
ತಮಿಳುನಾಡಿನಲ್ಲಿ ರಾಜಕೀಯ ಸಂಚಲನ; ಬಿಜೆಪಿಗೆ ಅಣ್ಣಾಮಲೈ ಗುಡ್ ಬೈ, ಹೊಸ ಪಕ್ಷ ಸ್ಥಾಪನೆ?
ಕೊಯಮತ್ತೂರಿನಾದ್ಯಂತ "ನಿರ್ಭೀತ ಮನಸ್ಸುಗಳಿಗೆ ಯಾವುದೇ ಮಿತಿಗಳಿಲ್ಲ" ಎಂಬ ಅಡಿಬರಹವಿರುವ ಅಣ್ಣಾಮಲೈ ಅವರ ಪೋಸ್ಟರ್ಗಳು ರಾರಾಜಿಸುತ್ತಿವೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಐತಿಹಾಸಿಕ ಗೆಲುವು ಸಾಧಿಸಿ, ಮುಖ್ಯಮಂತ್ರಿ ಗದ್ದುಗೆ ಏರಿದ ಬೆನ್ನಲ್ಲೇ ದ್ರಾವಿಡ ನಾಡಿನ ರಾಜಕಾರಣ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.
ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಗಳು ತಮಿಳುನಾಡು ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿವೆ. ಚುನಾವಣೆ ಮುಗಿದ ಬಳಿಕ ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ಅಣ್ಣಾಮಲೈ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಎಕ್ಸ್‌ನಲ್ಲಿ ಧ್ವಜ, ಲೋಗೋ ವೈರಲ್
ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆಗೆ ಪೂರಕವೆಂಬಂತೆ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂಭಾವ್ಯ ಪಕ್ಷದ ಹೆಸರು ಹಾಗೂ ಆಕರ್ಷಕ ಧ್ವಜದ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ. ಇಂದೇ ಹೊಸ ಪಕ್ಷದ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ಆಪ್ತ ವಲಯಗಳು ತಿಳಿಸಿವೆ.
ಇದರ ಬೆನ್ನಲ್ಲೇ ಕೊಯಮತ್ತೂರಿನಾದ್ಯಂತ "ನಿರ್ಭೀತ ಮನಸ್ಸುಗಳಿಗೆ ಯಾವುದೇ ಮಿತಿಗಳಿಲ್ಲ" ಎಂಬ ಅಡಿಬರಹವಿರುವ ಅಣ್ಣಾಮಲೈ ಅವರ ಪೋಸ್ಟರ್ಗಳು ರಾರಾಜಿಸುತ್ತಿವೆ.
ವಿಜಯ್ ಹಾದಿಯಲ್ಲೇ ಅಣ್ಣಾಮಲೈ ನಡೆ
ಮುಖ್ಯಮಂತ್ರಿ ವಿಜಯ್ ಅವರು ‘ತಮಿಳಗ ವೆಟ್ರಿಕಳಗಂ’ (ಟಿವಿಕೆ) ಪಕ್ಷ ಸ್ಥಾಪಿಸುವ ಮುನ್ನ ತಮ್ಮ ಅಭಿಮಾನಿ ಬಳಗವಾದ ‘ವಿಜಯ್ ಮಕ್ಕಳ್ ಲಯಕ್ಕಂ’ (ವಿಎಂಐ) ಅನ್ನು ಸಂಘಟನಾತ್ಮಕವಾಗಿ ಬಳಸಿಕೊಂಡಿದ್ದರು. ಈಗ ಅದೇ ರೀತಿ ಅಣ್ಣಾಮಲೈ ಅವರ ಅಭಿಮಾನಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಯಾದ ʼಅಣ್ಣಾಮಲೈ ಅನ್ಬು ಕೂಟಮ್ʼ ರಾಜ್ಯಾದ್ಯಂತ ಹೊಸ ಸದಸ್ಯರು ಹಾಗೂ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಹೊಸ ಪಕ್ಷದ ಉದಯಕ್ಕೆ ಮುನ್ನುಡಿಯಾಗಿದೆ.
"ತಮಿಳುನಾಡಿನಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷ ಉದಯಿಸುತ್ತಿದೆ, ಈ ಬಗ್ಗೆ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗಳು ಚುರುಕುಗೊಂಡಿವೆ." ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಪೋಸ್ಟ್ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಸಿಂಗಂ
ಕಳೆದ ಕೆಲ ಸಮಯದಿಂದ ಅಣ್ಣಾಮಲೈ ಮತ್ತು ಬಿಜೆಪಿ ಕೇಂದ್ರ ನಾಯಕರ ನಡುವೆ ಅಂತರ ಹೆಚ್ಚಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಪ್ರಸಾರದ ಬಗ್ಗೆ ಅಣ್ಣಾಮಲೈ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸತತ ಎರಡು ಬಾರಿ ನಡೆದ ಬಿಜೆಪಿಯ ರಾಜ್ಯ ಘಟಕದ ಪ್ರಮುಖ ಸಮಿತಿಗಳ ಸಭೆಗೂ ಗೈರಾಗಿದ್ದರು. 9ನೇ ತರಗತಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ತ್ರಿಭಾಷಾ ನೀತಿ ಪರಿಚಯಿಸುವ ಸಿಬಿಎಸ್ಇ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಕೇಂದ್ರದ ನೀತಿಯನ್ನೇ ಪ್ರಶ್ನಿಸಿದ್ದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಅಣ್ಣಾಮಲೈ ತೀವ್ರ ಅಸಮಾಧಾನಗೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ, ಅಲ್ಲದೇ ಪಕ್ಷದ ಪ್ರಚಾರದಲ್ಲೂ ಭಾಗವಹಿಸಿರಲಿಲ್ಲ.
ಮಾಜಿ ಸಿಎಂ ಜಯಲಲಿತಾ ಅವರ ಕುರಿತಾದ ಅಣ್ಣಾಮಲೈ ಹೇಳಿಕೆಗಳು ಎಐಎಡಿಎಂಕೆ ಕೆಂಗಣ್ಣಿಗೆ ಗುರಿಯಾಗಿದ್ದವು. ಅಲ್ಲದೆ ರಾಜ್ಯ ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಸೇರಿ ಹಲವು ನಾಯಕರೊಂದಿಗೆ ಅಣ್ಣಾಮಲೈ ಸಂಬಂಧ ಹದಗೆಟ್ಟಿತ್ತು ಎನ್ನಲಾಗಿದೆ. ಇಷ್ಟೆಲ್ಲಾ ಸೈದ್ಧಾಂತಿಕ ಸಂಘರ್ಷಗಳಿದ್ದರೂ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಎಐಎಡಿಎಂಕೆ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಾಗ ಅಣ್ಣಾಮಲೈ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಇದೇ ಕಾರಣಕ್ಕೆ ಅವರು ಈಗ ಕಮಲ ಪಾಳಯಕ್ಕೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

