ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸರು, ಅಗ್ನಿಶಾಮಕ ದಳ ಹಾಗೂ ವಾಯುಪಡೆ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಜೆಸಿಬಿ ಮತ್ತು ಇತರ ಯಂತ್ರಗಳ ಮೂಲಕ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ.

ಆರು ಮಂದಿಯ ವಿರುದ್ಧ ಪ್ರಕರಣ; ಆಸ್ತಿ ಜಪ್ತಿಗೆ ಕ್ರಮ

ಕಾರ್ಖಾನೆ ನಿರ್ವಾಹಕ ಆದಿಲ್ ಸೇರಿದಂತೆ ಆರು ಮಂದಿಯ ವಿರುದ್ಧ ಪಿಪ್ರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಸ್ಫೋಟಕ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್ ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಅವರ ಆಸ್ತಿಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಯನ್ನೂ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೃತರಲ್ಲಿ 8 ಮಕ್ಕಳು

ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಐದು ವರ್ಷದ ಪ್ರಿಯಾಂಜಲಿ, 13 ವರ್ಷದ ಪ್ರವೀಣ್ ಸಿಂಗ್, 12 ವರ್ಷದ ಜಾಹ್ನವಿ, 12 ವರ್ಷದ ಆದಿತ್ಯ, ಎಂಟು ವರ್ಷದ ಆದಿತ್ಯ, ಎಂಟು ವರ್ಷದ ರವಿ, 32 ವರ್ಷದ ಅಂಜು, 40 ವರ್ಷದ ಜ್ಞಾನ ಸಿಂಗ್, 35 ವರ್ಷದ ವಿಕ್ರಮ್ ಸರೋಜ್, ಆರು ವರ್ಷದ ಅಂಶ್ ಮತ್ತು ನಾಲ್ಕು ವರ್ಷದ ನಾನಾ ಸೇರಿದ್ದಾರೆ. ಗಾಯಗೊಂಡವರನ್ನು ಪ್ರಯಾಗ್‌ರಾಜ್‌ನ ಎಸ್‌ಆರ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ರೈಲು ಸಂಚಾರವೂ ಸ್ಥಗಿತ

ಸ್ಫೋಟದ ತೀವ್ರತೆಯಿಂದ ಘಟನಾ ಸ್ಥಳದ ಸಮೀಪ ಹಾದುಹೋಗುವ ದೆಹಲಿ-ಹೌರಾ ರೈಲು ಮಾರ್ಗದಲ್ಲಿ ಸುಮಾರು ಒಂದು ಗಂಟೆ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಸ್ಥಳದ ಸಮೀಪಕ್ಕೆ ಬಂದಿದ್ದ ಅಜ್ಮೇರ್-ಸೀಲ್ದಾ ಎಕ್ಸ್‌ಪ್ರೆಸ್ ರೈಲನ್ನು ಮನೌರಿ ನಿಲ್ದಾಣಕ್ಕೆ ಹಿಂದಿರುಗಿಸಲಾಯಿತು. ದೆಹಲಿಯಿಂದ ವಾರಾಣಸಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸೈಯದ್ ಸರವಾನ್ ನಿಲ್ದಾಣದಲ್ಲಿ ನಿಲ್ಲಿಸಲಾಯಿತು.

ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಪ್ರಯಾಗ್‌ರಾಜ್‌ನ ಎಸ್‌ಆರ್‌ಎನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

Read More
Next Story