ವಿದ್ಯಾರ್ಥಿಗಳ ಕಾನೂನು ನೆರವಿಗೆ ಕಪಿಲ್ ಸಿಬಲ್ 1 ಕೋಟಿ ರೂ. ದೇಣಿಗೆ
x

ಪ್ರತಿಭಟನೆಯಲ್ಲಿ ಬಂಧಿತರಾದ ವಿದ್ಯಾರ್ಥಿಗಳಿಗೆ ಕಾನೂನು ನೆರವಿಗಾಗಿ ನಿಧಿ

ವಿದ್ಯಾರ್ಥಿಗಳ ಕಾನೂನು ನೆರವಿಗೆ ಕಪಿಲ್ ಸಿಬಲ್ 1 ಕೋಟಿ ರೂ. ದೇಣಿಗೆ

ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಬಂಧಿತರಾದವರಿಗೆ ಕಾನೂನು ನೆರವು ನೀಡಲು ಸಿಜೆಪಿ ನಿಧಿಗೆ ಕಪಿಲ್ ಸಿಬಲ್1 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ. ದೇಶದ ವಕೀಲರಿಗೆ ಸಹ ಸಹಾಯಕ್ಕೆ ಕರೆ ನೀಡಿದ್ದಾರೆ.


Click the Play button to hear this message in audio format

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಬಂಧನಕ್ಕೊಳಗಾದ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರಿಗೆ ಕಾನೂನು ನೆರವು ಒದಗಿಸಲು ಕಾಕ್‌ರೋಚ್ ಜನತಾ ಪಾರ್ಟಿ (CJP) ಸ್ಥಾಪಿಸಿರುವ ನಿಧಿಗೆ ಹಿರಿಯ ವಕೀಲ ಕಪಿಲ್ ಸಿಬಲ್ 1 ಕೋಟಿ ರೂ. ದೇಣಿಗೆ ನೀಡಿರುವುದಾಗಿ ಘೋಷಿಸಿದ್ದಾರೆ.

ಜುಲೈ 25ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದ ಬಳಿಕ ಸಿಜೆಪಿ ಜಂತರ್ ಮಂತರ್ ಪ್ರತಿಭಟನೆಯನ್ನು ಹಿಂಪಡೆದಿತ್ತು. ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಲ್ಲ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು ಹಾಗೂ ಯಾವುದೇ ದಂಡಾತ್ಮಕ ಕ್ರಮ ಕೈಗೊಳ್ಳಬಾರದು ಎಂಬ ಬೇಡಿಕೆಯನ್ನು ಪಕ್ಷ ಮುಂದಿಟ್ಟಿತ್ತು.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿಸಿಜೆಪಿ ವಕ್ತಾರ ಸೌರವ್ ದಾಸ್ ಮಾತನಾಡಿ, ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗುವ ಆತಂಕ ಮುಂದುವರಿದಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕಾನೂನು ನೆರವು ಒದಗಿಸಲು ಕಪಿಲ್ ಸಿಬಲ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್, ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಲು ಸಿಜೆಪಿ ವಿಶೇಷ ವೆಬ್‌ಸೈಟ್ ಆರಂಭಿಸಲಿದೆ ಎಂದು ಹೇಳಿದರು. ಈ ವೆಬ್‌ಸೈಟ್ ಮೂಲಕ ಉಚಿತವಾಗಿ ಅಥವಾ ಇತರ ರೀತಿಯಲ್ಲಿ ಕಾನೂನು ನೆರವು ನೀಡಲು ಬಯಸುವ ವಕೀಲರು ಕೂಡ ಸೇರ್ಪಡೆಯಾಗಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ದೇಶದ ಯಾವುದೇ ಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಅಥವಾ ಪ್ರತಿಭಟನಾಕಾರರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸಿದರೆ, ಅವುಗಳನ್ನು ಪತ್ತೆಹಚ್ಚಿ ಕಾನೂನು ನೆರವು ನೀಡುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಬಾರದು, ದಾಖಲಾಗಿದ್ದರೆ ಅವುಗಳನ್ನು ಹಿಂಪಡೆಯಬೇಕು ಎಂಬುದು ನಮ್ಮ ಆಗ್ರಹ ಎಂದು ಕಪಿಲ್ ಸಿಬಲ್ ಹೇಳಿದರು.

ಈ ಉದ್ದೇಶಕ್ಕಾಗಿ ನಾನು ವೈಯಕ್ತಿಕವಾಗಿ1 ಕೋಟಿ ರೂ. ನೀಡಿದ್ದೇನೆ. ದೇಶದಾದ್ಯಂತ ಇರುವ ವಕೀಲರು ಕೂಡ ಈ ನಿಧಿಗೆ ತಮ್ಮ ಕೊಡುಗೆ ನೀಡುವ ಮೂಲಕ ಕಾನೂನು ದುರುಪಯೋಗಕ್ಕೆ ಒಳಗಾದವರಿಗೆ ನೆರವಾಗಬೇಕು ಎಂದು ಕಪಿಲ್ ಸಿಬಲ್ ಮನವಿ ಮಾಡಿದರು.

Read More
Next Story