NEET PROTEST LIVE| ಪ್ರಧಾನಿ ಪೋಸ್ಟ್‌ಗೆ My Name Is Nothing ಎಂದ ಸಿಜೆಪಿ
x

NEET PROTEST LIVE| ಪ್ರಧಾನಿ ಪೋಸ್ಟ್‌ಗೆ 'My Name Is Nothing' ಎಂದ ಸಿಜೆಪಿ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ 34ನೇ ದಿನಕ್ಕೆ ಕಾಲಿಟ್ಟಿದೆ. ಜಂತರ್ ಮಂತರ್‌ನಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವ ಆರೋಪದ ನಡುವೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿದಿದೆ.


Click the Play button to hear this message in audio format

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ ಗುರುವಾರ (ಜುಲೈ 23) 34ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಬುಧವಾರ ರಾತ್ರಿ ಜಂತರ್ ಮಂತರ್ ಸುತ್ತಮುತ್ತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಜೆಪಿ ಆರೋಪಿಸಿದ್ದು, ಸರ್ಕಾರ ಮತ್ತೊಮ್ಮೆ ಪ್ರತಿಭಟನಾಕಾರರ ಮೇಲೆ ಪೊಲೀಸ್ ದಮನಕ್ಕೆ ಸಿದ್ಧತೆ ನಡೆಸುತ್ತಿದೆಯೇ ಎಂದು ಪ್ರಶ್ನಿಸಿದೆ.

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಜಂತರ್ ಮಂತರ್‌ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಸರ್ಕಾರ ಮತ್ತೊಮ್ಮೆ ಕ್ರೂರ ದಮನಕ್ಕೆ ಮುಂದಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ನಿಯೋಜನೆಗೊಂಡಿರುವ ಪೊಲೀಸ್ ಹಾಗೂ ಅರೆಸೈನಿಕ ಪಡೆಗಳಿಗೆ ಮನವಿ ಮಾಡಿದ ಅವರು, ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಅಕ್ರಮ ಆದೇಶಗಳನ್ನು ಪಾಲಿಸಬೇಡಿ. ಜನರ ಪರ ನಿಲ್ಲುತ್ತೀರಾ ಅಥವಾ ಸರ್ವಾಧಿಕಾರಿ ಧೋರಣೆಯ ಪರ ನಿಲ್ಲುತ್ತೀರಾ ಎಂಬುದು ನಿಮ್ಮ ಪರೀಕ್ಷೆಯಾಗಿದೆ ಎಂದು ಹೇಳಿದ್ದಾರೆ.

ಸಿಜೆಪಿ ವಕ್ತಾರ ಸೌರವ್ ದಾಸ್ ಕೂಡ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಶಾಂತಿಯುತ ಪ್ರತಿಭಟನಾಕಾರರ ಮೇಲೆ ದಮನ ನಡೆಸುವ ಅಪಾಯವನ್ನು ಸರ್ಕಾರ ಕೈಗೊಳ್ಳಬಾರದು. ಪ್ರತಿಭಟನೆಯನ್ನು ನಿರ್ಲಕ್ಷಿಸುವುದರಿಂದ ಸರ್ಕಾರವೇ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Live Updates

  • 22 July 2026 1:17 PM IST

    ಲೋಕಸಭೆಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಚರ್ಚೆಗೆ ಕೇಂದ್ರ ಒಪ್ಪಿಗೆ; ಓಂ ಬಿರ್ಲಾ ಭೇಟಿಯಾದ ಧರ್ಮೇಂದ್ರ ಪ್ರಧಾನ

    ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಲೋಕಸಭೆಯಲ್ಲಿ ವಿವರವಾದ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಬುಧವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಂಸತ್ ಭವನದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.

    ಸರ್ಕಾರ ಲೋಕಸಭೆಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಸುದೀರ್ಘ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ ಕೆಲವೇ ಕ್ಷಣಗಳಲ್ಲಿ ಧರ್ಮೇಂದ್ರ ಪ್ರಧಾನ ಅವರು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ವಿಚಾರದ ಚರ್ಚೆ ಯಾವ ನಿಯಮದಡಿ ನಡೆಯಬೇಕು, ಯಾವ ದಿನ ಚರ್ಚೆಗೆ ಅವಕಾಶ ನೀಡಬೇಕು ಹಾಗೂ ಚರ್ಚೆಯ ಅವಧಿ ಎಷ್ಟು ಇರಬೇಕು ಎಂಬುದನ್ನು ನಿರ್ಧರಿಸಲು ಎಲ್ಲಾ ಪಕ್ಷಗಳ ಸಭೆ ಕರೆಯುವಂತೆ ಕೇಂದ್ರ ಸರ್ಕಾರ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದೆ.

    ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಪ್ರತಿಪಕ್ಷಗಳು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಡೆಯಲಿರುವ ಚರ್ಚೆಗೆ ರಾಜಕೀಯ ಮಹತ್ವ ಹೆಚ್ಚಾಗಿದೆ.

  • 22 July 2026 1:05 PM IST

    ನೀಟ್ ರದ್ದುಪಡಿಸಿ, ಎನ್‌ಟಿಎಗೆ ಹೊಣೆಗಾರಿಕೆ ನಿಗದಿಪಡಿಸಿ: ಕೇಂದ್ರದ ವಿರುದ್ಧ ಕಾರ್ತಿ ಚಿದಂಬರಂ ವಾಗ್ದಾಳಿ

    ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದೇಶದ ಪರೀಕ್ಷಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುಗ್ಗಿಸಿವೆ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿವಿಧ ಪರೀಕ್ಷೆಗಳಲ್ಲಿ ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಪ್ರಶ್ನೆಪತ್ರಿಕೆ ಸೋರಿಕೆಗಳು ನಡೆಯುತ್ತಿವೆ. ನೀಟ್‌ನಲ್ಲಿ ನಡೆದ ಘಟನೆ ಕೊನೆಯ ಹೊಡೆತದಂತಾಗಿದೆ. ಇದರಿಂದ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಗಂಭೀರವಾಗಿ ಹಾನಿಯಾಗಿದೆ" ಎಂದು ಆರೋಪಿಸಿದರು. ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಯಾವುದೇ ವ್ಯವಸ್ಥಿತ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು. "ಹೊಣೆಗಾರಿಕೆಯನ್ನು ನಿಗದಿಪಡಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಚಿವರು, ಕಾರ್ಯದರ್ಶಿಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ  ಮುಖ್ಯಸ್ಥರು ತಮ್ಮ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ಇದುವರೆಗೆ ಯಾರ ಮೇಲೂ ಯಾವುದೇ ಹೊಣೆಗಾರಿಕೆ ನಿಗದಿಪಡಿಸಲಾಗಿಲ್ಲ" ಎಂದು ಕಾರ್ತಿ ಚಿದಂಬರಂ ಹೇಳಿದರು.

    ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಮೂಲಕ ದೇಶದ ಪರೀಕ್ಷಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

  • 22 July 2026 12:37 PM IST

    ಸಿಜೆಪಿ ಪ್ರತಿಭಟನೆ ನಡುವೆ ಇಂದು ಜೆ.ಪಿ. ನಡ್ಡಾ ಜೊತೆ ಮಾತುಕತೆ ಸಾಧ್ಯತೆ

    ದೆಹಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿ ನೇತೃತ್ವದ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಬುಧವಾರ ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಿಜೆಪಿ ವಕ್ತಾರ ಆಶುತೋಷ್ ರಂಕಾ ಅವರ ಪ್ರಕಾರ, ಈ ಸಭೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಆ ಮಾಹಿತಿಯನ್ನು ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

    "ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಉಳಿದ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ," ಎಂದು ಆಶುತೋಷ್ ರಂಕಾ ತಿಳಿಸಿದ್ದಾರೆ. ಪ್ರತಿಭಟನೆಗೆ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ಸಂವಾದ ಆರಂಭಿಸಲು ಈ ಸಭೆ ಮಹತ್ವದ ಹೆಜ್ಜೆಯಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

  • 22 July 2026 12:21 PM IST

    ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ತಿಂಗಳು ಪೂರ್ಣ; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

    ಪರೀಕ್ಷಾ ಅಕ್ರಮಗಳ ಆರೋಪದ ವಿರುದ್ಧ ನಡೆಯುತ್ತಿರುವ ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆ ಬುಧವಾರ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಧರಣಿ ಮುಂದುವರಿಸಿದ್ದು, ಬಿಗಿ ಭದ್ರತೆಯ ನಡುವೆಯೂ ಹೊಸ ಸ್ವಯಂಸೇವಕರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

    ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ, "ಇಂದು ಬೆಳಿಗ್ಗೆ ಜಂತರ್ ಮಂತರ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಸೇರಿದ್ದಾರೆ" ಎಂದು ಹೇಳಿದೆ. ಜೊತೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿದೆ. "ಭಾರತದ ಯುವಕರಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧರ್ಮೇಂದ್ರ ಪ್ರಧಾನ್ ಹೆಚ್ಚು ಪ್ರಿಯವೇ?" ಎಂದು ಪ್ರಶ್ನಿಸಿದೆ.

    ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಾವು ಈ ಸ್ಥಳವನ್ನು ಬಿಡುವುದಿಲ್ಲ. ಜುಲೈ 20 ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ದಿನ. ದೇಶದ ಯುವಕರು ಇನ್ನು ಮೌನವಾಗಿರುವುದಿಲ್ಲ" ಎಂದು ಹೇಳಿದ್ದಾರೆ.

    ಇದೇ ವೇಳೆ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ, "ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗೆ ಮಾತ್ರ ನಾವು ಕರೆ ನೀಡಿದ್ದೇವೆ. ಬೇರೆ ಯಾವುದೇ ಸ್ಥಳದಲ್ಲಿ ನಡೆಯುವ ಪ್ರತಿಭಟನೆಗಳಿಗೆ ಸಿಜೆಪಿಯ ಸಂಬಂಧ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

    ಇನ್ನೊಂದೆಡೆ, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಮೆದಾಂತಾ ಆಸ್ಪತ್ರೆಯಲ್ಲಿ ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಮುಂದುವರಿಸಿದ್ದಾರೆ.

  • 22 July 2026 11:59 AM IST

    "ನಮ್ಮ ಸಮಯ ಹಾಳು ಮಾಡ್ಬೇಡಿ" – CJP ಪರ ಅರ್ಜಿದಾರರಿಗೆ ಸುಪ್ರೀಂ ತಾಕೀತು

    ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ CJP (ಕಾಕ್ರೋಚ್‌ ಜನತಾ ಪಾರ್ಟಿ) ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಎನ್ನಲಾದ ಲಾಠಿಚಾರ್ಜ್ ವಿಚಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರೂ, ಅರ್ಜಿದಾರರಿಗೆ ನ್ಯಾಯಾಲಯದಿಂದ ಕಟುವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ವಕೀಲರು ವಿಚಾರ ಪ್ರಸ್ತಾಪಿಸಿದಾಗ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, "ನಿಮ್ಮ ಸಮಯವನ್ನೂ, ನಮ್ಮ ಸಮಯವನ್ನೂ ವ್ಯರ್ಥ ಮಾಡಬೇಡಿ" ಎಂದು ಖಡಕ್‌ವಾಗಿ ಹೇಳಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ವಿಡಿಯೊಗಳನ್ನು ನ್ಯಾಯಾಲಯದ ಮುಂದೆ ಪ್ರದರ್ಶಿಸಲು ವಕೀಲರು ಮುಂದಾದಾಗ, "ನಮಗೆ ಯಾವುದೇ ವಿಡಿಯೊಗಳನ್ನು ನೋಡಬೇಕಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.

    ಜಂತರ್ ಮಂತರ್‌ನಲ್ಲಿ ಉದ್ವಿಗ್ನತೆ

    ಸೋಮವಾರ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ತಡೆದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಲಾಠಿಚಾರ್ಜ್ ನಡೆಸಲಾಗಿದೆ ಎನ್ನಲಾಗಿದೆ. ನೀಲಿ ಬಣ್ಣದ ಗಲಭೆ ನಿಯಂತ್ರಣ ಉಡುಪು ಧರಿಸಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.

    CJP ಆಕ್ರೋಶ

    ಪೊಲೀಸರ ಕ್ರಮವನ್ನು CJP ಸಂಘಟಕರು ತೀವ್ರವಾಗಿ ಖಂಡಿಸಿದ್ದಾರೆ. "ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದು ನಾಚಿಕೆಗೇಡಿನ ದಿನ. ನೈಜ ಸಮಸ್ಯೆಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಂದಿದ್ದ ಪ್ರಾಮಾಣಿಕ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ನೂರಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ" ಎಂದು CJP ವಕ್ತಾರರು ಆರೋಪಿಸಿದ್ದಾರೆ.

    ದೆಹಲಿ ಹೈಕೋರ್ಟ್ ಕೂಡ ತುರ್ತು ವಿಚಾರಣೆಗೆ ನಿರಾಕರಣೆ

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ "ಅತಿಯಾದ ಬಲಪ್ರಯೋಗ"ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ದೆಹಲಿ ಹೈಕೋರ್ಟ್ ಕೂಡ ನಿರಾಕರಿಸಿದೆ.

    ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠ, "ಈ ಎಲ್ಲ ವಿಚಾರಗಳಿಗೆ ನ್ಯಾಯಾಲಯವನ್ನು ಎಳೆದು ತರಬೇಡಿ" ಎಂದು ಅರ್ಜಿದಾರರಿಗೆ ತಿಳಿಸಿದೆ. ಆದಾಗ್ಯೂ, ಈ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಲಾಗಿದೆ. CJP ಪ್ರತಿಭಟನೆ, ವಿದ್ಯಾರ್ಥಿಗಳ ಮೇಲೆ ನಡೆದ ಎನ್ನಲಾದ ಲಾಠಿಚಾರ್ಜ್ ಮತ್ತು ಅದರ ವಿರುದ್ಧದ ಕಾನೂನು ಹೋರಾಟ ಇದೀಗ ದೇಶದ ರಾಜಕೀಯ ಹಾಗೂ ನ್ಯಾಯಾಂಗ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.

  • ರಿತೇಶ್-ಜೆನಿಲಿಯಾ ಶಿಕ್ಷಣ ಹೋರಾಟಕ್ಕೆ ಬೆಂಬಲ, ಸಿಜೆಪಿ ಪ್ರತಿಭಟನೆಗೆ ಸಾಥ್
    22 July 2026 11:05 AM IST

    ರಿತೇಶ್-ಜೆನಿಲಿಯಾ ಶಿಕ್ಷಣ ಹೋರಾಟಕ್ಕೆ ಬೆಂಬಲ, ಸಿಜೆಪಿ ಪ್ರತಿಭಟನೆಗೆ ಸಾಥ್

    ದೆಹಲಿ‌ನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ದೋಷಗಳು ಹಾಗೂ ನೀಟ್ ಪರೀಕ್ಷೆ ಸಂಬಂಧಿತ ವಿವಾದಗಳ ವಿರುದ್ಧ ನಡೆಯುತ್ತಿರುವ ಸಿಜೆಪಿ ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗೆ ನಟ ದಂಪತಿ ರಿತೇಶ್ ದೇಶ್‌ಮುಖ್‌ ಮತ್ತು ಜೆನಿಲಿಯಾ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಜಂಟಿ ಹೇಳಿಕೆ ಹಂಚಿಕೊಂಡಿರುವ ಇಬ್ಬರೂ, "ನಮ್ಮ ದೇಶದ ಯುವಕರೊಂದಿಗೆ ನಾವು ಐಕ್ಯತೆ ವ್ಯಕ್ತಪಡಿಸುತ್ತೇವೆ. ಅವರ ಧ್ವನಿ ಸ್ಪಷ್ಟವಾಗಿ, ಧೈರ್ಯದಿಂದ ಕೇಳಿಸಬೇಕು" ಎಂದು ತಿಳಿಸಿದ್ದಾರೆ. ಯುವಕರೇ ನಮ್ಮ ಪ್ರಜಾಪ್ರಭುತ್ವದ ಹೃದಯಬಡಿತ ಮತ್ತು ದೇಶದ ಭವಿಷ್ಯದ ನಿರ್ಮಾತೃಗಳು. ಅವರ ಮಾತುಗಳನ್ನು ಆಲಿಸಿ, ಅವರಿಗೆ ಬೆಂಬಲ ನೀಡಿ, ಅವರನ್ನು ಸಬಲಗೊಳಿಸೋಣ. ಅವರ ಶಕ್ತಿ, ಧೈರ್ಯ ಮತ್ತು ಕನಸುಗಳು ನಾವು ಕಟ್ಟಲು ಬಯಸುವ ಭಾರತದ ಭವಿಷ್ಯವನ್ನು ರೂಪಿಸಲಿವೆ" ಎಂದು ಹೇಳಿದ್ದಾರೆ.

    ರಿತೇಶ್ ದೇಶ್‌ಮುಖ್‌ ಅವರ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದೊಂದಿಗೆ ದೀರ್ಘಕಾಲದ ರಾಜಕೀಯ ನಂಟಿದೆ. ಅವರ ತಂದೆ ವಿಲಾಸರಾವ್ ದೇಶ್ಮುಖ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಆಗಿದ್ದರೆ, ಸಹೋದರರಾದ ಅಮಿತ್ ದೇಶ್ಮುಖ್ ಮತ್ತು ಧೀರಜ್ ದೇಶ್‌ಮುಖ್‌ ಕಾಂಗ್ರೆಸ್‌ನ ಸಕ್ರಿಯ ನಾಯಕರಾಗಿದ್ದಾರೆ. ಇತ್ತೀಚೆಗೆ ರಿತೇಶ್ ತಮ್ಮ 'ರಾಜಾ ಶಿವಾಜಿ' ಚಿತ್ರದ ಕುರಿತು ಬಿಜೆಪಿ ನಾಯಕ ಸುರೇಶ್ ನಖುವಾ ಮಾಡಿದ್ದ ಟೀಕೆಗೆ ಪ್ರತಿಕ್ರಿಯೆ ನೀಡಿದ್ದರು.

  • 22 July 2026 10:54 AM IST

    ಎನ್‌ಟಿಎ ವೈಫಲ್ಯ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಹೊಣೆ ಹೊತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡಲಿ; ಕಾಂಗ್ರೆಸ್ ಆಗ್ರಹ

    ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕಾಂಗ್ರೆಸ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು "ಅಸಂವೇದನಾಶೀಲ, ಅಸಮರ್ಥ ಮತ್ತು ನಿರಂತರ ಸುಳ್ಳು ಹೇಳುವ ನಾಯಕ" ಎಂದು ಟೀಕಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತಂದಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದೆ ಸಾಮಾಜಿಕ ಜಾಲತಾಣಗಳ ಮೂಲಕ ಅಹಂಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದರು.

    ಮಂಗಳವಾರ ಧರ್ಮೇಂದ್ರ ಪ್ರಧಾನ್, ನೀಟ್‌ಗೆ ಸಂಬಂಧಿಸಿದ ಎಲ್ಲ ನೈಜ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಧರಣಿ ನಡೆಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಟೀಕಿಸಿ, ವಿದ್ಯಾರ್ಥಿಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ಅಸಡ್ಡೆಯ, ಅಸಂವೇದನಾಶೀಲ, ಅಸಮರ್ಥ ಮತ್ತು ಸುಳ್ಳು ಹೇಳುವ ವ್ಯಕ್ತಿ ಎಂದು ಕಿಡಿಕಾರಿದರು. ಅವರ ರಾಜೀನಾಮೆ ಬೇಡಿಕೆ ಕೇವಲ ಒಂದೇ ವಿಚಾರಕ್ಕೆ ಸೀಮಿತವಾಗಿಲ್ಲ. ಕೇಂದ್ರ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ನಡೆದ ವೈಫಲ್ಯಗಳು ಮತ್ತು ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿಯೇ ಈ ಬೇಡಿಕೆ ಇದೆ ಎಂದು ಹೇಳಿದರು.

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಿರಂತರವಾಗಿ ವೈಫಲ್ಯ ಅನುಭವಿಸಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಜೈರಾಮ್ ರಮೇಶ್, 2024ರ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗಳ ರದ್ದು, 2026ರ ನೀಟ್-ಯುಜಿ ಹಾಗೂ ಯುಜಿಸಿ-ನೆಟ್ ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಶಿಕ್ಷಣ ಸಚಿವರ ವೈಫಲ್ಯವನ್ನು ತೋರಿಸುತ್ತವೆ ಎಂದು ಆರೋಪಿಸಿದರು.

    ಈ ಎಲ್ಲ ಪ್ರಕರಣಗಳಲ್ಲೂ ಸಚಿವರು ಪ್ರಶ್ನೆಪತ್ರಿಕೆ ಸೋರಿಕೆ ನಡೆದಿರುವುದನ್ನೇ ನಿರಾಕರಿಸಿದ್ದು, ಎನ್‌ಟಿಎ ಬಲಪಡಿಸುವಂತೆ ಸಂಸತ್ತಿನ ಶಿಕ್ಷಣ ಸ್ಥಾಯಿ ಸಮಿತಿ ನೀಡಿದ್ದ ಶಿಫಾರಸುಗಳನ್ನೂ ಕಡೆಗಣಿಸಿದ್ದಾರೆ. ಪ್ರತಿಪಕ್ಷ ಸದಸ್ಯರು ಸಮಿತಿಯಲ್ಲಿ ಇದ್ದ ಕಾರಣದಿಂದ ಶಿಫಾರಸುಗಳನ್ನು ಒಪ್ಪಿಕೊಳ್ಳಲು ಸರ್ಕಾರ ನಿರಾಕರಿಸಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದರು.

  • 22 July 2026 10:38 AM IST

    ಶಿಕ್ಷಣ ಸಚಿವ ಸ್ಥಾನಕ್ಕೆ ಪ್ರಧಾನ್ ರಾಜೀನಾಮೆ ನೀಡಲಿ: ವೇಣುಗೋಪಾಲ್

    ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆಗಾರಿಕೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಆಗ್ರಹಿಸಿದ್ದಾರೆ.

    ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಶಿಕ್ಷಣ ಸಚಿವರಾಗಿ ಮುಂದುವರಿಯಲು ಧರ್ಮೇಂದ್ರ ಪ್ರಧಾನ್ ಅವರಿಗೆ ಯಾವುದೇ ನೈತಿಕ ಹೊಣೆಗಾರಿಕೆ ಉಳಿದಿಲ್ಲ ಎಂದು ಆರೋಪಿಸಿದರು.

    ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸಂಬಂಧಿಸಿದ ಗಂಭೀರ ಪ್ರಕರಣದಲ್ಲಿ ಸರ್ಕಾರ ಉತ್ತರದಾಯಿತ್ವ ವಹಿಸಬೇಕು. ಈ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವೇಣುಗೋಪಾಲ್ ಒತ್ತಾಯಿಸಿದರು.



  • 22 July 2026 10:35 AM IST

    ನೀಟ್ ವಿವಾದಕ್ಕೆ ಕೇಂದ್ರದ ತಿರುಗೇಟು; ರಾಜೀನಾಮೆ ಬೇಡಿಕೆ ರಾಜಕೀಯ ಎಂದ ಸರ್ಕಾರ

    ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಗಳ ವಿರುದ್ಧ ನಡೆದ ಪೊಲೀಸ್ ಕ್ರಮದ ಕುರಿತು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ನಡುವೆಯೇ, ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

    ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬೆಳಕಿಗೆ ಬಂದ ತಕ್ಷಣವೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ಹಲವು ತಿದ್ದುಪಡಿ ಕ್ರಮಗಳನ್ನು ಆರಂಭಿಸಿದ್ದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸಚಿವರ ರಾಜೀನಾಮೆಗಾಗಿ ಪ್ರತಿಪಕ್ಷ ಮಾಡುತ್ತಿರುವ ಆಗ್ರಹ ರಾಜಕೀಯ ಪ್ರೇರಿತವಾಗಿದೆ ಎಂದು ಮೂಲಗಳು ಹೇಳಿವೆ.

  • 22 July 2026 10:23 AM IST

    ಸಿಜೆಪಿ ವಕ್ತಾರನ ವಾಟ್ಸ್ಆ್ಯಪ್ ಖಾತೆ ಬ್ಲಾಕ್ ಆರೋಪ

    ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮುಖ್ಯ ವಕ್ತಾರ ಸೌರವ್ ದಾಸ್ ಅವರ ವಾಟ್ಸ್ಆ್ಯಪ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸೌರವ್ ದಾಸ್, ತಮ್ಮ ವಾಟ್ಸ್ಆ್ಯಪ್ ಖಾತೆ ಏಕಾಏಕಿ ಬ್ಲಾಕ್ ಆಗಿದ್ದು, ಇದರಿಂದ ಸಂವಹನ ನಡೆಸಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ, ಖಾತೆ ಬ್ಲಾಕ್ ಆಗಿರುವ ಕಾರಣದ ಬಗ್ಗೆ ವಾಟ್ಸ್ಆ್ಯಪ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಲಭ್ಯವಾಗಿಲ್ಲ.

Read More
Next Story