ಕಾವೇರಿ ನೀರು ಬಿಡುಗಡೆ ಅಸಾಧ್ಯ;  CWRC ಸಭೆಯಲ್ಲಿ ತಮಿಳುನಾಡು ಬೇಡಿಕೆಗೆ ಕರ್ನಾಟಕ ತಿರುಗೇಟು
x

ಕಾವೇರಿ ನೀರು ಬಿಡುಗಡೆ ಅಸಾಧ್ಯ; CWRC ಸಭೆಯಲ್ಲಿ ತಮಿಳುನಾಡು ಬೇಡಿಕೆಗೆ ಕರ್ನಾಟಕ ತಿರುಗೇಟು

ಮಳೆ ಅಭಾವದಿಂದ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದ ಒಳಹರಿವು ಬರುತ್ತಿಲ್ಲ. ಹಾಗಾಗಿ, ತಮಿಳುನಾಡಿನ ಬೇಡಿಕೆಗೆ ಯಾವುದೇ ಮನ್ನಣೆ ನೀಡಬಾರದು ಎಂದು ಕರ್ನಾಟಕದ ಅಧಿಕಾರಿಗಳು ಆಯೋಗವನ್ನು ಒತ್ತಾಯಿಸಿದ್ದಾರೆ.


ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶಗಳು ಬಣಗುಡುತ್ತಿವೆ. ಇದರಿಂದ ಕರ್ನಾಟಕ ತೀವ್ರ ಜಲಸಂಕಷ್ಟಕ್ಕೆ ಒಳಗಾಗಿದ್ದು, ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದೆ.

ನವದೆಹಲಿಯಲ್ಲಿ ಬುಧವಾರ(ಜು.15) ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಮಹತ್ವದ ಸಭೆಯಲ್ಲಿ ತಮಿಳುನಾಡು ಸರ್ಕಾರದ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅದರ ಬೇಡಿಕೆಯನ್ನೂ ಕರ್ನಾಟಕ ತಿರಸ್ಕರಿಸಿದೆ. "ನಮಗೇ ಕುಡಿಯುವ ನೀರಿಗೇ ಗತಿಯಿಲ್ಲ, ಇನ್ನು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲ" ಎಂದು ಕರ್ನಾಟಕದ ಅಧಿಕಾರಿಗಳು ಸಮಿತಿ ಎದುರು ಹೇಳಿದ್ದಾರೆ. ಉಭಯ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ ಸಮಿತಿಯು ಸದ್ಯಕ್ಕೆ ಕರ್ನಾಟಕಕ್ಕೆ ನೀರು ಬಿಡುವಂತೆ ಯಾವುದೇ ಸೂಚನೆ ನೀಡಿಲ್ಲ ಎನ್ನಲಾಗಿದೆ.

ಬರಕ್ಕೆ ನಲುಗಿದ ಕರ್ನಾಟಕ

ಪ್ರಧಾನಿ ಮೋದಿ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಪತ್ರ ಬರೆದಿದ್ದು, ರಾಜ್ಯದಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟು, ಬರದ ಛಾಯೆ ಆವರಿಸಿದೆ. ಪರಿಸ್ಥಿತಿಯ ಗಂಭೀರತೆ ಅರಿಯಲು ಕೂಡಲೇ ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮಳೆ ಅಭಾವದಿಂದ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದ ಒಳಹರಿವು ಬರುತ್ತಿಲ್ಲ. ಹಾಗಾಗಿ, ತಮಿಳುನಾಡಿನ ಬೇಡಿಕೆಗೆ ಯಾವುದೇ ಮನ್ನಣೆ ನೀಡಬಾರದು ಎಂದು ಕರ್ನಾಟಕದ ಅಧಿಕಾರಿಗಳು ಆಯೋಗವನ್ನು ಒತ್ತಾಯಿಸಿದ್ದಾರೆ.

ತಮಿಳುನಾಡಿನ ಪಟ್ಟು ಏನು?

ದೆಹಲಿಯಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳು ತಮಗೆ ಬರಬೇಕಾದ ಜೂನ್ ಮತ್ತು ಜುಲೈ ತಿಂಗಳ ಪಾಲಿನ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು ಜಲಾನಯನ ಪ್ರದೇಶದ ವಾಸ್ತವ ಚಿತ್ರಣದ ಅಂಕಿ ಅಂಶಗಳನ್ನು ಸಮಿತಿಯ ಮುಂದಿಟ್ಟರು.

ಕಾವೇರಿ ಕೊಳ್ಳದಲ್ಲಿ ಮಳೆಯ ಅಭಾದಿಂದ ಇಡೀ ಜೂನ್ ತಿಂಗಳಿನಲ್ಲಿ ಜಲಾಶಯಗಳಿಗೆ ಬಂದ ಒಳಹರಿವು ಶೂನ್ಯವಾಗಿತ್ತು. ಜುಲೈನಲ್ಲಿ ಅಲ್ಲಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಯಿಂದಾಗಿ ಬರಿದಾಗಿದ್ದ ಡ್ಯಾಂಗಳಿಗೆ ಅತ್ಯಲ್ಪ ಪ್ರಮಾಣದ ನೀರು ಬಂದಿದೆ. ಆದರೆ, ಮಾನ್ಸೂನ್ ಮತ್ತೆ ಚುರುಕಾಗುವ ಯಾವುದೇ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಇಲ್ಲ. ಹೀಗಾಗಿ, ಸದ್ಯ ಸಂಗ್ರಹವಿರುವ ಅಲ್ಪ ನೀರನ್ನು ಮುಂದಿನ ಮಾನ್ಸೂನ್ ಅವಧಿಯವರೆಗೆ ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ.

ಕರ್ನಾಟಕದ ಕಾವೇರಿ ಭಾಗದ ರೈತರು ಕೃಷಿ ಚಟುವಟಿಕೆಗೆ ನೀರು ಬಿಡುವಂತೆ ಒತ್ತಾಯಿಸುತ್ತಿದ್ದರೂ, ಪರಿಸ್ಥಿತಿ ಮಿತಿಮೀರಿರುವುದರಿಂದ ಸ್ವಂತ ರಾಜ್ಯದ ರೈತರಿಗೇ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಬರ ಆವರಿಸಿರುವುದು ಇದಕ್ಕೆ ಸಾಕ್ಷಿ. ತಮಿಳುನಾಡಿನಲ್ಲಿ ಮುಂಬರುವ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಆದರೂ ಅವರು ಕೃಷಿ ಚಟುವಟಿಕೆಗಾಗಿ ಹಠ ಹಿಡಿದು ನೀರು ಕೇಳುತ್ತಿದ್ದಾರೆ. ನಮಗೆ ಇಲ್ಲಿ ಕುಡಿಯಲು ನೀರಿಲ್ಲದಿರುವಾಗ ಕೃಷಿಗೆ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ತಾಂತ್ರಿಕ ಮತ್ತು ವಾಸ್ತವಾಂಶಗಳ ವಾದಕ್ಕೆ ಮಣಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ನೆರೆರಾಜ್ಯದ ಒತ್ತಡವಿದ್ದರೂ ತಮಿಳುನಾಡಿಗೆ ತಕ್ಷಣ ನೀರು ಹರಿಸುವಂತೆ ಕರ್ನಾಟಕಕ್ಕೆ ಯಾವುದೇ ಕಡ್ಡಾಯ ಅಥವಾ ಸ್ಪಷ್ಟ ಆದೇಶ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ರಾಜ್ಯ ಸರ್ಕಾರಕ್ಕೆ ಸ್ವಲ್ಪ ನಿರಾಳ ತಂದಿದೆ.

ಸಭೆ ಮುಕ್ತಾಯವಾಗುತ್ತಿದ್ದಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ದೆಹಲಿ ಸಭೆಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿದ್ದಾರೆ. ಕಾನೂನು ಹಾಗೂ ತಾಂತ್ರಿಕ ಹೋರಾಟವನ್ನು ಮುಂದೆಯೂ ಹೇಗೆ ಮುಂದುವರಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ನಿರ್ವಹಣೆ ಹೇಗೆ ಮಾಡಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

Read More
Next Story