ಸತ್ತಿದ್ದಾನೆಂದು ಅಂತ್ಯಕ್ರಿಯೆ ಮಾಡಿದ್ದ ಮಗ ಜೈಲಿನಲ್ಲಿ ಜೀವಂತ ಪತ್ತೆ
x

ಸತ್ತಿದ್ದಾನೆಂದು ಅಂತ್ಯಕ್ರಿಯೆ ಮಾಡಿದ್ದ ಮಗ ಜೈಲಿನಲ್ಲಿ ಜೀವಂತ ಪತ್ತೆ

ಪಂಜಾಬ್‌ನ ಕಪುರ್ತಲಾದಲ್ಲಿ ಸತ್ತಿದ್ದಾನೆಂದು ಭಾವಿಸಿ ಮಗನ ಅಂತ್ಯಕ್ರಿಯೆ ಮಾಡಿದ ಕುಟುಂಬಕ್ಕೆ 15 ದಿನಗಳ ಬಳಿಕ ಜೈಲಿನಿಂದ ಕರೆ ಬಂದಿದೆ. ರವಿ ಕುಮಾರ್ ಜೈಲಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ಸುಟ್ಟ ಶವ ಯಾರದ್ದು ಎಂಬ ಪ್ರಶ್ನೆ ಮೂಡಿದೆ.


ಮಗನನ್ನು ಕಳೆದುಕೊಂಡಿದ್ದೇವೆ ಎಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಕ್ಕೆ 15 ದಿನಗಳ ಬಳಿಕ ಜೈಲಿನಿಂದ ಬಂದ ಒಂದು ಫೋನ್ ಕಾಲ್ ಆಘಾತದ ಜೊತೆಗೆ ಸಂತೋಷವನ್ನೂ ನೀಡಿದೆ. ಪಂಜಾಬ್‌ನ ಕಪುರ್ತಲಾದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ರವಿ ಕುಮಾರ್ ಎಂಬ ಯುವಕ ಕಾಣೆಯಾಗಿದ್ದಾನೆಂದು ಕುಟುಂಬ ಹುಡುಕಾಟ ನಡೆಸಿತ್ತು. ಬಳಿಕ ಪತ್ತೆಯಾದ ಸುಟ್ಟ ಶವವನ್ನು ರವಿ ಕುಮಾರ್‌ದ್ದೇ ಎಂದು ಗುರುತಿಸಿ ಆಗಸ್ಟ್ 13ರಂದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ ಸೆಪ್ಟೆಂಬರ್ 2ರಂದು ಕಪುರ್ತಲಾ ಸೆಂಟ್ರಲ್ ಜೈಲಿನ ಸಿಬ್ಬಂದಿಯೊಬ್ಬರು ಕರೆ ಮಾಡಿ ರವಿ ಕುಮಾರ್ ಜೈಲಿನಲ್ಲಿರುವುದಾಗಿ ಮಾಹಿತಿ ನೀಡಿದ್ದಾರೆ.

ಮಾಹಿತಿಯ ಪ್ರಕಾರ, ರವಿ ಕುಮಾರ್ ಆಗಸ್ಟ್ 5ರಂದು ಮನೆಯಿಂದ ಹೊರಟಿದ್ದು, ಬಳಿಕ ಮನೆಗೆ ಮರಳಿರಲಿಲ್ಲ. ತಂದೆ ಹಾಗೂ ಸಹೋದರ ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ಕಪುರ್ತಲಾ ಸಿಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಇದೇ ವೇಳೆ ಪೊಲೀಸರು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಶವದ ಫೋಟೋಗಳನ್ನು ಕುಟುಂಬಕ್ಕೆ ತೋರಿಸಿದ್ದರು. ಕುಟುಂಬದವರು ಹಾಗೂ ಇತರರು ಆ ಶವವನ್ನು ರವಿ ಕುಮಾರ್‌ನದ್ದೇ ಎಂದು ಗುರುತಿಸಿದ್ದರು. ಇದರಿಂದ ಮಗ ಮೃತಪಟ್ಟಿದ್ದಾನೆಂದು ಭಾವಿಸಿದ ಕುಟುಂಬ ಆಗಸ್ಟ್ 13ರಂದು ಅಂತ್ಯಕ್ರಿಯೆ ನೆರವೇರಿಸಿತ್ತು.

ಆದರೆ ಸೆಪ್ಟೆಂಬರ್ 2ರಂದು ಬಂದ ಜೈಲು ಸಿಬ್ಬಂದಿಯ ಕರೆ ಇಡೀ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ತಂದು ಕೊಟ್ಟಿತ್ತು. ಜಲಂಧರ್ ಪೊಲೀಸರು ಸುಮಾರು ಒಂದು ತಿಂಗಳ ಹಿಂದೆ ಲೋಯಿಟರಿಂಗ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ರವಿ ಕುಮಾರ್‌ನನ್ನು ಬಂಧಿಸಿದ್ದರು. ಬಳಿಕ ಅವರನ್ನು ಕಪುರ್ತಲಾ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿತ್ತು. ಈ ಮಾಹಿತಿ ತಿಳಿದ ಕುಟುಂಬದವರು ಮರುದಿನ ಜೈಲಿಗೆ ತೆರಳಿದ್ದು, ಅಲ್ಲಿ ರವಿ ಕುಮಾರ್ ಜೀವಂತವಾಗಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಮಗನ ಸಾವಿನ ದುಃಖದಲ್ಲಿ ಅಂತ್ಯಕ್ರಿಯೆ ನಡೆಸಿದ್ದ ಕುಟುಂಬಕ್ಕೆ, ಜೀವಂತವಾಗಿರುವ ಮಗನನ್ನು ಮತ್ತೆ ನೋಡುವಂತಾಗಿದೆ.

ಈ ಘಟನೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಗಸ್ಟ್ 13ರಂದು ಅಂತ್ಯಕ್ರಿಯೆ ನೆರವೇರಿಸಿದ ಶವ ಯಾರದ್ದು? ಶವದ ಗುರುತಿಸುವಿಕೆಯಲ್ಲಿ ತಪ್ಪು ಹೇಗೆ ಸಂಭವಿಸಿತು? ಜೈಲಿನಲ್ಲಿದ್ದ ರವಿ ಕುಮಾರ್ ಬಗ್ಗೆ ಕುಟುಂಬಕ್ಕೆ ಮೊದಲೇ ಮಾಹಿತಿ ಯಾಕೆ ತಲುಪಲಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ. ಸದ್ಯ ಮಗ ಜೀವಂತವಾಗಿರುವುದು ಕುಟುಂಬಕ್ಕೆ ನೆಮ್ಮದಿ ತಂದಿದ್ದರೂ, ಸುಟ್ಟ ಶವದ ನಿಜವಾದ ಗುರುತು ಪತ್ತೆಹಚ್ಚುವುದು ಪ್ರಕರಣದ ಪ್ರಮುಖ ಪ್ರಶ್ನೆಯಾಗಿದೆ.

Read More
Next Story