Look inside yourself first: Indias sharp response to Pakistan in the wake of the Karachi attack!
x

ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್

'ಮೊದಲು ನಿಮ್ಮ ಒಳಗೆ ಇಣುಕಿ ನೋಡಿ': ಕರಾಚಿ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಭಾರತದ ಖಡಕ್ ತಿರುಗೇಟು!

ಪಾಕಿಸ್ತಾನವು ಇತರರತ್ತ ಬೆರಳು ತೋರಿಸುವ ಬದಲು, ತನ್ನ ಗಡಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ದೃಢವಾದ ಮತ್ತು ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.


Click the Play button to hear this message in audio format

ಕರಾಚಿಯ ಸಿಂಧ್ ರೇಂಜರ್ಸ್ ಕಾಂಪೌಂಡ್ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಪಾಕಿಸ್ತಾನ ಮಾಡಿರುವ ಆರೋಪಗಳನ್ನು ನವದೆಹಲಿ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನದ ಈ ಹೇಳಿಕೆಗಳು "ಆಧಾರರಹಿತ" ಮತ್ತು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಭಾರತ ಜರೆದಿದೆ. ತನ್ನ ಸ್ವಂತ ನೆಲದಿಂದಲೇ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಜಾಲಗಳನ್ನು ಮಟ್ಟಹಾಕುವಲ್ಲಿ ವಿಫಲವಾಗಿರುವ ಪಾಕಿಸ್ತಾನ, ತನ್ನ ಆಂತರಿಕ ಭದ್ರತಾ ಸವಾಲುಗಳ ಹೊಣೆಯನ್ನು ಇತರರ ಮೇಲೆ ಹೊರಿಸಲು ಯತ್ನಿಸುತ್ತಿದೆ ಎಂದು ಭಾರತ ಹೇಳಿದೆ.

'ಮೊದಲು ನಿಮ್ಮ ಒಳಗೆ ಇಣುಕಿ ನೋಡಿ'

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, "ಕರಾಚಿಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಪಾಕಿಸ್ತಾನದ ವರದಿಗಳು ಆಧಾರರಹಿತ ಆರೋಪಗಳನ್ನು ಮಾಡುವುದನ್ನು ನಾವು ನೋಡಿದ್ದೇವೆ. ನಾವು ಅವುಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನವು ಇತರರತ್ತ ಬೆರಳು ತೋರಿಸುವ ಬದಲು, ತನ್ನ ಗಡಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ದೃಢವಾದ ಮತ್ತು ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ಬಳಸಿಕೊಳ್ಳುವ ಪ್ರವೃತ್ತಿಯನ್ನು ಇಸ್ಲಾಮಾಬಾದ್ ಮೊದಲು ಕೈಬಿಡಬೇಕು ಎಂದು ಜೈಸ್ವಾಲ್ ಒತ್ತಾಯಿಸಿದರು.

ಸಿಂಧ್ ರೇಂಜರ್ಸ್ ದಾಳಿ

ಕರಾಚಿಯ ಗುಲಿಸ್ತಾನ್-ಎ-ಜೌಹರ್ ಪ್ರದೇಶದಲ್ಲಿರುವ ಸಿಂಧ್ ರೇಂಜರ್ಸ್‌ನ ಭಿಟ್ಟೈ ವಿಂಗ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಉಗ್ರಗಾಮಿಗಳು ಶನಿವಾರ ಸಂಜೆ ಭೀಕರ ದಾಳಿ ನಡೆಸಿದ್ದರು. ದಾಳಿಕೋರರು ಸ್ಫೋಟಕ ತುಂಬಿದ ವಾಹನವನ್ನು ಕಾಂಪೌಂಡ್‌ನ ಪ್ರವೇಶದ್ವಾರಕ್ಕೆ ಡಿಕ್ಕಿ ಹೊಡೆಸಿ, ಗ್ರೆನೇಡ್‌ಗಳ ಮೂಲಕ ದಾಳಿ ನಡೆಸಿದ್ದರು. ಸುಮಾರು 90 ನಿಮಿಷಗಳ ಕಾಲ ನಡೆದ ಈ ಭೀಕರ ಗುಂಡಿನ ಚಕಮಕಿಯಲ್ಲಿ ನಾಲ್ವರು ಅರೆಸೈನಿಕ ಸಿಬ್ಬಂದಿ ಹುತಾತ್ಮರಾಗಿದ್ದು, ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಆರು ಉಗ್ರರನ್ನು ಹೊಡೆದುರುಳಿಸಲಾಗಿದೆ. ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗೆ ಸೇರಿದ ಜಮಾತ್-ಉಲ್-ಅಹ್ರಾರ್ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಪಾಕಿಸ್ತಾನದಲ್ಲಿ ಇತ್ತೀಚೆಗೆ ಭದ್ರತಾ ಕಾಳಜಿಗಳು ಹೆಚ್ಚುತ್ತಿದ್ದು, ಅಫ್ಘಾನಿಸ್ತಾನದಿಂದ ಟಿಟಿಪಿ ಉಗ್ರರು ದಾಳಿ ನಡೆಸುತ್ತಿದ್ದಾರೆ ಎಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ. ಆದರೆ ಕಾಬೂಲ್ ಈ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ತನಗೇ ಕಂಟಕವಾಗಿರುವ ಭಯೋತ್ಪಾದನೆಯನ್ನು ನಿಯಂತ್ರಿಸಲಾಗದೆ ಪಾಕಿಸ್ತಾನ ಈಗ ಭಾರತದತ್ತ ಸುಳ್ಳು ಆರೋಪ ಮಾಡುತ್ತಿದೆ ಎಂದು ನವದೆಹಲಿ ತಿರುಗೇಟು ನೀಡಿದೆ.

Read More
Next Story