ಅಮೆರಿಕ ದಾಳಿಗೆ ಪ್ರತಿಕಾರ: ಬಹ್ರೇನ್, ಕುವೈತ್ ಮೇಲೆ ಇರಾನ್ ದಾಳಿ
x

ಬಹ್ರೇನ್, ಕುವೈತ್ ಮೇಲೆ ಇರಾನ್ ದಾಳಿ

ಅಮೆರಿಕ ದಾಳಿಗೆ ಪ್ರತಿಕಾರ: ಬಹ್ರೇನ್, ಕುವೈತ್ ಮೇಲೆ ಇರಾನ್ ದಾಳಿ

ಅಮೆರಿಕದ ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಇರಾನ್ ಭಾನುವಾರ ಬಹ್ರೇನ್ ಮತ್ತು ಕುವೈತ್ ದೇಶಗಳ ಮೇಲೆ ಭೀಕರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದ್ದು, ಶಾಂತಿ ಮಾತುಕತೆ ಸ್ಥಗಿತದ ಎಚ್ಚರಿಕೆ ನೀಡಿದೆ.


Click the Play button to hear this message in audio format

ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕದ ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಇರಾನ್ ಭಾನುವಾರ ಬಹ್ರೇನ್ ಮತ್ತು ಕುವೈತ್ ದೇಶಗಳನ್ನು ಗುರಿಯಾಗಿಸಿಕೊಂಡು ಭೀಕರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಅಮೆರಿಕ ತನ್ನ ದಾಳಿಯನ್ನು ಮುಂದುವರಿಸಿದರೆ, ಯುದ್ಧವನ್ನು ಕೊನೆಗೊಳಿಸಲು ನಡೆಯುತ್ತಿರುವ ಶಾಂತಿ ಮಾತುಕತೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಇರಾನ್ ಎಚ್ಚರಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಈ ದಾಳಿಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ವಿಶ್ವದ ಪ್ರಮುಖ ತೈಲ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್‌ನ ಮೇಲ್ವಿಚಾರಣೆಯಿಲ್ಲದೆ ಪುನಃ ತೆರೆಯಲು ನಡೆಯುತ್ತಿರುವ ಜಾಗತಿಕ ಪ್ರಯತ್ನಗಳೇ ಈ ತೀವ್ರ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ. ಜಲಸಂಧಿಯ ಮೇಲಿನ ಸಾರ್ವಭೌಮತ್ವ ತನಗೇ ಸೇರಬೇಕೆಂದು ಇರಾನ್ ಹಠ ಹಿಡಿದಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಬೇಡಿ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅಮೆರಿಕಗೆ ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಇರಾನ್‌ನ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿ ಮಾಡಿದೆ. ಆದರೆ ಬಹ್ರೇನ್‌ನಲ್ಲಿ ನಡೆದ ದಾಳಿಯಿಂದಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ವಸತಿ ಕಟ್ಟಡವೊಂದು ಜಖಂಗೊಂಡಿದೆ.

ಇರಾನ್‌ನ ಈ ಉದ್ಧಟತನದ ನಡೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇರಾನ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಟ್ರಂಪ್, ಅಮೆರಿಕ ಮಿಲಿಟರಿ ಶಕ್ತಿಯ ಮೂಲಕ ಈ ಸಮಸ್ಯೆಯನ್ನು ಶಾಶ್ವತವಾಗಿ ಕೊನೆಗೊಳಿಸಬೇಕಾದ ಸಂದರ್ಭ ಬರಬಹುದು ಮತ್ತು ಹಾಗೆ ಸಂಭವಿಸಿದರೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಎಂಬ ದೇಶವೇ ಜಗತ್ತಿನ ಭೂಪಟದಿಂದ ನಾಶವಾಗಲಿದೆ ಎಂದು ಕಟು ಶಬ್ದಗಳಲ್ಲಿ ಎಚ್ಚರಿಸಿದ್ದಾರೆ.

ಸದ್ಯ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ಮಂಗಳವಾರ ಮಾತುಕತೆ ಪುನರಾರಂಭಗೊಳ್ಳಬೇಕಾಗಿದ್ದು, ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಮಾತುಕತೆಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

Read More
Next Story