
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿದಂತೆ ಇಬ್ಬರು ಸಾವು
ನಾಲ್ಕು ಆಸನಗಳ ತರಬೇತಿ ವಿಮಾನವು ಗಾರ್ಗ್ ಏವಿಯೇಷನ್ ಟ್ರೈನಿಂಗ್ ಸೆಂಟರ್‌ನಿಂದ ಟೇಕ್-ಆಫ್ ಆಗಿತ್ತು. ಇಬ್ಬರೂ ಅನುಭವಿ ಪೈಲಟ್‌ಗಳಾಗಿದ್ದು, 3 ಸಾವಿರ ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಕರ್ನಾಟಕದ ಯುವ ಪೈಲಟ್ ಸೇರಿದಂತೆ ಇಬ್ಬರು ತರಬೇತುದಾರರು ಸಾವನ್ನಪ್ಪಿದ್ದಾರೆ. ಕಾನ್ಪುರದ ಗಂಗಾ ಬ್ಯಾರೇಜ್ ಬಳಿಯ ನತ್ತಾ ಪುರ್ವಾ ಗ್ರಾಮದ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವಾಯುಯಾನ ವಲಯದಲ್ಲಿ ಆತಂಕ ಮೂಡಿಸಿದೆ.
ಮೃತಪಟ್ಟವರನ್ನು ಗುಜರಾತ್ ಮೂಲದ ತರಬೇತುದಾರ ಸಚಿನ್ ಭಾಟಿಯಾ ಮತ್ತು ಕರ್ನಾಟಕದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ಕಾನ್ಪುರದ ಗಾರ್ಗ್ ಏವಿಯೇಷನ್ ಟ್ರೈನಿಂಗ್ ಸೆಂಟರ್‌ಗೆ ಸೇರಿದ ಟೆಕ್ನಾಮ್ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದರು. ಬುಧವಾರ ಬೆಳಿಗ್ಗೆ ಸುಮಾರು 11.30ರ ಸುಮಾರಿಗೆ ಆಕಾಶದಲ್ಲಿ ಹಾರುತ್ತಿದ್ದ ವಿಮಾನವು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಗಂಗಾ ಬ್ಯಾರೇಜ್ ಬಳಿಯ ಖಾಲಿ ಜಾಗದಲ್ಲಿ ಬಿದ್ದಿದೆ.
ಘಟನೆ ಸಂಭವಿಸುತ್ತಿದ್ದಂತೆ ಕಾನ್ಪುರ ಪೊಲೀಸ್ ಆಯುಕ್ತ ರಘುವೀರ್ ಲಾಲ್, ಜಂಟಿ ಪೊಲೀಸ್ ಆಯುಕ್ತ ಸಂಕಲ್ಪ್ ಶರ್ಮಾ ಮತ್ತು ಕೇಂದ್ರ ಡಿಸಿಪಿ ಅತುಲ್ ಶ್ರೀವಾಸ್ತವ ಅವರು ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿದರು. ಪೊಲೀಸ್ ಪಡೆ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ವಿಮಾನದ ಅವಶೇಷಗಳು ದೊಡ್ಡ ಮಟ್ಟದಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು.
ಇಬ್ಬರೂ ಅನುಭವಿ ಪೈಲಟ್‌ಗಳು
ಘಟನೆಯ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ರಘುವೀರ್ ಲಾಲ್, ನಾಲ್ಕು ಆಸನಗಳ ಈ ತರಬೇತಿ ವಿಮಾನವು ಗಾರ್ಗ್ ಏವಿಯೇಷನ್ ಟ್ರೈನಿಂಗ್ ಸೆಂಟರ್‌ನಿಂದ ಟೇಕ್-ಆಫ್ ಆಗಿತ್ತು. ಇಬ್ಬರೂ ಅನುಭವಿ ಪೈಲಟ್‌ಗಳಾಗಿದ್ದು, ಒಟ್ಟಾರೆಯಾಗಿ 3,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷವೇ ಕಾರಣವೇ ಅಥವಾ ಹವಾಮಾನ ವೈಪರೀತ್ಯವೇ ಎಂಬ ಬಗ್ಗೆ ತಾಂತ್ರಿಕ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಆಕಾಶದಲ್ಲಿ ವಿಮಾನ ಹಾರುತ್ತಿದ್ದಾಗ ಇದ್ದಕ್ಕಿದ್ದಂತೆ ಭಾರಿ ಸ್ಫೋಟದ ಶಬ್ದ ಕೇಳಿಸಿತು. ಅದು ಬಾಂಬ್ ಸ್ಫೋಟದಂತೆ ಭಾಸವಾಯಿತು. ನಂತರ ವಿಮಾನವು ನೇರವಾಗಿ ಭೂಮಿಗೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಮಾನವು ಯಾವುದಾದರೂ ವಸ್ತುವಿಗೆ ಡಿಕ್ಕಿ ಹೊಡೆದಿದೆಯೇ ಅಥವಾ ಇಂಜಿನ್‌ನಲ್ಲಿ ಅನಿರೀಕ್ಷಿತ ದೋಷ ಕಾಣಿಸಿಕೊಂಡಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಾಯುಯಾನ ತಜ್ಞರ ತನಿಖೆ
ಅಪಘಾತದ ನಂತರ ಸ್ಥಳದಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ತಜ್ಞರು ಮತ್ತು ಫಾರೆನ್ಸಿಕ್ ತಂಡಗಳು ಬೀಡುಬಿಟ್ಟಿವೆ. ವಿಮಾನದ ಬ್ಲ್ಯಾಕ್ ಬಾಕ್ಸ್ ಅಥವಾ ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ವಶಕ್ಕೆ ಪಡೆದು, ವಿಮಾನದ ಕೊನೆಯ ಕ್ಷಣಗಳಲ್ಲಿ ನಡೆದ ಬೆಳವಣಿಗೆಗಳೇನು ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ವಿಮಾನದ ಎಂಜಿನ್ ಭಾಗಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಯಾವುದೇ ರೀತಿಯಲ್ಲಿ ಬಾಹ್ಯ ಅಡೆತಡೆಗಳು ಉಂಟಾಗಿದ್ದವೇ ಎಂಬ ಬಗ್ಗೆಯೂ ಪರೀಕ್ಷೆ ನಡೆಸಲಾಗುತ್ತಿದೆ.
ಅಭಿಷೇಕ್ ಪೂಜಾರಿ ಅಗಲಿಕೆಗೆ ಕಂಬನಿ
ಕರ್ನಾಟಕದ ಮೂಲದ ಅಭಿಷೇಕ್ ಪೂಜಾರಿ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಯುವಕನ ಅಕಾಲಿಕ ಮರಣದಿಂದಾಗಿ ಆತನ ಕುಟುಂಬದವರು ಮತ್ತು ತರಬೇತಿ ಕೇಂದ್ರದ ಸಿಬ್ಬಂದಿ ದುಃಖದಲ್ಲಿ ಮುಳುಗಿದ್ದಾರೆ. ಭವಿಷ್ಯದಲ್ಲಿ ಉತ್ತಮ ಪೈಲಟ್ ಆಗಬೇಕೆಂಬ ಕನಸು ಹೊತ್ತಿದ್ದ ಅಭಿಷೇಕ್ ಅವರ ಸಾವಿನ ಸುದ್ದಿ ಆಘಾತ ಉಂಟುಮಾಡಿದೆ.
ತರಬೇತಿ ಸಂಸ್ಥೆಗಳು ಹಾರಾಟದ ಮೊದಲು ನಡೆಸುವ ಸುರಕ್ಷತಾ ತಪಾಸಣೆ ಮತ್ತು ನಿರ್ವಹಣಾ ಪ್ರಕ್ರಿಯೆಗಳ ಬಗ್ಗೆಯೂ ಈಗ ಪ್ರಶ್ನೆಗಳು ಉದ್ಭವಿಸಿವೆ. ಗಾರ್ಗ್ ಏವಿಯೇಷನ್ ಟ್ರೈನಿಂಗ್ ಸೆಂಟರ್‌ನ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವಷ್ಟೇ, ಈ ದುರ್ಘಟನೆಗೆ ನಿರ್ದಿಷ್ಟವಾಗಿ ಯಾವ ತಾಂತ್ರಿಕ ಅಂಶಗಳು ಕಾರಣ ಎಂಬುದರ ಬಗ್ಗೆ ಅಧಿಕೃತ ವರದಿ ಸಿದ್ಧವಾಗಲಿದೆ.

