
ಜಪಾನ್‌ನಲ್ಲಿ ಭೀಕರ ಭೂಕಂಪ: 7.1 ತೀವ್ರತೆ ದಾಖಲು, ಸುನಾಮಿ ಎಚ್ಚರಿಕೆ
ಜಪಾನ್‌ನ ಕುಮಮೊಟೊ ಪ್ರಾಂತ್ಯದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, 7 ಪ್ರಾಂತ್ಯಗಳಲ್ಲಿ ತುರ್ತು ಎಚ್ಚರಿಕೆ ರವಾನಿಸಲಾಗಿದೆ. ಕರಾವಳಿ ಭಾಗಗಳಲ್ಲಿ 1 ಮೀಟರ್‌ವರೆಗೆ ಸುನಾಮಿ ಅಲೆಗಳ ಮುನ್ಸೂಚನೆ ಇದೆ.
ಜಪಾನ್‌ನ ಕುಮಮೊಟೊ ಪ್ರಾಂತ್ಯದಲ್ಲಿ ಮಂಗಳವಾರ 7.1 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (JMA) ತಿಳಿಸಿದೆ.
ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ
ಭೂಕಂಪನದ ತೀವ್ರತೆಯ ಬೆನ್ನಲ್ಲೇ ಜಪಾನ್ ಸರ್ಕಾರ ಕರಾವಳಿ ಭಾಗಗಳಲ್ಲಿ ಸುನಾಮಿ ಎಚ್ಚರಿಕೆ ನೀಡಿದೆ. ಸುಮಾರು 1 ಮೀಟರ್‌ವರೆಗೆ (3.28 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ತೀರಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಮತ್ತು ಸ್ಥಳೀಯ ಆಡಳಿತದ ಸ್ಥಳಾಂತರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
7 ಪ್ರಾಂತ್ಯಗಳಲ್ಲಿ ತುರ್ತು ಎಚ್ಚರಿಕೆ ರವಾನೆ
ಜಪಾನ್‌ನ ದಕ್ಷಿಣ ಕಾಯಶು ದ್ವೀಪದಲ್ಲಿರುವ ಕುಮಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಮತ್ತು ಮಿಯಾಝಾಕಿ ಸೇರಿದಂತೆ ಒಟ್ಟು 7 ಪ್ರಾಂತ್ಯಗಳಿಗೆ ಜಪಾನ್ ಸರ್ಕಾರವು 'ತುರ್ತು ಭೂಕಂಪನ ಎಚ್ಚರಿಕೆ' ಜಾರಿಗೊಳಿಸಿದೆ. ಸ್ಥಳೀಯ ಆಡಳಿತಗಳು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಿವೆ.

