ಬರ ಸಂಕಷ್ಟ ಹಿನ್ನೆಲೆ: ಕೇಂದ್ರದಿಂದ 3,705 ಕೋಟಿ ರೂ. ಪರಿಹಾರಕ್ಕೆ ಸಿಎಂ ಆಗ್ರಹ
x

ಬರ ಸಂಕಷ್ಟ ಹಿನ್ನೆಲೆ: ಕೇಂದ್ರದಿಂದ 3,705 ಕೋಟಿ ರೂ. ಪರಿಹಾರಕ್ಕೆ ಸಿಎಂ ಆಗ್ರಹ

ರಾಜ್ಯದ ಬರ ಪರಿಸ್ಥಿತಿಯನ್ನು ಅವಲೋಕಿಸಲು ಆಗಮಿಸಿರುವ ಕೇಂದ್ರದ ಮುಂದೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ನೈಜ ಚಿತ್ರಣ ವಿವರಿಸಿ, ಎನ್‌ಡಿಆರ್‌ಎಫ್‌ ಅನ್ವಯ ಪರಿಹಾರಕ್ಕೆ ಒತ್ತಾಯಿಸಿದರು.


Click the Play button to hear this message in audio format

ದಶಕಗಳಲ್ಲೇ ಕಾಣದ ಭೀಕರ ಬರಗಾಲದ ಅಂಚಿನಲ್ಲಿ ಕರ್ನಾಟಕ ರಾಜ್ಯ ತತ್ತರಿಸುತ್ತಿದೆ. ರಾಜ್ಯದ ರೈತರು ಹಾಗೂ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದೆ. ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಅವಲೋಕಿಸಲು ಆಗಮಿಸಿರುವ ಕೇಂದ್ರದ ಮುಂದೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೈಜ ಚಿತ್ರಣವನ್ನು ವಿವರಿಸಿದ್ದು, ಎನ್‌ಡಿಆರ್‌ಎಫ್‌ ಮಾನದಂಡಗಳನ್ವಯ ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಒಟ್ಟು 240 ತಾಲ್ಲೂಕುಗಳ ಪೈಕಿ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಇದು ರಾಜ್ಯದ ಕೃಷಿ ವಲಯದ ಮೇಲಾಗಿರುವ ಭಾರಿ ಆಘಾತವನ್ನು ಸೂಚಿಸುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ,, ಈ ಘೋಷಣೆಯು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿದಿದ್ದಲ್ಲ, ಬದಲಿಗೆ ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳನ್ನು ಅನುಸರಿಸಿ, ವೈಜ್ಞಾನಿಕವಾಗಿ ನಡೆಸಿದ ಮೌಲ್ಯಮಾಪನದ ಫಲಿತಾಂಶವಾಗಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿದ್ದು, ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವು ಎನ್‌ಡಿಆರ್‌ಎಫ್ ಮಾನದಂಡಗಳನ್ವಯ ಕೇಂದ್ರದಿಂದ 3705.30 ಕೋಟಿ ರೂಪಾಯಿಗಳ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದೆ. ಈಗಾಗಲೇ ರಾಜ್ಯ ಸರ್ಕಾರ ತನ್ನ ಮಟ್ಟದಲ್ಲಿ ರೈತರಿಗೆ ತಲಾ 2500 ರೂ. ಪರಿಹಾರ ಘೋಷಣೆ ಮಾಡುವ ಮೂಲಕ ತುರ್ತು ನೆರವನ್ನು ನೀಡಲು ಯತ್ನಿಸಿದೆ. ಆದರೂ, ಈ ಪ್ರಮಾಣದ ಭೀಕರ ಬರವನ್ನು ಎದುರಿಸಲು ಕೇಂದ್ರದ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಜಲಾಶಯಗಳಲ್ಲಿ ನೀರಿನ ಬರದ ಆತಂಕ

ರಾಜ್ಯದ ಕೃಷ್ಣಾ ಜಲಾನಯನ ಪ್ರದೇಶವನ್ನು ಹೊರತುಪಡಿಸಿದರೆ, ಉಳಿದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕನಿಷ್ಠ ಹಂತಕ್ಕೆ ಕುಸಿದಿದೆ. ಮಲೆನಾಡು ಮತ್ತು ಕರಾವಳಿಯಂತಹ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೂ ಮಳೆಯ ಕೊರತೆ ಎದುರಾಗಿರುವುದು ಹವಾಮಾನ ವೈಪರೀತ್ಯದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಒಂದು ಕಡೆ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪರದಾಡುತ್ತಿದ್ದರೆ, ಮತ್ತೊಂದೆಡೆ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯುಸಿ ಆದೇಶಿಸುತ್ತಿರುವುದು ರಾಜ್ಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಇಷ್ಟು ಕಠಿಣ ಪರಿಸ್ಥಿತಿಯನ್ನು ನಾನು ನೋಡಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆಯು ರಾಜ್ಯದ ಗಂಭೀರತೆಯನ್ನು ಬಿಂಬಿಸುತ್ತದೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ 150ಕ್ಕೂ ಹೆಚ್ಚು ಶಾಸಕರು ತಮ್ಮ ಕ್ಷೇತ್ರಗಳ ವಸ್ತುಸ್ಥಿತಿಯನ್ನು ವಿವರಿಸಿದ್ದು, ಬರಗಾಲದ ಪ್ರಭಾವವು ಹಳ್ಳಿಗಳಿಂದ ನಗರಗಳವರೆಗೆ ವ್ಯಾಪಿಸಿರುವುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.

ಕೇಂದ್ರ-ರಾಜ್ಯ ಸಮನ್ವಯದ ಅಗತ್ಯ

ರೈತರು ಕೇವಲ ಬೆಳೆಯ ನಷ್ಟದಿಂದಷ್ಟೇ ಅಲ್ಲದೆ, ಹಾಲು ಉತ್ಪಾದಕರ ಬೇಡಿಕೆಗಳು ಮತ್ತು ಕಬ್ಬು ಬೆಳೆಗಾರರ ಅತೃಪ್ತಿಯಿಂದಾಗಿ ಆರ್ಥಿಕವಾಗಿ ಹೈರಾಣಾಗಿದ್ದಾರೆ. ಹಾಲು ಉತ್ಪಾದಕರು ದರ ಏರಿಕೆಗೆ ಆಗ್ರಹಿಸುತ್ತಿರುವುದು ಮತ್ತು ಬೆಳೆ ನಷ್ಟದಿಂದ ರೈತರು ಕಂಗಾಲಾಗಿರುವುದು ಸಾಮಾಜಿಕ ಅಸಮಾಧಾನಕ್ಕೆ ದಾರಿ ಮಾಡಿಕೊಡಬಹುದು. ಈ ಸವಾಲಿನ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಮರೆತು ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಮೂರು ದಿನಗಳ ಕಾಲ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡ, ವಸ್ತುಸ್ಥಿತಿಯನ್ನು ಕಣ್ಣಾರೆ ಕಾಣಲಿದೆ. ಕೇವಲ ಅಧಿಕಾರಿಗಳ ವರದಿಗಳನ್ನು ಅಷ್ಟೇ ಅಲ್ಲದೆ, ಪ್ರತ್ಯಕ್ಷ ವೀಕ್ಷಣೆ ಮತ್ತು ದತ್ತಾಂಶಗಳ ಆಧಾರದ ಮೇಲೆ ವಸ್ತುನಿಷ್ಠ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವುದಾಗಿ ತಂಡದ ಮುಖ್ಯಸ್ಥರು ಭರವಸೆ ನೀಡಿದ್ದಾರೆ. ಇದು ರಾಜ್ಯಕ್ಕೆ ನ್ಯಾಯಯುತವಾದ ಪರಿಹಾರ ಸಿಗುತ್ತದೆ ಎಂಬ ಆಶಾಭಾವನೆಯನ್ನು ಮೂಡಿಸಿದೆ. ರಾಜ್ಯ ಸರ್ಕಾರವು ಈಗಾಗಲೇ ಎಲ್ಲ ಸಚಿವರು ಮತ್ತು ಅಧಿಕಾರಿಗಳಿಗೆ ಕ್ಷೇತ್ರ ಭೇಟಿ ನೀಡುವಂತೆ ಸೂಚನೆ ನೀಡಿದೆ. ಬಿತ್ತನೆ ಬೀಜದ ಆಯ್ಕೆಯಿಂದ ಹಿಡಿದು ನೀರಿನ ನಿರ್ವಹಣೆಯವರೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ, ಪ್ರಾಕೃತಿಕ ವಿಕೋಪದ ಮುಂದೆ ಸರ್ಕಾರಗಳ ದೃಢ ಸಂಕಲ್ಪ ಮತ್ತು ಸಮರೋಪಾದಿಯ ಪರಿಹಾರ ಕಾರ್ಯಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

Read More
Next Story