
NEET PROTEST LIVE| ಪ್ರಧಾನಿ ಪೋಸ್ಟ್‌ಗೆ 'My Name Is Nothing' ಎಂದ ಸಿಜೆಪಿ
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ 34ನೇ ದಿನಕ್ಕೆ ಕಾಲಿಟ್ಟಿದೆ. ಜಂತರ್ ಮಂತರ್‌ನಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವ ಆರೋಪದ ನಡುವೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿದಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ ಗುರುವಾರ (ಜುಲೈ 23) 34ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಬುಧವಾರ ರಾತ್ರಿ ಜಂತರ್ ಮಂತರ್ ಸುತ್ತಮುತ್ತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಜೆಪಿ ಆರೋಪಿಸಿದ್ದು, ಸರ್ಕಾರ ಮತ್ತೊಮ್ಮೆ ಪ್ರತಿಭಟನಾಕಾರರ ಮೇಲೆ ಪೊಲೀಸ್ ದಮನಕ್ಕೆ ಸಿದ್ಧತೆ ನಡೆಸುತ್ತಿದೆಯೇ ಎಂದು ಪ್ರಶ್ನಿಸಿದೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಜಂತರ್ ಮಂತರ್‌ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಸರ್ಕಾರ ಮತ್ತೊಮ್ಮೆ ಕ್ರೂರ ದಮನಕ್ಕೆ ಮುಂದಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ನಿಯೋಜನೆಗೊಂಡಿರುವ ಪೊಲೀಸ್ ಹಾಗೂ ಅರೆಸೈನಿಕ ಪಡೆಗಳಿಗೆ ಮನವಿ ಮಾಡಿದ ಅವರು, ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಅಕ್ರಮ ಆದೇಶಗಳನ್ನು ಪಾಲಿಸಬೇಡಿ. ಜನರ ಪರ ನಿಲ್ಲುತ್ತೀರಾ ಅಥವಾ ಸರ್ವಾಧಿಕಾರಿ ಧೋರಣೆಯ ಪರ ನಿಲ್ಲುತ್ತೀರಾ ಎಂಬುದು ನಿಮ್ಮ ಪರೀಕ್ಷೆಯಾಗಿದೆ ಎಂದು ಹೇಳಿದ್ದಾರೆ.
ಸಿಜೆಪಿ ವಕ್ತಾರ ಸೌರವ್ ದಾಸ್ ಕೂಡ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಶಾಂತಿಯುತ ಪ್ರತಿಭಟನಾಕಾರರ ಮೇಲೆ ದಮನ ನಡೆಸುವ ಅಪಾಯವನ್ನು ಸರ್ಕಾರ ಕೈಗೊಳ್ಳಬಾರದು. ಪ್ರತಿಭಟನೆಯನ್ನು ನಿರ್ಲಕ್ಷಿಸುವುದರಿಂದ ಸರ್ಕಾರವೇ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
Live Updates
- 23 July 2026 11:55 AM IST
ಅನಾರೋಗ್ಯದಿಂದ ವಿಶ್ರಾಂತಿ ಪಡೆದ ದೀಪ್ಕೆ; ಸಂಜೆ ಮತ್ತೆ ಸಿಜೆಪಿ ಪ್ರತಿಭಟನೆಗೆ ಹಾಜರು
ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಕಳೆದ ಕೆಲವು ದಿನಗಳಿಂದ ಜ್ವರ ಹಾಗೂ ತೀವ್ರ ಮೈಕೈ ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಯ ನಡುವೆಯೂ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ಇಂದು ಜಂತರ್ ಮಂತರ್‌ನಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ ತಮ್ಮನ್ನು ಕಾಣದಿದ್ದರೆ ಕ್ಷಮಿಸಬೇಕು. ಕೆಲವು ಗಂಟೆಗಳ ಕಾಲ ವಿಶ್ರಾಂತಿ ಪಡೆದು ಆರೋಗ್ಯ ಚೇತರಿಸಿಕೊಳ್ಳಬೇಕಿದೆ ಎಂದು ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಸಂಜೆಯ ವೇಳೆಗೆ ಮತ್ತೆ ಪ್ರತಿಭಟನಾ ಸ್ಥಳಕ್ಕೆ ಮರಳಿ ವಿದ್ಯಾರ್ಥಿಗಳ ಹೋರಾಟದಲ್ಲಿ ಭಾಗವಹಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಸಿಜೆಪಿ ನೇತೃತ್ವದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ.
- 23 July 2026 11:50 AM IST
ರಾಹುಲ್ ಬಂಧನ ಖಂಡನೆ: ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ನಡೆದ ಪ್ರತಿಭಟನೆ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಮಹಿಳಾ ಸಂಸದರ ಸಂಸದೀಯ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಹಿಬಿ ಈಡನ್ ಗುರುವಾರ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.
ಲೋಕಸಭೆ ಮಹಾಸಚಿವರಿಗೆ ಬರೆದ ಪತ್ರದಲ್ಲಿ, ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿದ್ದರೂ ಪೊಲೀಸರು ಪ್ರತಿಭಟನಾ ನಿರತ ಸಂಸದರನ್ನು, ವಿಶೇಷವಾಗಿ ರಾಹುಲ್ ಗಾಂಧಿ ಅವರನ್ನು ಬಲವಂತವಾಗಿ ಎಳೆದು ಚತ್ರಸಾಲ್ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಜುಲೈ 21ರಂದು ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಬೆಂಬಲಕ್ಕಾಗಿ ಕಾಂಗ್ರೆಸ್ ಸಂಸದರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ಹಿಬಿ ಈಡನ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಆಡಳಿತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳು ಹೆಚ್ಚಾಗಿದ್ದು, ಇದಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ದೇಶದ ಯುವಕರ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
- 23 July 2026 10:21 AM IST
ಯುವಕರ ಭವಿಷ್ಯ ಹಾಳು ಮಾಡಿದವರು ಮೋದಿ: ರಾಹುಲ್ ಗಾಂಧಿ ತಿರುಗೇಟು
ಪ್ರಧಾನಿ ನರೇಂದ್ರ ಮೋದಿ ಅವರು ಯುವಕರ ಕಲ್ಯಾಣ ಮತ್ತು ಭವಿಷ್ಯ ಸರ್ಕಾರದ ಮೊದಲ ಆದ್ಯತೆ ಎಂದು ಸಾಮಾಜಿಕ ಜಾಲತಾಣ Xನಲ್ಲಿ ಪ್ರಕಟಿಸಿದ ಪೋಸ್ಟ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ದೇಶದ ಯುವಕರ ಭವಿಷ್ಯವನ್ನು ಹಾಳು ಮಾಡಿರುವುದು ಮೋದಿ ಸರ್ಕಾರವೇ ಎಂದು ಅವರು ಆರೋಪಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ, ನಿರುದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳು ಭಗ್ನಗೊಂಡಿವೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಯುವಕರ ಭವಿಷ್ಯವನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
- 23 July 2026 9:22 AM IST
ಯುವಕರ ಭವಿಷ್ಯವೇ ಮೊದಲ ಆದ್ಯತೆ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯ – ಮೋದಿ
ದೇಶದ ಯುವಕರ ಕಲ್ಯಾಣ ಮತ್ತು ಅವರ ಭವಿಷ್ಯಕ್ಕಿಂತ ಮುಖ್ಯವಾದದ್ದು ಮತ್ತೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ಖಚಿತಪಡಿಸಲು ಕೇಂದ್ರ ಸರ್ಕಾರ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ ಎಂದು ಅವರು ಘೋಷಿಸಿದರು. ಪರೀಕ್ಷಾ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ನಂಬಿಕೆಯನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವನ್ನು ಇನ್ನಷ್ಟು ವೇಗಗೊಳಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.
- 23 July 2026 8:52 AM IST
ಸೋನಂ ವಾಂಗ್‌ಚುಕ್ ಉಪವಾಸ ಅಂತ್ಯಗೊಳಿಸಿ: ಸಿಜೆಪಿ ಅಧ್ಯಕ್ಷ ಅಭಿಜೀತ್ ದೀಪ್ಕೆ ಮನವಿ
ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಧ್ಯಕ್ಷ ಅಭಿಜೀತ್ ದೀಪ್ಕೆ, ಹೋರಾಟದ ನೇತೃತ್ವ ವಹಿಸಿರುವ ಸೋನಮ್ ವಾಂಗ್‌ಚುಕ್ ಅವರಿಗೆ ಅನಿರ್ದಿಷ್ಟ ಉಪವಾಸವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ. ಪ್ರತಿಭಟನೆ ಮುಂದುವರಿಯಲಿದ್ದು, ಆದರೆ ವಾಂಗ್‌ಚುಕ್ ಅವರ ಜೀವವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆಯ 34ನೇ ದಿನ ಹಾಗೂ ಸೋನಮ್ ವಾಂಗ್‌ಚುಕ್ ಅವರ ಉಪವಾಸದ 26ನೇ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ದೀಪ್ಕೆ, ಪ್ರತಿಭಟನಾಕಾರರ ಮೇಲೆ ನಡೆದ ಲಾಠಿಚಾರ್ಜ್ ಅತ್ಯಂತ ಕ್ರೂರವಾಗಿತ್ತು ಎಂದು ಆರೋಪಿಸಿದರು. ಈ ಕ್ರಮಕ್ಕೆ ಹೊಣೆಗಾರರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.
ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಆದರೆ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಮತ್ತು ಜೀವ ಅತ್ಯಂತ ಮುಖ್ಯವಾಗಿರುವುದರಿಂದ ಅವರು ಉಪವಾಸವನ್ನು ಕೊನೆಗೊಳಿಸಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ ಎಂದು ಅಭಿಜೀತ್ ದೀಪ್ಕೆ ಹೇಳಿದರು.
- 23 July 2026 8:24 AM IST
ದೇಶಾದ್ಯಂತ ವ್ಯಾಪಿಸಿದ ನೀಟ್ ಪ್ರತಿಭಟನೆ; ದೆಹಲಿಯಿಂದ ಆರಂಭವಾದ ಹೋರಾಟಕ್ಕೆ ರಾಷ್ಟ್ರವ್ಯಾಪಿ ಬೆಂಬಲ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿಯಲ್ಲಿ ಆರಂಭವಾದ ಹೋರಾಟ ಈಗ ಮುಂಬೈ, ಬೆಂಗಳೂರು, ಪಟ್ನಾ, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ಸೇರಿದಂತೆ ಹಲವು ನಗರಗಳು ಹಾಗೂ ಸಣ್ಣ ಪಟ್ಟಣಗಳಿಗೆ ವಿಸ್ತರಿಸಿದೆ. ವಿವಿಧ ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಪಟ್ನಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು, ಜಲಫಿರಂಗಿ ಹಾಗೂ ಲಾಠಿಚಾರ್ಜ್ ನಡೆಸಿದರು. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಕೆಲವೆಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದೇ ವೇಳೆ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದ್ದು, ವಿದ್ಯಾರ್ಥಿಗಳ ಹಿತಾಸಕ್ತಿಯೇ ಸರ್ಕಾರದ ಆದ್ಯತೆ ಎಂದು ಹೇಳಿದೆ. ಆದಾಗ್ಯೂ, ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ವಿದ್ಯಾರ್ಥಿಗಳ ಆಕ್ರೋಶ ಇನ್ನೂ ಶಮನವಾಗಿಲ್ಲ
- 23 July 2026 8:07 AM IST
ಪ್ರತಿಭಟನೆಗಳನ್ನು ನಿರ್ಲಕ್ಷಿಸಿದರೆ ಸರ್ಕಾರವೇ ಬೆಲೆ ತೆರಲಿದೆ: ಸಿಜೆಪಿ
ದೆಹಲಿ ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿ (CJP) ಪ್ರತಿಭಟನೆಗಳ ನಡುವೆ, ಸಂಘಟನೆಯ ವಕ್ತಾರ ಸೌರವ್ ದಾಸ್ ಕೇಂದ್ರ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಶಾಂತಿಯುತ ಪ್ರತಿಭಟನೆಗಳ ಮೇಲೆ ಪೊಲೀಸರು ನಡೆಸುತ್ತಿರುವ ಕ್ರಮವನ್ನು ಖಂಡಿಸಿದ ಅವರು, ಸರ್ಕಾರವು ಪ್ರತಿಭಟನೆಯನ್ನು ನಿರ್ಲಕ್ಷಿಸುತ್ತಿರುವುದು ಅದರದೇ ಅಪಾಯಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರ ಧ್ವನಿಯನ್ನು ದಮನಿಸುವ ಬದಲು ಅವರ ಬೇಡಿಕೆಗಳಿಗೆ ಸ್ಪಂದಿಸಿ ಮಾತುಕತೆ ನಡೆಸಬೇಕು ಎಂದು ದಾಸ್ ಒತ್ತಾಯಿಸಿದರು. ಪ್ರತಿಭಟನೆಗಳ ವಿರುದ್ಧ ಬಲಪ್ರಯೋಗ ನಡೆಸಿದರೆ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು.
- 23 July 2026 7:56 AM IST
ದೆಹಲಿಯ 16 ಮೆಟ್ರೋ ನಿಲ್ದಾಣಗಳು ತಾತ್ಕಾಲಿಕವಾಗಿ ಬಂದ್
ದೆಹಲಿ ಮೆಟ್ರೋ ರೈಲು ನಿಗಮ (DMRC) ಮಹತ್ವದ ಪ್ರಕಟಣೆ ಹೊರಡಿಸಿದ್ದು, ಇಂದು ಬೆಳಗ್ಗೆ 7:30 ಗಂಟೆಯಿಂದ 16 ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿಸಿದೆ.
ಮುಚ್ಚಲಾದ ಮೆಟ್ರೋ ನಿಲ್ದಾಣಗಳು
ಲೋಕ ಕಲ್ಯಾಣ್ ಮಾರ್ಗ
ರಾಜೀವ್ ಚೌಕ್
ಪಟೇಲ್ ಚೌಕ್
ರಾಮಕೃಷ್ಣ ಆಶ್ರಮ ಮಾರ್ಗ
ಬರಾಖಂಬಾ ರಸ್ತೆ
ಸುಪ್ರೀಂ ಕೋರ್ಟ್
ಸೇವಾ ತೀರ್ಥ
ಜನಪಥ್
ಮಂಡಿ ಹೌಸ್
ಸೆಂಟ್ರಲ್ ಸೆಕ್ರೆಟೇರಿಯಟ್
ಐಟಿಒ
ದೆಹಲಿ ಗೇಟ್
ಇಂದ್ರಪ್ರಸ್ಥ
ಖಾನ್ ಮಾರ್ಕೆಟ್
ಜೋರ್ ಬಾಗ್
ಶಿವಾಜಿ ಸ್ಟೇಡಿಯಂ
ದೆಹಲಿ ಮೆಟ್ರೋ ರೈಲು ನಿಗಮವು (DMRC) ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದೆ. ಮುಚ್ಚುವಿಕೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.
- 23 July 2026 7:50 AM IST
ಸಿಜೆಪಿ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆಗೆ ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಶಾಂತಿಯುತ ಹೋರಾಟವನ್ನು ಮೆಚ್ಚಿರುವ ಅವರು, ಇದು ರಾಜಕೀಯದ ವಿಷಯವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶಾಲಾ ದಿನಗಳ ಹಳೆಯ ಚಿತ್ರವೊಂದನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್, ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ. ಈ ಹೋರಾಟ ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ವಿಷಯವಾಗಿದ್ದು, ಇದನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.
- 22 July 2026 6:07 PM IST
ಹೆಚ್ಎಎಲ್ಗಾಗಿ 600 ಎಕರೆ ಭೂಸ್ವಾಧೀನಕ್ಕೆ ರೈತರ ವಿರೋಧ
ಒಂದು ಕಡೆ ಬಿಡದಿ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದರೆ, ಇದೇ ಸಮಯದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹೆಚ್‌ಎಎಲ್ ಘಟಕದ ವಿಸ್ತರಣೆಗೆ ಭೂಮಿ ನೀಡಲು ನಿರಾಕರಿಸಿ ರೈತರು ಬೀದಿಗಿಳಿದಿದ್ದಾರೆ. "ಪ್ರಾಣ ಕೊಟ್ಟೇವು, ಆದರೆ ಫಲವತ್ತಾದ ಕೃಷಿ ಭೂಮಿಯನ್ನು ನೀಡುವ ಪ್ರಶ್ನೆಯೇ ಇಲ್ಲ" ಎಂದು ಐದು ಗ್ರಾಮಗಳ ರೈತರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಐದು ಗ್ರಾಮಗಳ ರೈತರು ತುಮಕೂರಿನ ಕೆಐಎಡಿಬಿ ಕಚೇರಿಯನ್ನು ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.
ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‌ನಲ್ಲಿರುವ ಹೆಚ್‌ಎಎಲ್ ಘಟಕವು ಈಗಾಗಲೇ ಸುಮಾರು 1,000 ಎಕರೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ತನ್ನ ವಿಸ್ತರಣಾ ಕಾರ್ಯಕ್ಕಾಗಿ ಹೆಚ್ಚುವರಿಯಾಗಿ 600 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹಾಗೂ ಕೆಐಎಡಿಬಿ (KIADB) ಯೋಜನೆ ರೂಪಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸಿಡಿದೆದ್ದಿರುವ ಸ್ಥಳೀಯ ರೈತರು, ತಮ್ಮ ಜಮೀನುಗಳನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಕೆಐಎಡಿಬಿ ಗುರುತಿಸಿರುವ 600 ಎಕರೆ ಭೂಮಿಯಲ್ಲಿ ತೆಂಗು ಮತ್ತು ಅಡಿಕೆಯಂತಹ ಲಾಭದಾಯಕ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಇವು ರೈತರ ಬದುಕಿನ ಆಧಾರಸ್ತಂಭಗಳಾಗಿವೆ. ಈ ಭೂಮಿ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ. ಕೈಗಾರಿಕೆಗಾಗಿ ನಮ್ಮ ಅನ್ನದಾತರ ಹೊಟ್ಟೆಗೆ ಹೊಡೆಯುವುದು ಎಷ್ಟು ಸರಿ? ಎಂದು ರೈತರು ಪ್ರಶ್ನಿಸಿದ್ದಾರೆ.









