
ರಾಧಾರಾಮನ್ ದಾಸ್
ಇಸ್ಕಾನ್ ನಿಯಮಾವಳಿ ಉಲ್ಲಂಘನೆ: ಕೋಲ್ಕತ್ತಾ ಉಪಾಧ್ಯಕ್ಷ ರಾಧಾರಾಮನ್ ದಾಸ್‌ಗೆ ಕಡ್ಡಾಯ ರಜೆ
ಪಶ್ಚಿಮ ಬಂಗಾಳದ ಸಾಮಾಜಿಕ-ರಾಜಕೀಯ ವಲಯಗಳಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ರಾಧಾರಾಮನ್ ದಾಸ್, ದೀಘಾದಲ್ಲಿ ಜಗನ್ನಾಥ ದೇವಾಲಯದ ಭವ್ಯ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘ (ಇಸ್ಕಾನ್) ತನ್ನ ಕೋಲ್ಕತ್ತಾ ಘಟಕದ ಉಪಾಧ್ಯಕ್ಷ ರಾಧಾರಾಮನ್ ದಾಸ್ ಅವರಿಗೆ ಶಾಕ್ ನೀಡಿದೆ. ಸಂಸ್ಥೆಯ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದ್ದು, ಮಾಧ್ಯಮಗಳು, ಸರ್ಕಾರಿ ಅಧಿಕಾರಿಗಳು ಅಥವಾ ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ಸಂಸ್ಥೆಯನ್ನು ಪ್ರತಿನಿಧಿಸದಂತೆ ಹಾಗೂ ಯಾವುದೇ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಇತ್ತೀಚೆಗೆ ಕೋಲ್ಕತ್ತಾದ ಶಾಲಾ ಮಧ್ಯಾಹ್ನದ ಊಟದ ಪೈಲಟ್ ಯೋಜನೆಗೆ ಸಂಬಂಧಿಸಿದಂತೆ ಇಸ್ಕಾನ್‌ನ ಕಟ್ಟುನಿಟ್ಟಾದ ಸಸ್ಯಾಹಾರಿ ಮೆನುವನ್ನು (ಪನೀರ್, ರಾಜ್ಮಾ ಮತ್ತು ಸೋಯಾ ತುಂಡುಗಳು) ಸಮರ್ಥಿಸಿಕೊಂಡು ರಾಧಾರಾಮನ್ ದಾಸ್ ಅವರು ಸುದ್ದಿಯಲ್ಲಿದ್ದರು. ಈ ವಿವಾದದ ಬೆನ್ನಲ್ಲೇ ಇಸ್ಕಾನ್ ಈ ಮಹತ್ವದ ಕ್ರಮ ಕೈಗೊಂಡಿದೆ.
ಏಕಪಕ್ಷೀಯ ಕ್ರಮಕ್ಕೆ ಇಸ್ಕಾನ್ ಗರಂ
"ದಾಸ್ ಅವರು ಸಂಸ್ಥೆಯ ಕಾರ್ಯವಿಧಾನಗಳನ್ನು ಅನುಸರಿಸುವಂತೆ ಕಳೆದ ಹಲವು ವರ್ಷಗಳಿಂದ ಹಲವಾರು ಬಾರಿ ವಿನಂತಿಸಲಾಗಿತ್ತು" ಎಂದು ಇಸ್ಕಾನ್ ತಿಳಿಸಿದೆ. ಅವರ ಕೆಲವು ಏಕಪಕ್ಷೀಯ ನಿರ್ಧಾರಗಳು ಸಂಸ್ಥೆಯ ಅಧಿಕೃತ ನಿಲುವಿಗೆ ವಿರುದ್ಧವಾಗಿದ್ದವು ಮತ್ತು ಇಸ್ಕಾನ್‌ನ ಇತರ ಸದಸ್ಯರ ಸುರಕ್ಷತೆ ಹಾಗೂ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವಂತಿದ್ದವು ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಜಾಗತಿಕ ಸಂಸ್ಥೆಯಾಗಿರುವ ಇಸ್ಕಾನ್ 100ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ಸಾಂಸ್ಕೃತಿಕ, ಭಾಷಾ ಮತ್ತು ಸಾಮಾಜಿಕ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ಎಲ್ಲಾ ಸದಸ್ಯರು ನಿಗದಿತ ನಿಯಮಗಳು, ಮಾನದಂಡಗಳು ಮತ್ತು ನೀತಿ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ ಎಂದು ಭಾನುವಾರ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಈ ರಜೆಯ ಅವಧಿಯಲ್ಲಿ ದಾಸ್ ಅವರು ತಮ್ಮ ನಡವಳಿಕೆಯನ್ನು ಆತ್ಮಾವಲೋಕನ ಮಾಡಿಕೊಂಡು ತಿದ್ದುಪಡಿ ಮಾಡಿಕೊಳ್ಳಲಿದ್ದಾರೆ ಎಂದು ಇಸ್ಕಾನ್ ಆಶಿಸಿದೆ.
ಇಸ್ಕಾನ್ ಬರೆದಿರುವ ಪತ್ರ
ಕ್ರಮಕ್ಕೆ ಪ್ರಮುಖ 5 ಕಾರಣಗಳು!
ಪಶ್ಚಿಮ ಬಂಗಾಳದ ಸಾಮಾಜಿಕ-ರಾಜಕೀಯ ವಲಯಗಳಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ರಾಧಾರಾಮನ್ ದಾಸ್, ದೀಘಾದಲ್ಲಿ ಜಗನ್ನಾಥ ದೇವಾಲಯದ ಭವ್ಯ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಸ್ಕಾನ್ ಸಂಸ್ಥೆ ಕೈಗೊಂಡಿರುವ ಈ ಶಿಸ್ತು ಕ್ರಮವನ್ನು ದಾಸ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಧೃಡಪಡಿಸಿದ್ದು, "ಅಧಿಕಾರಿಗಳ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಮತ್ತು ನಿರ್ದೇಶನಗಳನ್ನು ಪಾಲಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಇಸ್ಕಾನ್ ತನ್ನ ವಿರುದ್ಧ ಕ್ರಮ ಕೈಗೊಳ್ಳಲು ನೀಡಿದ ಐದು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ಸಂಸ್ಥೆಯ ಚೌಕಟ್ಟು ಮೀರಿದ್ದೇ ಪ್ರಮುಖ ಕಾರಣ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕಿರುಕುಳದ ಕುರಿತು ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳೊಂದಿಗೆ ಮಾತನಾಡಿದ್ದು ಹಾಗೂ ಅಲ್ಲಿನ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ಪ್ರಭು ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದು. "ಇಸ್ಕಾನ್ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತದೆ" ಎಂದು ಆರೋಪಿಸಿದ್ದ ಬಿಜೆಪಿ ನಾಯಕಿ ಮೇನಕಾ ಗಾಂಧಿ ವಿರುದ್ಧ ಕಾನೂನು ನೋಟಿಸ್ ಜಾರಿಗೊಳಿಸಿದ್ದು. ಇಸ್ಕಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಾಸ್ಯನಟಿ ಸುರ್ಲೀನ್ ಕೌರ್ ವಿರುದ್ಧ ಸೈಬರ್ ದೂರು ದಾಖಲಿಸಿದ್ದು. ಸನಾತನ ಧರ್ಮದ ವಿಷಯಗಳ ಕುರಿತು ಸಾರ್ವಜನಿಕವಾಗಿ ಹಲವು ಹೇಳಿಕೆಗಳನ್ನು ನೀಡಿದ್ದು. 1976ರ ನ್ಯೂಯಾರ್ಕ್ ರಥಯಾತ್ರೆಯೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಬಂಧದ ಕುರಿತಾದ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು. ಸಂಸ್ಥೆಯ ಚೌಕಟ್ಟನ್ನು ಮೀರಿ ವೈಯಕ್ತಿಕವಾಗಿ ಮತ್ತು ಏಕಪಕ್ಷೀಯವಾಗಿ ಇಂತಹ ಸೂಕ್ಷ್ಮ ವಿಷಯಗಳಲ್ಲಿ ಭಾಗಿಯಾಗಿದ್ದೇ ರಾಧಾರಾಮನ್ ದಾಸ್ ಅವರ ವಿರುದ್ಧದ ಇಸ್ಕಾನ್ ಕ್ರಮಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

