Jalandhar Scooter Blast| ಜಲಂಧರ್ ಬಿಎಸ್‌ಎಫ್ ಕಚೇರಿ ಬಳಿ ಸ್ಕೂಟರ್ ಸ್ಫೋಟ: ತನಿಖೆ ಚುರುಕು
x

ಜಲಂಧರ್‌ನ ಬಿಎಸ್‌ಎಫ್ ಪ್ರಧಾನ ಕಚೇರಿ ಬಳಿ ಡೆಲಿವರಿ ಸ್ಕೂಟರ್ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗಿದೆ.

Jalandhar Scooter Blast| ಜಲಂಧರ್ ಬಿಎಸ್‌ಎಫ್ ಕಚೇರಿ ಬಳಿ ಸ್ಕೂಟರ್ ಸ್ಫೋಟ: ತನಿಖೆ ಚುರುಕು

ಜಲಂಧರ್‌ನ ಬಿಎಸ್‌ಎಫ್ ಪ್ರಧಾನ ಕಚೇರಿ ಬಳಿ ಡೆಲಿವರಿ ಸ್ಕೂಟರ್ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.


Click the Play button to hear this message in audio format

ಪಂಜಾಬ್‌ನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಪ್ರತ್ಯೇಕ ಕಡೆಗಳಲ್ಲಿ ಸ್ಫೋಟ ಸಂಭವಿಸಿದ್ದು, ಇಡೀ ರಾಜ್ಯಾದ್ಯಂತ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೊದಲು ಜಲಂಧರ್‌ನಲ್ಲಿರುವ ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ಪ್ರಧಾನ ಕಚೇರಿಯ ಬಳಿ ಸ್ಫೋಟ ಸಂಭವಿಸಿದ್ದು, ಅದರ ಬೆನ್ನಲ್ಲೇ ಅಮೃತಸರ ಕಂಟೋನ್ಮೆಂಟ್ ಪ್ರದೇಶದಲ್ಲೂ ಮತ್ತೊಂದು ಸ್ಫೋಟ ವರದಿಯಾಗಿದೆ. ಈ ಘಟನೆಗಳಿಂದಾಗಿ ಭದ್ರತಾ ಸಂಸ್ಥೆಗಳು ತೀವ್ರ ಕಟ್ಟೆಚ್ಚರ ವಹಿಸಿದ್ದು, ಪಂಜಾಬ್ ಪೊಲೀಸರು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.

ಜಲಂಧರ್‌ನ ಬಿಎಸ್‌ಎಫ್ ಚೌಕ್ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಒಂದರಲ್ಲಿ ಮೊದಲು ಸ್ಫೋಟ ಸಂಭವಿಸಿದೆ. ಆರಂಭದಲ್ಲಿ ಇದು ವಾಹನಕ್ಕೆ ಬೆಂಕಿ ಬಿದ್ದ ಘಟನೆ ಎಂದು ಭಾವಿಸಲಾಗಿತ್ತಾದರೂ, ನಂತರದ ತನಿಖೆಯಲ್ಲಿ ಇದು ಗ್ರೆನೇಡ್ ದಾಳಿ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಕೃತ್ಯದ ಹೊಣೆಯನ್ನು ಖಲಿಸ್ತಾನ್ ಲಿಬರೇಶನ್ ಆರ್ಮಿ ಹೊತ್ತುಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸ್ಫೋಟದ ಬೆನ್ನಲ್ಲೇ ಅಮೃತಸರ ಕಂಟೋನ್ಮೆಂಟ್ ಪ್ರದೇಶದಲ್ಲೂ ಮತ್ತೊಂದು ಸ್ಫೋಟದ ಸದ್ದು ಕೇಳಿಬಂದಿದ್ದು, ಜನರಲ್ಲಿ ಭಯ ಭೀತಿ ಮೂಡಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಿಎಸ್‌ಎಫ್ ಚೌಕ್‌ನಂತಹ ಜನನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಮಟ್ಟದ ಶಬ್ದ ಕೇಳಿಬಂದಿದ್ದು, ನೋಡನೋಡುತ್ತಿದ್ದಂತೆ ಸ್ಕೂಟರ್ ಧಗಧಗನೆ ಉರಿಯಲಾರಂಭಿಸಿತು. ಸ್ಫೋಟದ ತೀವ್ರತೆಗೆ ಗಾಬರಿಗೊಂಡ ಸಾರ್ವಜನಿಕರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಸ್ಥಳಕ್ಕೆ ವಿಧಿವಿಜ್ಞಾನ ತಂಡಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು, ಸ್ಫೋಟಕ್ಕೆ ಬಳಸಲಾದ ವಸ್ತುಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಗಡಿ ಭಾಗದ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಕೈವಾಡವಿರುವ ಬಗ್ಗೆ ತನಿಖೆ ತೀವ್ರಗೊಂಡಿದೆ. ಸಾರ್ವಜನಿಕರು ಆತಂಕಪಡಬಾರದು ಮತ್ತು ಸಂಶಯಾಸ್ಪದ ವಸ್ತುಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಸ್ಫೋಟಗಳಲ್ಲಿ ಇದುವರೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಸ್ಫೋಟ ಸಂಭವಿಸಿದ ತಕ್ಷಣ ಜನರು ಸುರಕ್ಷಿತ ಸ್ಥಳಗಳಿಗಾಗಿ ಓಡುತ್ತಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಜಲಂಧರ್ ಪೊಲೀಸ್ ಕಮಿಷನರ್ ಧನ್‌ಪ್ರೀತ್ ಕೌರ್ ಅವರು ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಪಾರ್ಕ್ ಮಾಡಲಾಗಿದ್ದ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಖಚಿತವಾಗಿದ್ದು, ಸ್ಕೂಟರ್ ಚಾಲಕ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸ್ಕೂಟರ್ ಚಾಲಕನನ್ನು 22ವರ್ಷದ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಆತ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಪಾರ್ಸೆಲ್ ನೀಡಲು ಈ ಪ್ರದೇಶಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಇನ್ನು ಈ ಘಟನೆಯು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದ್ದು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಗಡಿ ರಾಜ್ಯವಾದ ಪಂಜಾಬ್‌ನಲ್ಲಿ ಇಂತಹ ಘಟನೆಗಳು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯನ್ನು ಎತ್ತುತ್ತವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Read More
Next Story