ಖರ್ಗೆ-ದೇವೇಗೌಡರ ಸ್ಥಾನಗಳಿಗೆ ಕಸರತ್ತು: ರಾಜ್ಯಸಭೆ ದ್ವೈವಾರ್ಷಿಕ ಚುನಾವಣೆ ಘೋಷಣೆ
x

ಖರ್ಗೆ-ದೇವೇಗೌಡರ ಸ್ಥಾನಗಳಿಗೆ ಕಸರತ್ತು: ರಾಜ್ಯಸಭೆ ದ್ವೈವಾರ್ಷಿಕ ಚುನಾವಣೆ ಘೋಷಣೆ

ಜೂ.1 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಜೂ. 18ರಂದು ಮತದಾನ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಜೂ. 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.


Click the Play button to hear this message in audio format

ಕೇಂದ್ರ ಚುನಾವಣಾ ಆಯೋಗವು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗಳನ್ನು ಘೋಷಿಸಿದ್ದು, ಕರ್ನಾಟಕದ ಪಾಲಿಗೆ ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಲ್ವರು ಹಿರಿಯ ನಾಯಕರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದು, ಅವರ ಸ್ಥಾನಗಳ ಭರ್ತಿಗೆ ನಡೆಯಲಿರುವ ಈ ಚುನಾವಣೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಲಿದೆ.

ಕರ್ನಾಟಕದಿಂದ ಆಯ್ಕೆಯಾಗಿರುವ ಸದಸ್ಯರಾದ ನಾರಾಯಣ ಕೊರಗಪ್ಪ, ಇರಣ್ಣ ಕಡಾಡಿ, ಎಚ್.ಡಿ. ದೇವೇಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕಾರಾವಧಿಯು ಜೂ.25ಕ್ಕೆ ಕೊನೆಗೊಳ್ಳಲಿದ್ದು, ಈ ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆಯಲಿದೆ. ಈ ಸಂಬಂಧ ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ನಾಲ್ವರು ನಾಯಕರು ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಅತ್ಯಂತ ಪ್ರಭಾವಶಾಲಿಗಳು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷದ ಧ್ವನಿಯಾಗಿದ್ದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಿರಿಯ ಮಾರ್ಗದರ್ಶಕರಾಗಿ ಸಂಸತ್ತಿನಲ್ಲಿ ರಾಜ್ಯದ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇವರ ಜತೆಗೆ ನಾರಾಯಣ ಕೊರಗಪ್ಪ ಮತ್ತು ಇರಣ್ಣ ಕಡಾಡಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹೀಗಾಗಿ, ಈ ಸ್ಥಾನಗಳಿಗೆ ಮುಂದಿನ ಅಭ್ಯರ್ಥಿಗಳು ಯಾರು ಎಂಬುದು ಈಗ ರಾಜ್ಯ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.

ಚುನಾವಣಾ ವೇಳಾಪಟ್ಟಿ

ರಾಜ್ಯಸಭೆಯ ಸದಸ್ಯರನ್ನು ರಾಜ್ಯ ವಿಧಾನಸಭೆಯ ಶಾಸಕರು ಆಯ್ಕೆ ಮಾಡುತ್ತಾರೆ. ಈ ಬಾರಿ ಜೂನ್ 1ರಂದು ಅಧಿಸೂಚನೆ ಹೊರಬೀಳಲಿದ್ದು, ಜೂ. 18ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಅಂದೇ ಸಂಜೆ 5 ಗಂಟೆಗೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 24 ಸ್ಥಾನಗಳಿಗೆ 10 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಕರ್ನಾಟಕವು ಈ ಪಟ್ಟಿಯಲ್ಲಿ ಪ್ರಮುಖವಾಗಿದೆ.



ಜೂ.1 ರಂದು ಅಧಿಸೂಚನೆ ಬಿಡುಗಡೆ ಮಾಡಲಾಗುವುದು. ಜೂ. 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯು ಜೂ.9ರಂದು ನಡೆಯಲಿದೆ. ಜೂ.11ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂ.18ರಂದು ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

ಇತರೆ ರಾಜ್ಯಗಳ ಚುನಾವಣೆ

ಕರ್ನಾಟಕದ ಹೊರತಾಗಿ ಆಂಧ್ರಪ್ರದೇಶ - 4 ಸ್ಥಾನ, ಗುಜರಾತ್ - 4 ಸ್ಥಾನ, ಜಾರ್ಖಂಡ್ -2 ಸ್ಥಾನ, ಮಧ್ಯಪ್ರದೇಶ -3 ಸ್ಥಾನ, ರಾಜಸ್ಥಾನ -3 ಸ್ಥಾನ ಸೇರಿದಂತೆ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳಲ್ಲೂ ಚುನಾವಣೆ ನಡೆಯಲಿದೆ. ಜಾರ್ಖಂಡ್‌ನಲ್ಲಿ ಶಿಬು ಸೊರೇನ್ ಅವರ ಸ್ಥಾನವು ತೆರವಾಗಿದ್ದು, ಈ ಬಾರಿಯ ಚುನಾವಣೆಯಲ್ಲೇ ಅದನ್ನೂ ಭರ್ತಿ ಮಾಡಲಾಗುತ್ತಿದೆ.

ಮತದಾನಕ್ಕೆ ಕಟ್ಟುನಿಟ್ಟಿನ ನಿಯಮ

ಈ ಬಾರಿ ಚುನಾವಣೆ ಆಯೋಗವು ಕೇವಲ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದಷ್ಟೇ ಅಲ್ಲದೆ, ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಚುನಾವಣಾಧಿಕಾರಿಗಳು ಒದಗಿಸುವ ನೇರಳೆ ಬಣ್ಣದ ಸ್ಕೆಚ್ ಪೆನ್ ಅನ್ನು ಮಾತ್ರ ಬಳಸಬೇಕು. ಮತದಾರರು ಬೇರೆ ಯಾವುದೇ ಬಣ್ಣದ ಪೆನ್ನುಗಳನ್ನು ಬಳಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಮತ ಅಸಿಂಧುವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಆಯೋಗವು ಕಟ್ಟುನಿಟ್ಟಾದ ನಿಗಾ ವಹಿಸಲು ವೀಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿದೆ.

ರಾಜಕೀಯ ಪಕ್ಷಗಳಲ್ಲಿ ತಂತ್ರಗಾರಿಕೆ

ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಅಭ್ಯರ್ಥಿಗಳ ಗೆಲುವು ನಿರ್ಧಾರವಾಗುವುದರಿಂದ, ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತು ವಿರೋಧ ಪಕ್ಷಗಳು ತಮ್ಮ ತಂತ್ರಗಾರಿಕೆಯನ್ನು ರೂಪಿಸಲು ಮುಂದಾಗಿವೆ. ರಾಜ್ಯಸಭೆಯ ಸ್ಥಾನಗಳು ಕೇವಲ ಸಂಖ್ಯೆಯಲ್ಲ, ಬದಲಿಗೆ ಪಕ್ಷದ ಪ್ರಭಾವವನ್ನು ರಾಷ್ಟ್ರ ಮಟ್ಟದಲ್ಲಿ ಉಳಿಸಿಕೊಳ್ಳುವ ಅಸ್ತ್ರಗಳಾಗಿವೆ.

Read More
Next Story